ಹೊಸದಿಲ್ಲಿ : 2019-20ರ ಸಾಲಿನ ಮಹಾರಾಷ್ಟ್ರದ ಪಿಜಿ ಮೆಡಿಕಲ್ ಕೋರ್ಸುಗಳಿಗೆ ಶೇ.10 EWS (ಆರ್ಥಿಕ ದುರ್ಬಲರ ವರ್ಗ) ಕೋಟಾ ಅನ್ವಯಿಸುವಂತಿಲ್ಲ ; ಏಕೆಂದರೆ ಈ ಕೋರ್ಸುಗಳ ಸೇರ್ಪಡೆ ಪ್ರಕ್ರಿಯೆಯು ಈ ಕೋಟಾ ಜಾರಿಗೆ ಬರುವ ಮೊದಲೇ ಆರಂಭವಾಗಿತ್ತು ಎಂದು ಸುಪ್ರೀಂ ಕೋರ್ಟ್ ಇಂದು ಗುರುವಾರ ಹೇಳಿದೆ.
ಇಷ್ಟು ಮಾತ್ರವಲ್ಲದೆ ಭಾರತೀಯ ಮೆಡಿಕಲ್ ಕೌನ್ಸಿಲ್ ಹೆಚ್ಚುವರಿ ಸೀಟುಗಳನ್ನು ಸೃಷ್ಟಿಸುವ ತನಕ ಇತರರಿಗೆ ನಷ್ಟವಾಗುವ ರೀತಿಯಲ್ಲಿ ಶೇ.10 EWS ಕೋಟಾವನ್ನು ಮಂಜೂರು ಮಾಡಲಾಗದು ಎಂದು ವರಿಷ್ಠ ನ್ಯಾಯಮೂರ್ತಿ ರಂಜನ್ ಗೊಗೋಯ್ ಮತ್ತು ಜಸ್ಟಿಸ್ ಅನಿರುದ್ಧ ಬೋಸ್ ಅವರನ್ನು ಒಳಗೊಂಡ ಪೀಠ ಹೇಳಿತು.
2019-20ರ ಸಾಲಿನ ಮಹಾರಾಷ್ಟ್ರದ ಪಿಜಿ ಮೆಡಿಕಲ್ ಕೋರ್ಸುಗಳಿಗೆ ಸೇರ್ಪಡೆ ಪ್ರಕ್ರಿಯೆಯು 2018ರ ನವೆಂಬರ್‌ನಲ್ಲೇ ಆರಂಭವಾಗಿತ್ತು; ಆದರೆ ಶೇ.10 EWS ಕೋಟಾ ದ 103ನೇ ಸಂವಿಧಾನ ತಿದ್ದುಪಡಿಯು ಈ ವರ್ಷ ಜನವರಿಯಲ್ಲಿ ಪಾಸಾಯಿತು ಎಂದು ಪೀಠ ಹೇಳಿತು.
ಮಹಾರಾಷ್ಟ್ರ ಸರಕಾರ ಶೇ.10 EWS ಕೋಟಾವನ್ನು ಪಿಜಿ ಮೆಡಿಕಲ್ ಕೋರ್ಸುಗಳಿಗಾಗಿ ಈ ವರ್ಷ ಮಾರ್ಚ್ ತಿಂಗಳಲ್ಲಿ ಅನುಷ್ಠಾನಕ್ಕೆ ತಂದಿತು ಎಂದು ಪೀಠ ಹೇಳಿತು.