Advertisement

ಪ್ರತಿ ತಾಲೂಕಿಗೆ 10 ದಿನ ಹೇಮೆ ನೀರು

10:55 AM Aug 14, 2020 | Suhan S |

ತುಮಕೂರು: ಜಿಲ್ಲೆಗೆ ಹರಿದು ಬರುವ ಹೇಮಾವತಿ ನೀರಿನಿಂದ ಎಲ್ಲಾ ಕೆರೆಗಳನ್ನು ತುಂಬಿಸುವ ನಿಟ್ಟಿನಲ್ಲಿ ಹೇಮಾವತಿ ನಾಲಾ ವಲಯದ ಪ್ರತಿ ತಾಲೂಕಿಗೆ 10 ದಿನ ನೀರು ಹರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಹೇಮಾವತಿ ನಾಲೆಯಿಂದ ಹರಿಸಲಾಗುವ ನೀರನ್ನು ಸಮಪರ್ಕವಾಗಿ ಬಳಕೆ ಮಾಡಿಕೊಳ್ಳುವ ಕುರಿತು ನಡೆದ ವಿಶೇಷ ಸಭೆಯಲ್ಲಿ ಮಾತನಾಡಿ, ನಾಲೆಯಿಂದ ಹರಿಯುವ ನೀರನ್ನು ಮೊದಲ ಹಂತದಲ್ಲಿ ಜಿಲ್ಲೆಯ ಶಿರಾ ಹಾಗೂ ಕುಣಿಗಲ್‌ ತಾಲೂಕಿಗೆ ಹರಿಸಲಾಗುತ್ತಿದ್ದು, ಜಿಲ್ಲೆಯ ನಾಲಾ ವ್ಯಾಪ್ತಿಯ ತಾಲೂಕಿಗಳಿಗೆ ತಲಾ 10 ದಿನಗಳ ಕಾಲ ನೀರು ಹರಿಸಲಾಗುವುದು ಎಂದರು.

10 ದಿನ ನೀರು: ಹೇಮಾವತಿಯ ಗೊರೂರು ಡ್ಯಾಂನಲ್ಲಿ 33 ಟಿಎಂಸಿ ನೀರು ಸಂಗ್ರಹವಿದ್ದು, ಕಳೆದ ಬಾರಿ ಕಡಿಮೆ ನೀರು ಹರಿದಿದ್ದ ಶಿರಾ ಹಾಗೂ ಕುಣಿಗಲ್‌ ತಾಲೂಕಿಗೆ ಈಗ ಮೊದಲ ಹಂತದಲ್ಲಿ ನೀರು ಹರಿಸಲಾಗುತ್ತಿದೆ. ತಾಲೂಕಿಗೆ ಪ್ರವೇಶವಾದ ದಿನದಿಂದ ಲೆಕ್ಕ ಹಾಕಿ 10 ದಿನಗಳ ಕಾಲ ನೀರು ಹರಿಸಲಾಗುವುದು ಎಂದು ತಿಳಿಸಿದರು.

ವೇಳಾಪಟ್ಟಿ ತಯಾರಿಸಿ: ಪ್ರತಿ ತಾಲೂಕುವಾರು ಹಂಚಿಕೆಯಾಗಿರುವ ನೀರಿಗೆ ಅನು ಗುಣವಾಗಿ ಜ.31ರೊಳಗೆ ಸಮರ್ಪಕವಾಗಿ ಹರಿಸಲಾಗುವುದು. ಇದಕ್ಕೆ ಸಂಬಂಧಪಟ್ಟಂತೆ ವೇಳಾಪಟ್ಟಿ ತಯಾರಿಸುವಂತೆ ಹೇಮಾವತಿ ಮುಖ್ಯಕಾರ್ಯಪಾಲಕ ಎಂಜಿನಿಯರ್‌ ಅವರಿಗೆ ಸೂಚಿಸಿದರು. ಅಲ್ಲದೇ ಡ್ಯಾಂನಲ್ಲಿ ನೀರು ಸಂಗ್ರಹವಾದರೆ 2ನೇ ಬಾರಿ ನೀರು ಹರಿಸಲಾಗುವುದು ಎಂದು ಹೇಳಿದರು.

ಎಂಜಿನಿಯರ್‌ಗೆ ಸೂಚನೆ: ತುಮಕೂರು ಗ್ರಾಮಾಂತರದಲ್ಲಿ ನೀರು ಹರಿಸಿದರು ಕೆರೆಗಳು ಸಮರ್ಪಕವಾಗಿ ಭರ್ತಿಯಾಗುತ್ತಿಲ್ಲ. ಮೋಟಾರ್‌ ಪಂಪ್‌ಸೆಟ್‌ಗಳು ದುರಸ್ತಿಯಲ್ಲಿವೆ ಎಂದು ಶಾಸಕ ಡಿ.ಸಿ.ಗೌರಿಶಂಕರ್‌ ಅವರು ಸಚಿವರ ಗಮನಕ್ಕೆ ತಂದಾಗ, ಗ್ರಾಮಾಂತರದಲ್ಲಿ 15 ದಿನದೊಳಗೆ ಪಂಪ್‌ ಸೆಟ್‌ ರಿಪೇರಿ ಮಾಡಿಸಿ, ನೀರು ಹರಿಯು ವಂತೆ ಮಾಡಿ ಎಂದು ಎಂಜಿನಿಯರ್‌ಗಳಿಗೆ ಸೂಚನೆ ನೀಡಿದರು.

Advertisement

ವ್ಯರ್ಥವಾಗದಂತೆ ನೀರು ಬಳಸೋಣ: ಸಂಸದ ಜಿ.ಎಸ್‌ ಬಸವರಾಜು ಮಾತನಾಡಿ, ಜಿಲ್ಲೆಯಲ್ಲಿ ಮೊದಲ ಬಾರಿಗೆ ಕಳೆದ ಸಾಲಿನಲ್ಲಿ 18.5 ಟಿಎಂಸಿಯಿಂದ 21 ಟಿಎಂಸಿ ನೀರನ್ನು ತುಮಕೂರು ನಾಲೆಯಿಂದ ಜಿಲ್ಲೆ ಬಳಸಿ ಕೊಂಡಿದೆ. ಗೊರೂರು ಡ್ಯಾಂನಲ್ಲಿ ನೀರು ಸಂಗ್ರಹವಾಗಿದ್ದು, ನೀರು ವ್ಯರ್ಥವಾಗದಂತೆ ಜಿಲ್ಲೆಯಲ್ಲಿ ಬಳಸಿಕೊಳ್ಳೋಣ ಎಂದು ತಿಳಿಸಿದರು.

ಸಂಸದ ಡಿ.ಕೆ ಸುರೇಶ್‌ ಮಾತನಾಡಿ, ಮೊದಲ ಹಂತದಲ್ಲಿ ಜಿಲ್ಲೆಯ ಹೇಮಾವತಿ ನಾಲೆಯಿಂದ ತಾಲೂಕುವಾರು ಹಂಚಿಕೆಯಾಗಿರುವ ನೀರನ್ನು ಸಮರ್ಪಕವಾಗಿ ಹರಿಸಿ ಎಲೆಕ್ಟ್ರಾನಿಕ್‌ ಗೇಜ್‌ಗಳನ್ನು ಅಳವಡಿಸಿ ಎಂದರು.

ಸಂಸದ ನಾರಾಯಣ ಸ್ವಾಮಿ, ಶಾಸಕರಾದ ಬಿ.ಸಿ. ನಾಗೇಶ್‌, ಜಿ.ಬಿ. ಜ್ಯೋತಿ ಗಣೇಶ್‌, ಡಿ.ಸಿ. ಗೌರಿಶಂಕರ್‌, ಡಾ. ರಂಗನಾಥ್‌, ಜಯರಾಂ, ವೀರಭದ್ರಯ್ಯ, ವಿಧಾನ ಪರಿಷತ್‌ ಶಾಸಕ ತಿಪ್ಪೇಸ್ವಾಮಿ, ಎಸ್ಪಿ ಡಾ. ಕೋನವಂಸಿಕೃಷ್ಣ, ಜಿಪಂ ಸಿಇಒ ಶುಭಾ ಕಲ್ಯಾಣ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next