ಸಂಭಾಲ್ : ಮದುವೆಯಾದ ಹತ್ತೇ ದಿನಗಳ ಒಳಗೆ ಪತ್ನಿಗೆ “ತ್ರಿವಳಿ ತಲಾಕ್’ ನೀಡಿದ ಪತಿಗೆ ಉತ್ತರ ಪ್ರದೇಶದ ಮುಸ್ಲಿಂ ಸಮುದಾಯ ಪಂಚಾಯತ್ ತ್ರಿವಳಿ ದಂಡ ಹೇರಿದೆ; ಆ ಮೂಲಕ ಅದು ಹೊಸ ನಿದರ್ಶನವೊಂದನ್ನು ಹುಟ್ಟುಹಾಕಿದೆ.
ಪತ್ನಿಗೆ ತ್ರಿವಳಿ ತಲಾಕ್ ನೀಡಿದ್ದ ಆ ಪತಿರಾಯನಿಗೆ ಸಮುದಾಯ ಪಂಚಾಯತ್, 2 ಲಕ್ಷ ರೂ. ದಂಡ ವಿಧಿಸಿ, ಪತ್ನಿಯಿಂದ ಪಡೆದುಕೊಂಡಿದ್ದ ವರದಕ್ಷಿಣೆಯನ್ನು ಮರಳಿಸಬೇಕು ಮಾತ್ರವಲ್ಲದೆ ಆಕೆಗೆ 60,000 ರೂ. ಮೆಹರ್ ನೀಡಬೇಕು ಎಂದೂ ಆದೇಶಿಸಿದೆ.
ಸಂಭಾಲ್‌ನ ರೈಸಾತಿ ಪ್ರದೇಶದಲ್ಲಿನ ಮದ್ರಸಾ ಖಲೀಲ್ ಉಲ್ ಉಲೂಮ್ ನಲ್ಲಿ ಸಭೆ ಸೇರಿದ್ದ ಈ ಸಮುದಾಯ ಪಂಚಾಯತ್‌ನಲ್ಲಿ 52 ಗ್ರಾಮಗಳ ಸದಸ್ಯರು ಭಾಗವಹಿಸಿದ್ದರು.
45ರ ಹರೆಯದ ಪುರುಷ 22ರ ಹರೆಯದ ಮಹಿಳೆಯನ್ನು ಕೇವಲ ಹತ್ತು ದಿನಗಳ ಹಿಂದೆ ಮದುವೆಯಾಗಿದ್ದ. ಆದರೆ ಅಷ್ಟರೊಳಗಾಗಿ ಆತ ಯಾವುದೋ ಕಾರಣಕ್ಕೆ ಪತ್ನಿಯೊಂದಿಗೆ ಜಗಳ ತೆಗೆದಿದ್ದ. ಸಿಟ್ಟಿನ ಆವೇಶದಲ್ಲಿ ಪತ್ನಿಗೆ ತ್ರಿವಳಿ ತಲಾಕ್ ನೀಡಿದ್ದ; ಮಾತ್ರವಲ್ಲದೆ ಈ ಕೂಡಲೇ ತವರಿಗೆ ಹೋಗುವಂತೆ ಆಜ್ಞಾಪಿಸಿದ್ದ !
ತ್ರಿವಳಿ ತಲಾಕ್ ಒಂದು ಅನಿಷ್ಟ ಪದ್ಧತಿಯಾಗಿದ್ದು ಅದನ್ನು ನಿಷೇಧಿಸಬೇಕೆಂದು ಕೋರುವ ಅರ್ಜಿಗಳ ಮೇಲಿನ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕಳೆದ ಮೇ 18ರಂದು ಮುಗಿಸಿದ್ದು ತೀರ್ಪನ್ನು ಕಾದಿರಿಸಿದೆ. ಆದರೆ ಇಲ್ಲಿನ ಸಮುದಾಯ ಪಂಚಾಯತ್, ತ್ರಿವಳಿ ತಲಾಕ್ ನೀಡಿದ ಪತಿರಾಯನಿಗೆ ತ್ರಿವಳಿ ದಂಡ ವಿಧಿಸುವ ಮೂಲಕ ಹೊಸ ನಿದರ್ಶನವೊಂದನ್ನು ಹುಟ್ಟು ಹಾಕಿರುವುದು ಗಮನಾರ್ಹವಾಗಿದೆ.