ಮಸ್ಕಿ: ಸರಕಾರದಿಂದ ನಗರೋತ್ಥಾನ ಯೋಜನೆಯಡಿ ಮಸ್ಕಿ ಪುರಸಭೆಗೆ 10 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಹೊಸ ಸದಸ್ಯರು ಅನುದಾನವನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡು ಮಸ್ಕಿಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು.
ಶುಕ್ರವಾರ ಪಟ್ಟಣದ ಗಾಂಧಿ ನಗರದ 22, 23ನೇ ವಾರ್ಡ್ ನಲ್ಲಿ ಅಲ್ಲಿನ ಸದಸ್ಯರು ಸ್ವಂತ ವೆಚ್ಚದಲ್ಲಿ ವಿನೂತನವಾಗಿ ಆರಂಭಿಸಿದ ಜನಸ್ನೇಹಿ ಸೇವಾ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಈ ಹಿಂದೆಯೂ ಬಿಜೆಪಿ ವಶದಲ್ಲಿದ್ದ ಮಸ್ಕಿ ಪುರಸಭೆ ವ್ಯಾಪ್ತಿಯಲ್ಲಿ ಉತ್ತಮ ಜನಪರ ಕೆಲಸ ಮಾಡಿದ್ದರಿಂದ ಜನರು ಮತ್ತೊಮ್ಮೆ ಬಿಜೆಪಿಗೆ ಬೆಂಬಲ ನೀಡಿ ಹೆಚ್ಚಿನ ಸಂಖ್ಯೆಯ ಸದಸ್ಯರನ್ನು ಗೆಲ್ಲಿಸಿದ್ದಾರೆ. ಹೀಗಾಗಿ ಹೊಸದಾಗಿ ಗೆದ್ದ ಎಲ್ಲ ಜನಪ್ರತಿನಿಧಿಗಳು ಜನಸ್ನೇಹಿಯಾಗಿದ್ದರೆ ಮಾತ್ರ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ನೂತನವಾಗಿ ಆಯ್ಕೆಯಾಗಿರುವ ಗಾಂಧಿ ನಗರ ವಾರ್ಡ್ 22, 23ರ ಸದಸ್ಯರು ತಮ್ಮ ವಾರ್ಡ್‌ನ ಜನರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಲು ಸೇವಾ ಕೇಂದ್ರ ಆರಂಭಿಸಿದ್ದು, ಮಾದರಿಯಾಗಿದೆ ಎಂದರು.
ಪ್ರತಿ ವಾರ್ಡ್ ಸದಸ್ಯರು ಸಹ ಇಂತಹ ಕೇಂದ್ರಗಳನ್ನು ತೆರೆಯಬೇಕು ಎಂದ ಪ್ರತಾಪಗೌಡ ಪಾಟೀಲ್, ಗಾಂಧಿ ನಗರದ ನಾಲ್ಕು ವಾರ್ಡ್‌ಗಳಲ್ಲಿ ಕುಡಿವ ನೀರು, ಸ್ವತ್ಛತೆ ಹಾಗೂ ಚರಂಡಿ ನಿರ್ಮಾಣಕ್ಕೆ ಒತ್ತು ನೀಡಬೇಕು. ಮನೆ ಇಲ್ಲದವರನ್ನು ಗುರುತಿಸಿ ಪ್ರಾಮಾಣಿಕವಾಗಿ ಮನೆ ನೀಡಬೇಕು ಎಂದು ಹೇಳಿದರು.
ಮಹಾದೇವಪ್ಪಗೌಡ ಪೊಲೀಸ್ ಪಾಟೀಲ್, ಡಾ| ಶಿವಶರಣಪ್ಪ ಇತ್ಲಿ, ಡಾ| ಬಿ.ಎಚ್. ದಿವಟರ್, ದೊಡ್ಡಪ್ಪ ಕಡಬೂರು, ಡಾ| ಪಂಚಾಕ್ಷರಯ್ಯ ಕಂಬಾಳಿಮಠ, ಡಾ| ನಾಗನಗೌಡ, ಗವಿಸಿದ್ದಪ್ಪ ಸಾಹುಕಾರ, ಯಲ್ಲೋಜಿರಾವ್ ಕೊರೆಕಾರ, ಮಮತಾ ಡಾ| ಸಂತೋಷ, ಶಾಕೀರ್ ಮಸೂದಪಾಷಾ ಇದ್ದರು.