ಶ್ರೀನಗರ: ಭಯೋತ್ಪಾದನೆ ಸಂಘಟನೆಗಳಿಗೆ ಹಣಕಾಸು ನೆರವು ನೀಡಿದ ಪ್ರಕರಣದ ಅಪರಾಧಿ, ಕಾಶ್ಮೀರದ ಕುಖ್ಯಾತ ಪ್ರತ್ಯೇಕತಾವಾದಿ ಮುಖಂಡ ಯಾಸಿನ್ ಮಲಿಕ್ ಗೆ ಎನ್ ಐಎ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿರುವುದನ್ನು ವಿರೋಧಿಸಿ ಕಲ್ಲುತೂರಾಟ ನಡೆಸಿ, ಘೋಷಣೆ ಕೂಗಿದ್ದ ಹತ್ತು ಮಂದಿಯನ್ನು ಕಠಿಣ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಚಿಕ್ಕಮಗಳೂರು: ಆಸ್ಪತ್ರೆಯಿಂದ ಪರಾರಿಯಾದ ವಿಚಾರಣಾಧೀನ ಖೈದಿ
ಕಲ್ಲು ತೂರಾಟ ನಡೆಸಿರುವ ಇನ್ನಷ್ಟು ಆರೋಪಿಗಳನ್ನು ಗುರುತಿಸಲಾಗಿದ್ದು, ಶೀಘ್ರವೇ ಅವರನ್ನು ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ರಾತ್ರಿ ಕಾರ್ಯಾಚರಣೆಯಲ್ಲಿ ಹತ್ತು ಮಂದಿಯನ್ನು ಬಂಧಿಸಲಾಗಿತ್ತು ಎಂದು ವರದಿ ವಿವರಿಸಿದೆ.
ಬುಧವಾರ (ಮೇ 25) ಎನ್ ಐಎ ಕೋರ್ಟ್ ಯಾಸಿನ್ ಮಲಿಕ್ ಗೆ ಶಿಕ್ಷೆ ಪ್ರಕಟಿಸುವ ಮುನ್ನ ಮಲಿಕ್ ನಿವಾಸದ ಹೊರಭಾಗದಲ್ಲಿ ಆರೋಪಿಗಳು ಗಲಭೆ ನಡೆಸಿ ಹಾಗೂ ಕೋಮು ಪ್ರಚೋದಕ, ದೇಶ ವಿರೋಧಿ ಘೋಷಣೆ ಕೂಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮಧ್ಯರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಪ್ರಮುಖ ಆರೋಪಿಯನ್ನೂ ಬಂಧಿಸಲಾಗಿತ್ತು ಎಂದು ಮೂಲಗಳು ಹೇಳಿವೆ. ಆರೋಪಿಗಳ ವಿರುದ್ಧ ಯುಎಪಿಎ (ಕಾನೂನು ಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆ) ಸೆಕ್ಷನ್ 13, ಐಪಿಸಿ ಸೆಕ್ಷನ್ ಗಳಾದ 120 ಬಿ, 147, 148, 149, 336 , 34 ಕಲಂನಡಿ ಪ್ರಕರಣ ದಾಖಲಿಸಲಾಗಿದೆ ಎಂದು ಶ್ರೀನಗರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಾಕೇಶ್ ಬಲ್ವಾಲ್ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
ಪ್ರತಿಭಟನೆ ನಡೆಸಿ ಕಲ್ಲುತೂರಾಟ ನಡೆಸಿದ್ದ ಪ್ರತಿಭಟನಾಕಾರರ ವಿರುದ್ಧ ಸಾರ್ವಜನಿಕ ರಕ್ಷಣಾ ಕಾಯ್ದೆಯಡಿಯೂ ಪ್ರಕರಣ ದಾಖಲಿಸಿ, ಜಮ್ಮು-ಕಾಶ್ಮೀರದ ಹೊರವಲಯದ ಜೈಲಿನಲ್ಲಿ ಇಡಲಾಗಿದೆ ಎಂದು ವರದಿ ತಿಳಿಸಿದೆ.