ಮುಂಬಯಿ: ಮಹಾರಾಷ್ಟ್ರ ಮತ್ತೊಮ್ಮೆ ಕೋವಿಡ್ ತಡೆಗಟ್ಟುವಿಕೆ ಲಸಿಕೆ ಅಭಿಯಾನದಲ್ಲಿ ಹುರುಪಿನಿಂದ ಕಾರ್ಯನಿರ್ವಹಿಸಿದ್ದು, ಒಂದೇ ದಿನದಲ್ಲಿ 10.96 ಲಕ್ಷ ನಾಗರಿಕರಿಗೆ ಲಸಿಕೆ ಹಾಕುವ ದಾಖಲೆಯನ್ನು ನಿರ್ಮಿಸಿದೆ.
ಒಂದೇ ದಿನ ಸುಮಾರು 11 ಲಕ್ಷ ನಾಗರಿಕರಿಗೆ ಲಸಿಕೆ ಹಾಕುವ ಮೂಲಕ ಆರೋಗ್ಯ ಇಲಾಖೆಯು ಮಾಡಿದ ಕಾರ್ಯವನ್ನು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಆರೋಗ್ಯ ಸಚಿವ ರಾಜೇಶ್ ಟೋಪೆ ಅವರು ಶ್ಲಾಘಿಸಿದ್ದಾರೆ.
ಶನಿವಾರ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಉದ್ಯೋಗಿಗಳು 10 ಲಕ್ಷಕ್ಕೂ ಹೆಚ್ಚು ಲಸಿಕೆಗಳನ್ನು ಒಂದು ದಿನದಲ್ಲಿ ಮಾಡಬಹುದೆಂದು ಸಾಬೀತುಪಡಿಸಿದ್ದಾರೆ. ರಾಜ್ಯವು ಇದಕ್ಕಿಂತ ಹೆಚ್ಚು ಲಸಿಕೆ ಹಾಕುವ ಸಾಮರ್ಥ್ಯವನ್ನು ಹೊಂದಿದೆ. ಇಲಾಖೆಯ ಪರವಾಗಿ ಹೆಚ್ಚಿನ ಪ್ರಯತ್ನ ಗಳನ್ನು ಮಾಡಲಾಗುವುದು ಎಂದೂ ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದ್ದಾರೆ.
ಇದನ್ನೂ ಓದಿ:ಇನ್ನಷ್ಟು ಅತ್ಯಾಧುನಿಕಗೊಳ್ಳಲಿದೆ ವಂದೇ ಭಾರತ್ ಎಕ್ಸ್‌ಪ್ರೆಸ್
ಕೋವಿಡ್ ತಡೆಗಟ್ಟುವ ಲಸಿಕೆ ಅಭಿಯಾನದಲ್ಲಿ ಇಂದು ಸಂಜೆ 7 ಗಂಟೆಯವರೆಗೆ 5,200 ಲಸಿಕೆ ಕೇಂದ್ರಗಳ ಮೂಲಕ 10,96,493 ಮಂದಿಗೆ ಲಸಿಕೆ ನೀಡಲಾಗಿದೆ. ತಡರಾತ್ರಿಯ ವೇಳೆಗೆ ಅಂಕಿಅಂಶಗಳು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಪ್ರದೀಪ್ ವ್ಯಾಸ್ ಹೇಳಿದ್ದಾರೆ.
ಈ ಹಿಂದೆ ಜುಲೈ 3 ರಂದು ರಾಜ್ಯವು 8.11 ಲಕ್ಷ ಮಂದಿಗೆ ಲಸಿಕೆ ಹಾಕುವ ಮೂಲಕ ದಾಖಲೆ ನಿರ್ಮಿಸಿತ್ತು. ಇಂದಿನ ಅತ್ಯಧಿಕ ಸಂಖ್ಯೆಯ ಲಸಿಕೆಗಳ ನಂತರ, ಮಹಾರಾಷ್ಟ್ರ ತನ್ನ ಹೆಸರಿನಲ್ಲಿ ಹೊಸ ದಾಖಲೆಯನ್ನು ಸ್ಥಾಪಿಸಿದೆ ಎಂದು ವ್ಯಾಸ್ ಹೇಳಿದ್ದಾರೆ.