ಬೆಂಗಳೂರು: ಹೋಟೆಲ್‌ಗಳಲ್ಲಿ ಕ್ಯಾಷಿ ಯರ್ ಆಗಿ ಕೆಲಸಕ್ಕೆ ಸೇರಿಕೊಂಡು ಹಣ ದೋಚುತ್ತಿದ್ದ ಆರೋಪಿಯನ್ನು ಕೆ.ಆರ್ .ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬನಶಂಕರಿಯ ಕತ್ರಿಗುಪ್ಪೆ ನಿವಾಸಿ ರವಿಕುಮಾರ್(66) ಬಂಧಿತ.
ಆರೋಪಿ ಕಳೆದ ವರ್ಷ ಕೆ.ಆರ್.ಪುರದ ಭಟ್ಟಳ್ಳಿಯ ಬಳಿಯಿರುವ ನ್ಯೂ ಉಡುಪಿ ಗ್ರ್ಯಾಂಡ್ ಹೋಟೆಲ್‌ನಲ್ಲಿ ಕ್ಯಾಷಿಯರ್ ಕೆಲಸಕ್ಕೆ ಸೇರಿದ್ದ ನಾಲ್ಕೈದು ದಿನಗಳಲ್ಲೇ 1 ಲಕ್ಷ ರೂ. ದೋಚಿ ಪರಾರಿಯಾಗಿದ್ದ. ಈ ಸಂಬಧ ಹೋಟೆಲ್ ಮಾಲೀಕ ಸತೀಶ್ ಶೆಟ್ಟಿ ದೂರು ನೀಡಿದ್ದರು. ಈ ಮಧ್ಯೆ ಆರೋಪಿ ದೇವನಹಳ್ಳಿಯ ನಂದಗೋಕುಲ ಹೋಟೆಲ್‌ನಲ್ಲಿ ಕ್ಯಾಷಿಯರ್ ಕೆಲಸ ಮಾಡುತ್ತಿದ್ದ ಮಾಹಿತಿ ಸಿಕ್ಕಿತ್ತು. ಅದೇ ವೇಳೆ ದೂರುದಾರ ಸತೀಶ್ ಶೆಟ್ಟಿ, ಆರೋಪಿ ಕೆಲಸ ಮಾಡುತ್ತಿದ್ದ ಹೋಟೆಲ್‌ಗೆ ಹೋಗಿ ರವಿಕುಮಾರ್‌ನನ್ನು ಹಿಡಿದು, ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಆರೋಪಿ ಎಂ.ಕಾಂ ಪದವೀಧರನಾಗಿದ್ದು, ದೊಡ್ಡ ಹೋಟೆಲ್‌ಗಳಿಗೆ ತೆರಳಿ ಮಾಲೀಕರನ್ನು ಭೇಟಿಯಾಗುತ್ತಿದ್ದ. ಈ ಹಿಂದೆ ಹಲವು ಪ್ರತಿಷ್ಠಿತ ಹೋಟೆಲ್ ಗಳಲ್ಲಿ ಕ್ಯಾಷಿಯರ್ ಕೆಲಸ ಮಾಡಿದ ಅನುಭವವಿದೆ. ಈಗ ಮನೆಯಲ್ಲಿ ಆರ್ಥಿಕ ಸಂಕಷ್ಟ ಇರುವುದರಿಂದ ಕೆಲಸಕ್ಕೆ ಪ್ರಯತ್ನಿಸುತ್ತಿದ್ದೇನೆ. ನಿಮ್ಮ ಹೋಟೆಲ್ ನಲ್ಲಿ ಕೆಲಸ ಕೊಡಿ’ ಎಂದು ಹೇಳಿಕೊಂಡು ಕೆಲಸಗಿಟ್ಟಿಸುತ್ತಿದ್ದ. ಕೆಲ ದಿನಗಳ ಕಾಲ ಕೆಲಸ ಮಾಡಿ, ಹಣ ದೋಚಿ ಪರಾರಿಯಾಗಿದ್ದ ಎಂದು ಹೇಳಲಾಗಿದೆ. ಈತನ ವಿಚಾರಣೆಯಲ್ಲಿ ಜೂಜಾಟ, ಷೇರು ಮಾರುಕಟ್ಟೆಯಲ್ಲಿ ದೋಚಿರುವ ಹಣ ಹೂಡಿಕೆ ಮಾಡಿದ್ದಾನೆ ಎಂಬುದು ಗೊತ್ತಾಗಿದೆ.