Advertisement

ಎಫ್ ಎಂಸಿಜಿ ಕ್ಲಸ್ಟರ್ ಯೋಜನೆಯಿಂದ ಈ ವರ್ಷ 1 ಲಕ್ಷ ಉದ್ಯೋಗ ಸೃಷ್ಟಿ : ಸಿಎಂ ಬೊಮ್ಮಾಯಿ

02:49 PM Apr 29, 2022 | Team Udayavani |

ಬೆಂಗಳೂರು : ಧಾರವಾಡದಲ್ಲಿ ಎಫ್ ಎಂ ಸಿ ಜಿ ಕ್ಲಸ್ಟರ್ ನ್ನು ಅಭಿವೃದ್ಧಿಪಡಿಸಿ ಇಲ್ಲಿ ಬರುವ ಕೈಗಾರಿಕೆಗಳಿಗೆ ವಿಶೇಷ ರಿಯಾಯಿತಿಯನ್ನು ನೀಡಲಾಗುವುದು. ಒಂದು ಲಕ್ಷ ಉದ್ಯೋಗ ಸೃಷ್ಟಿಸುವ ಈ ಯೋಜನೆಯನ್ನು ಇದೇ ವರ್ಷ ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

ಇಂದು ತೇಜು, ಜೆ.ಎಸ್.ಗ್ರೂಪ್ ಆಫ್ ಕಂಪನಿ ಇವರ ವತಿಯಿಂದ ಆಯೋಜಿಸಿದ ನೂತನ ಉತ್ಪನ್ನಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಜನರಿಂದ ಜನರಿಗೋಸ್ಕರ ಇರುವ ಉದ್ಯಮಗಳು ದೇಶದ ಅವಶ‍್ಯಕತೆಯಾಗಿದೆ. ಕರ್ನಾಟಕ ಪ್ರಗತಿಪರ ರಾಜ್ಯ. ಎಲ್ಲ ಕ್ಷೇತ್ರಗಳಿಗೆ ಸಂಬಂಧಿಸಿದ 180 ಅತ್ಯಾಧುನಿಕ ಸಂಶೋಧನಾ ಕೇಂದ್ರಗಳು ಬೆಂಗಳೂರಿನಲ್ಲಿದೆ. ಐಟಿ , ಬಿಟಿ ರಫ್ತು , ಉತ್ಪಾದನಾ ವಲಯಗಳಲ್ಲಿ ದೇಶದ ಗರಿಷ್ಟ ರಫ್ತಿನ ಪಾಲು ಕರ್ನಾಟಕ, ಬೆಂಗಳೂರಿನಿಂದ ಆಗುತ್ತಿದೆ. ಕರ್ನಾಟಕಕ್ಕೆ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಉತ್ತಮ ಸ್ಥಾನದಲ್ಲಿದೆ. ಬೆಂಗಳೂರು ಮತ್ತು ಕರ್ನಾಟಕದಲ್ಲಿ ಅಂತರರಾಷ್ಟ್ರೀಯ ಮಟ್ಟದ ಉದ್ಯೋಗ ಸೃಷ್ಟಿಯಾಗುತ್ತಿದೆ. ರಾಜ್ಯಕ್ಕೆ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಅವಕಾಶವಿದೆ. ಈ ನಿಟ್ಟಿನಲ್ಲಿ ಸರ್ಕಾರ ಎಲ್ಲ ಸಹಕಾರವನ್ನು ನೀಡಲಿದೆ. ಕರ್ನಾಟಕದಲ್ಲಿ ಉದ್ಯಮ, ಉದ್ಯೋಗ, ತಂತ್ರಜ್ಞಾನ ಹಾಗೂ ಬಂಡವಾಳವನ್ನು ಹೂಡಲು ಉದ್ದಿಮೆದಾರರಿಗೆ ಕರೆ ನೀಡಿದರು.

ಉದ್ಯಮ ಬೆಳೆಸಲು ಗುರಿ, ಛಲ ಇರಬೇಕು
ಕರ್ನಾಟಕ ಯುವಜನತೆ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ತಂದು, ಆರ್ಥಿಕವಾಗಿ ಬೆಳೆಯಬೇಕು. ಸಣ್ಣದಾಗಿ ಪ್ರಾರಂಭಿಸಿದ ಉದ್ಯಮವನ್ನು ದೊಡ್ಡದಾಗಿ ಬೆಳೆಸಲು ಗುರಿ ಹಾಗೂ ಸಾಧನೆಯ ಛಲ ಇರಬೇಕು. ಇಂದು ಉತ್ಪನ್ನಗಳಿಗೆ ಬ್ರ್ಯಾಡಿಂಗ್ ಅತ್ಯವಶ್ಯ. ಪ್ಯಾಕೇಜಿಂಗ್ ಗೂ ಕೂಡ ಕೇಂದ್ರ ಸರ್ಕಾರದ ಮಾರ್ಗಸೂಚಿಗಳಿವೆ. ಎಫ್ ಎಂಸಿಜಿ ವಿಭಾಗದಲ್ಲಿ ಬಹಳಷ್ಟು ಉದ್ಯೋಗ ಸೃಷ್ಟಿ ಸಾಧ್ಯವಿದೆ ಎಂದರು.

ತೇಜು ಬ್ರ್ಯಾಂಡ್ ನೇಮ್
ಸಣ್ಣದಾಗಿ ಪ್ರಾರಂಭಿಸಿದ ಉದ್ಯಮವನ್ನು ಇಂದು ರಾಷ್ಟ್ರಾದ್ಯಂತ ವಿಸ್ತರಿಸಿರುವ ತೇಜು ಉತ್ಪನ್ನಗಳ ಯಶೋಗಾಥೆ ಶ್ಲಾಘನೀಯ. ಯಾವುದೇ ಉದ್ಯಮ ಸಣ್ಣದಾಗಿ ಪ್ರಾರಂಭವಾದರೂ ನಮ್ಮ ಪರಿಶ್ರಮದಿಂದ ಅದು ಹೆಮ್ಮರವಾಗಿ ಬೆಳೆಯುತ್ತದೆ. 1990 ರ ಜಾಗತೀಕರಣದ ನಂತರ ವಿದೇಶಿ ಉತ್ಪನ್ನಗಳು ನಮ್ಮ ದೇಶಕ್ಕೆ ಬಂದಾಗ ,ನಮ್ಮ ಸ್ವದೇಶಿ ಉತ್ಪನ್ನಗಳಿಗೆ ಮಾರುಕಟ್ಟೆ ಉಳಿಸಿಕೊಳ್ಳಲು ಬ್ರ್ಯಾಂಡ್ ನೇಮ್ ನ ಅವಶ್ಯಕತೆ ಇದೆ. ಉತ್ತಮ ಗುಣಮಟ್ಟದ ಉತ್ಪನ್ನಗಳು ಮತ್ತು ಬ್ರ್ಯಾಂಡ್ ನೇಮ್ ನಿಂದಾಗಿ ತೇಜು ಉತ್ಪನ್ನಗಳು ಯಶಸ್ವಿಯಾಗಿದೆ. 4 ಸಾವಿರ ಜನರಿಗೆ ಉದ್ಯೋಗ ನೀಡಿದ್ದಾರೆ. ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನಗಳಲ್ಲಿ ಕರ್ನಾಟಕದ ತೇಜು ಉತ್ಪನ್ನಗಳು ಪ್ರಸಿದ್ಧವಾಗಿರುವುದು ಹೆಮ್ಮೆಯ ವಿಷಯ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next