ಹುಬ್ಬಳ್ಳಿ : ಭಾರತೀಯ ಸ್ಟೇಟ್ ಬ್ಯಾಂಕ್, ನಬಾರ್ಡ್, ಕೆಎಫ್‌ಪಿಒ ಹಾಗೂ ದೇಶಪಾಂಡೆ ಫೌಂಡೇಶನ್ ಸಹಯೋಗದಲ್ಲಿ ದೇಶದಲ್ಲೇ ಮೊದಲ ಬಾರಿಗೆ ಸುಮಾರು ಒಂದು ಲಕ್ಷ ಕೃಷಿ ಹೊಂಡಗಳ ನಿರ್ಮಾಣ ನಿಟ್ಟಿನಲ್ಲಿ ರೈತರಿಗೆ ನೆರವಿನ ಘೋಷಣೆ ಮಾಡಲಾಗಿದೆ. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಬೆಳವಟಗಿ ಗ್ರಾಮ ಮಹತ್ವದ ಘೋಷಣೆಗೆ ಬುಧವಾರ ಸಾಕ್ಷಿಯಾಯಿತು.
ಎಸ್‌ಬಿಐ ಬೆಂಗಳೂರು ವೃತ್ತದ ಮುಖ್ಯ ಪ್ರಧಾನ ವ್ಯವಸ್ಥಾಪಕ ಅಭಿಜಿತ್ ಮುಜಮದಾರ್ ಮಾತನಾಡಿ, ರೈತರಿಗೆ ಸಾಲ ನೀಡಲು ಬ್ಯಾಂಕ್ ಸಿದ್ಧವಿದ್ದು, ಇದನ್ನು ಸದುಯೋಗ ಪಡಿಸಿಕೊಳ್ಳುವ ಮೂಲಕ ರೈತರು ತಮ್ಮ ಆದಾಯ ಹೆಚ್ಚಳಕ್ಕೆ ಮುಂದಾಗಬೇಕು. ಎಸ್‌ಬಿಐ ಸಾಲದ ಮೂಲಕ ಉತ್ತಮ ಬೆಂಬಲ ನೀಡುತ್ತದೆ. ಒಂದು ಲಕ್ಷ ಕೃಷಿ ಹೊಂಡಗಳ ನಿರ್ಮಾಣಕ್ಕೆ ಅಗತ್ಯರುವ ಸಾಲ ಸೌಲಭ್ಯ ನೀಡಲು ಬ್ಯಾಂಕ್ ಸಿದ್ಧವಿದೆ. ಇಂತಹ ಮಹತ್ವದ ಕಾರ್ಯಕ್ಕೆ ಸಾಥ್ ನೀಡಿರುವ ನಬಾರ್ಡ್ ಹಾಗೂ ದೇಶಪಾಂಡೆ ಫೌಂಡೇಶನ್‌ಗೆ ಧನ್ಯವಾದ ಸಲ್ಲಿಸಿದರು.
ಎಸ್‌ಬಿಐ ಎಫ್‌ಐಎಂಎಂ ವಿಭಾಗದ ಪ್ರಧಾನ ವ್ಯವಸ್ಥಾಪಕ ಶಾಂತನು ಪೆಂಡ್ಸೆ ಮಾತನಾಡಿ, ರೈತರು ಕೃಷಿ ಹೊಂಡಗಳ ನಿರ್ಮಾಣಕ್ಕೆ ಅಂದಾಜು 80 ಸಾವಿರ ರೂ.ಗಳ ವೆಚ್ಚ ತಗುಲುತ್ತಿದ್ದು, ಎಸ್ ಬಿಐನಿಂದ ಒಂದು ಕೃಷಿ ಹೊಂಡಕ್ಕೆ 60 ಸಾವಿರ ರೂ.ಗಳ ಸಾಲ ನೀಡಲಾಗುತ್ತದೆ. ಉಳಿದ 20 ಸಾವಿರ ರೂ.ಗಳನ್ನು ರೈತರು ಭರಿಸಬೇಕಾಗುತ್ತದೆ. ಅತ್ಯಂತ ಸುಲಭ ರೀತಿಯಲ್ಲಿ ಜಂಟಿ ಹೊಣೆಗಾರಿಕೆ ಗುಂಪುಗಳ (ಜೆಎಲ್‌ಜಿ) ಮಾದರಿಯಲ್ಲಿ ಸಾಲ ನೀಡಲಾಗುತ್ತದೆ. ಇದಕ್ಕೆ ಶೇ.8 ಬಡ್ಡಿ ವಿಧಿ ಸಲಾಗುತ್ತದೆ ಎಂದರು. ಮುಂಗಾರು ಮನ್ಸೂನ್ ಆರಂಭ ಮೊದಲೇ ಸುಮಾರು 1,000 ಕೃಷಿ ಹೊಂಡಗಳ ನಿರ್ಮಾಣ ಗುರಿ ಹೊಂದಲಾಗಿದೆ.
ಮುಂಗಾರು ಮುನ್ನ ಕೃಷಿ ಹೊಂಡಗಳು ನಿರ್ಮಾಣವಾದರೆ ಮಳೆಗೆ ನೀರು ಸಂಗ್ರಹವಾಗಲಿದೆ. ಈಗಾಗಲೇ ಬಳ್ಳಾರಿ ಜಿಲ್ಲೆಯಲ್ಲಿ ಐದು ಗುಂಪುಗಳ 50 ರೈತರಿಗೆ ಸಾಲ ನೀಡಲಾಗಿದ್ದು, ಕಾಮಗಾರಿ ಆರಂಭಗೊಂಡಿದೆ. ಒಂದು ಲಕ್ಷ ಕೃಷಿ ಹೊಂಡಗಳ ನಿರ್ಮಾಣಕ್ಕೆ ವಿಶೇಷ ಸಾಲ ನೀಡಿಕೆಗೆ ಅನುಕೂಲವಾಗುವಂತೆ ಮುಖ್ಯ ವ್ಯವಸ್ಥಾಪಕ ಹನುಮೇಶ ರಾವ್ ಅವರನ್ನು ವಿಶೇಷ ಅಧಿಕಾರಿಯಾಗಿ ನೇಮಿಸಲಾಗಿದ್ದು, ಪ್ರಾದೇಶಿಕ ವ್ಯವಸ್ಥಾಪಕ ಜಿ.ನರಸಿಂಹಮೂರ್ತಿ ಅವರು 3-04 ಜಿಲ್ಲೆಗಳ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಾರೆ. ಈ ನಿಟ್ಟಿನಲ್ಲಿ ನಬಾರ್ಡ್ ನೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದೇವೆ. ಕೃಷಿ ಹೊಂಡಗಳ ನಿರ್ಮಾಣಕ್ಕೆ ದೇಶಪಾಂಡೆ ಫೌಂಡೇಶನ್ ಅಗತ್ಯ ತಾಂತ್ರಿಕ ನೆರವು ನೀಡುತ್ತಿದೆ ಎಂದರು.
ನಬಾರ್ಡ್ ಬ್ಯಾಂಕ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಮಯೂರ ಕಾಂಬ್ಳೆ ಮಾತನಾಡಿ, ಕೃಷಿ ಹೊಂಡಗಳ ನಿರ್ಮಾಣದಿಂದ ರೈತರಿಗೆ ಉತ್ತಮ ಫಸಲು ಹಾಗೂ ಆದಾಯ ಹೆಚ್ಚಳಕ್ಕೆ ಸಹಕಾರಿ ಆಗಲಿದೆ.
ಕೃಷಿ ಹೊಂಡದಿಂದ ಅಂತರ್ಜಲ ಮಟ್ಟ ಹೆಚ್ಚಲಿದೆ ಎಂದರು. ದೇಶಪಾಂಡೆ ಫೌಂಡೇಶನ್ ಸಿಇಒ ವಿವೇಕ ಪವಾರ ಮಾತನಾಡಿ, ನವಲಗುಂದ ತಾಲೂಕು ಮಾದರಿ ಹಾಗೂ ಪ್ರಗತಿಪರ ತಾಲೂಕು ಆಗಿಸುವ ಯತ್ನಕ್ಕೆ ದೇಶಪಾಂಡೆ ಫೌಂಡೇಶನ್ ಮುಂದಾಗಿದೆ. ಈ ನಿಟ್ಟಿನಲ್ಲಿ ಫೌಂಡೇಶನ್ ರೈತರಿಗೆ ಎಲ್ಲ ರೀತಿಯ ಸಹಾಯ ಮಾಡಲಿದ್ದು, ಫೌಂಡೇಶನ್ ಉತ್ತರ ಕರ್ನಾಟಕ ಹಾಗೂ ತೆಲಂಗಾಣದ ವಿವಿಧ ಜಿಲ್ಲೆಗಳಲ್ಲಿ ಇದುವರೆಗೆ ಸುಮಾರು 6,000 ಕೃಷಿ ಹೊಂಡಗಳನ್ನು ನಿರ್ಮಿಸಿದೆ ಎಂದರು. ಎಸ್‌ಬಿಐ ಬೆಳಗಾವಿಯ ಪ್ರಾದೇಶಿಕ ವ್ಯವಸ್ಥಾಪಕ ನರಸಿಂಹ ಮೂರ್ತಿ, ಮುಖ್ಯ ವ್ಯವಸ್ಥಾಪಕ ಹನುಮೇಶ ರಾವ್, ದೇಶಪಾಂಡೆ ಫೌಂಡೇಶನ್ ಕೃಷಿ ವಿಭಾಗದ ಇನ್ನುಸ್ ಖಾನ್, 100ಕ್ಕೂ ಅ ಧಿಕ ರೈತರು, ಫೌಂಡೇಶನ್ ಸಿಬ್ಬಂದಿ ಇದ್ದರು.