Advertisement

1.75 ಲಕ್ಷ ರೂ. ಮೌಲ್ಯದಲ್ಲಿ 25 ಸಾವಿರ ಹಣತೆ ಗುರಿ

09:06 PM Nov 09, 2020 | mahesh |

ಕಾರ್ಕಳ: ವಿಶೇಷ ಸಾಮರ್ಥ್ಯವುಳ್ಳ ಮಕ್ಕಳಲ್ಲಿ ಸ್ವಾವಲಂಬಿ ಪ್ರೇರಣೆ ನೀಡುವ ನಿಟ್ಟಿನಲ್ಲಿ ಕಾರ್ಕಳದ ಅಯ್ಯಪ್ಪನಗರ ವಿಜೇತ ವಿಶೇಷ ವಸತಿ ಶಾಲೆಯು ವಿನೂತನ ಪ್ರಯತ್ನವನ್ನು ಮಾಡುತ್ತಿದೆ.

Advertisement

ಅಯ್ಯಪ್ಪನಗರ ವಿಜೇತ ವಿಶೇಷ ವಸತಿ ಶಾಲೆಯಲ್ಲಿರುವ ಭಿನ್ನ ಸಾಮರ್ಥ್ಯದ 24 ಮಂದಿ ಮಕ್ಕಳು ಅಲ್ಯುಮೀನಿಯಂ ಹಣತೆ ತಯಾರಿ ಮಾಡುವ ಮೂಲಕ ದೀಪಾವಳಿಗೆ ಕಷ್ಟದ ಅಂಧಕಾರ ಹೋಗಲಾಡಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಹಣತೆ ಮಾರಾಟದಿಂದ ಬಂದ ಹಣವನ್ನು ಮಕ್ಕಳ ಶಾಲೆಯ ಶ್ರೇಯೋಭಿವೃದ್ಧಿಗೆ ಬಳಸಿಕೊಳ್ಳಲು ನಿರ್ಧಾರಿಸಲಾಗಿದೆ. ಮಕ್ಕಳ ಜತೆ ಹೆತ್ತವರು ಕೂಡ ಈ ಕಾರ್ಯಕ್ಕೆ ಸಾಥ್‌ ನೀಡುತ್ತಿದ್ದಾರೆ.

ಶಾಲೆಯಲ್ಲಿ ವಿಭಿನ್ನ ಸಾಮರ್ಥ್ಯದ 75 ಮಕ್ಕಳಿದ್ದು ಕೊರೊನಾ ಹಿನ್ನೆಲೆಯಲ್ಲಿ ಮಕ್ಕಳು ಈಗ ತಮ್ಮ ಪೋಷಕರ ಜತೆ ಮನೆಗಳಲ್ಲಿ ಉಳಿದುಕೊಂಡಿದ್ದಾರೆ. ಶಾಲೆಯಲ್ಲೀಗ ಅನಾಥ 5 ಮಂದಿ ಮಕ್ಕಳಷ್ಟೇ ಇದ್ದಾರೆ. ಅವರ ಪೈಕಿ 24 ಮಂದಿ ಮಕ್ಕಳು 25 ವಯಸ್ಸಿಗಿಂತ ಮೇಲ್ಪಟ್ಟವರು. ಅವರು ಮನೆಗಳಲ್ಲಿ ಹೆತ್ತವರ ನೆರವಿನಿಂದ ಹಣತೆಗಳನ್ನು ಸಿದ್ಧಗೊಳಿಸುತ್ತಿದ್ದು, ಅವರಿಗೆ ತರಬೇತಿ ಕೂಡ ನೀಡಲಾಗಿದೆ. ಈ ಬಾರಿಯ ದೀಪಾವಳಿಗೆ 25 ಸಾವಿರ ಹಣತೆಗಳನ್ನು ಸಿದ್ಧಗೊಳಿಸುವ ಗುರಿಯಿಂದ ತಯಾರಿ ಆರಂಭವಾಗಿದೆ. 20 ಸಾವಿರ ಹಣತೆಗಳು ಸಿದ್ಧಗೊಂಡಿವೆ. ಗುರಿ ತಲುಪಲು 5ಸಾವಿರ ಹಣತೆಗಳ ತಯಾರಿ ಬಾಕಿಯಿದೆ.

ಮಕ್ಕಳು ಸಿದ್ಧಪಡಿಸಿದ ಹಣತೆಗಳನ್ನು ತಲಾ 12ರಂತೆ ಪ್ಯಾಕ್‌ ಮಾಡಲಾಗುತ್ತಿದೆ. ಪ್ಯಾಕೊಂದರ ಬೆಲೆ 85 ರೂ. ಎಂದು ನಿಗದಿಪಡಿಸಲಾಗಿದೆ. ಮಂಗಳೂರು ಮೂಲದ ವೆಬ್‌ಸೈಟ್‌ ಮೂಲಕ ಹಾಗೂ ಸ್ಥಳಿಯ ಅಂಗಡಿಗಳಲ್ಲಿ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆ (ವಿಶೇಷ ಶಾಲೆ) ವಿದ್ಯಾರ್ಥಿಗಳು ಹಣತೆ ತಯಾರಿಸುತ್ತಿದ್ದಾರೆ ಎಂದಾಗ ಅಚ್ಚರಿ ಜತೆಗೆ ಮಾನವೀಯತೆಯ ಭಾವನೆಯಿಂದ ನೋಡುವವರೇ ಹೆಚ್ಚು. ವಿಷಯ ತಿಳಿದ ಅನೇಕ ಮಂದಿ ಬಡ ಮಕ್ಕಳಿಗೆ ನೆರವಾಗಲೆಂದು ನೇರ ಶಾಲೆಗೆ ಬಂದು ಹಣತೆ ಖರೀದಿಸಿ ತೆರಳುತ್ತಿದ್ದಾರೆ. 15 ಸಾವಿರ ಹಣತೆ ವಿವಿಧ ರೂಪಗಳಲ್ಲಿ ಈಗಾಗಲೇ ಮಾರಾಟವಾಗಿದೆ.

Advertisement

ವಿಜೇತ ವಿಶೇಷ ವಸತಿಯುತ ಶಾಲೆ 2016ರಲ್ಲಿ ಆರಂಭಗೊಂಡಿದೆ. ಮಕ್ಕಳ ಬೆಳವಣಿಗೆಗೆ ಪೂರಕ ವ್ಯವಸ್ಥೆಗಳು ಇಲ್ಲಿವೆ. ಮಕ್ಕಳ ಪೋಷಕರು ಬಡವರೇ ಆದ ಕಾರಣ ಅವರ ಮೇಲೆ ಯಾವುದೇ ಹೊರೆಯನ್ನು ಹೊರೆಸುತ್ತಿಲ್ಲ. ಹುಟ್ಟುಹಬ್ಬ ಆಚರಣೆ, ವಿಶೇಷ ಕಾರ್ಯಕ್ರಮಗಳ ಮೂಲಕ ದಾನಿಗಳು ಆರ್ಥಿಕ ಜತೆಗೆ ವಿವಿಧ ರೂಪದಲ್ಲಿ ದೇಣಿಗೆ, ವಸ್ತು ರೂಪದಲ್ಲಿ ಕೊಡುಗೆಗಳನ್ನು ನೀಡುತ್ತ ಮಕ್ಕಳ ಮೇಲೆ ಪ್ರೀತಿ ತೋರಿಸುತ್ತಾರೆ. ಈ ನಂಬಿಕೆಯಲ್ಲೆ ಶಾಲೆ ಉತ್ತಮವಾಗಿ ನಡೆಯುತ್ತಿದೆ ಎನ್ನುತ್ತಾರೆ ಸಂಸ್ಥಾಪಕಿ ಕಾಂತಿ ಹರೀಶ್‌.

ಎಲ್ಲ ರೀತಿಯ ನೆರವು
ಹಣತೆ ತಯಾರಿಸಲು 1.75 ಲಕ್ಷ ರೂ. ಹಣ ವೆಚ್ಚ ಮಾಡಲಾಗುತ್ತಿದೆ. ವಿಜೇತ ಶಾಲೆಯಿಂದ ಮನೆಗಳಲ್ಲಿ ಸಿದ್ಧಪಡಿಸಲು ಎಲ್ಲ ರೀತಿಯ ಸಾಮಗ್ರಿ ಗಳನ್ನು ನೀಡಲಾಗುತ್ತಿದೆ. ಅಲ್ಯುಮೀನಿಯಂ ನಿಂದ ಹಣತೆ ಸಿದ್ಧಪಡಿಸಲಾಗುತ್ತಿದೆ.

ಖುಷಿಯಾಗುತ್ತಿದೆ
ನನಗೆ ಹಣತೆ ತಯಾರಿಸಲು ತರಬೇತಿ ನೀಡಿದ್ದರಿಂದ ಸುಲಭವಾಗಿ ಹಣತೆ ಮಾಡುವುದನ್ನು ಕಲಿತೆ. ಇದರಿಂದ ಮನಸ್ಸಿಗೆ ಖುಷಿಯಾಗುತ್ತಿದೆ. ಸಮಯವೂ ಕಳೆದು ಹೋಗುತ್ತಿದೆ.
-ಸುರೇಶ್‌, ವಿಜೇತ ವಿಶೇಷ ಶಾಲೆ ವಿದ್ಯಾರ್ಥಿ

Advertisement

Udayavani is now on Telegram. Click here to join our channel and stay updated with the latest news.

Next