Advertisement

207 ರೈತರಿಗೆ 1.43 ಕೋಟಿ ರೂ. ಸಾಲ ವಿತರಣೆ

11:27 AM Nov 08, 2021 | Team Udayavani |

ಚಿಂಚೋಳಿ: ಕಲಬುರಗಿ ಮತ್ತು ಯಾದಗಿರಿ ಜಿಲ್ಲಾ ಸಹಕಾರ ಬ್ಯಾಂಕ್‌ ರಾಜ್ಯದಲ್ಲಿಯೇ ಅತ್ಯಂತ ಹೀನಾಯ ಸ್ಥಿತಿಯಲ್ಲಿರುವುದರಿಂದ ಮುಚ್ಚುವ ಹಂತಕ್ಕೆ ಬಂದಿತ್ತು. ಆದರೆ ಬಿಜೆಪಿ ಸರ್ಕಾರ ಅದನ್ನು ಪುನಶ್ಚೇತನಗೊಳಿಸಲು ಕಾಂಗ್ರೆಸ್‌ ಪಕ್ಷದ ನಿರ್ದೇಶಕರ ಸಹಕಾರದಿಂದ ಡಿಸಿಸಿ ಬ್ಯಾಂಕ್‌ನಲ್ಲಿ ಆಡಳಿತ ಚುಕ್ಕಾಣಿ ಪಡೆದುಕೊಳ್ಳಲು ಸಾಧ್ಯವಾಯಿತು ಎಂದು ಶಾಸಕ ಡಾ| ಅವಿನಾಶ ಜಾಧವ ಹೇಳಿದರು.

Advertisement

ತಾಲೂಕಿನ ಚೆನ್ನೂರ ಪುರ್ನವಸತಿ ಕೇಂದ್ರದಲ್ಲಿ ಗಡಿಲಿಂಗದಳ್ಳಿ (ಚೆನ್ನೂರ) ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ 2021-22ನೇ ಸಾಲಿಗಾಗಿ ಸಹಕಾರ ಸಂಘಗಳ 207 ಹೊಸ ರೈತರಿಗೆ ಒಟ್ಟು 1.43 ಕೋಟಿ ರೂ. ಶೂನ್ಯ ಬಡ್ಡಿರಹಿತ ಸಾಲದ ಚೆಕ್‌ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೊರೊನಾ ಮಹಾಮಾರಿಯಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದಾಗ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಡಿಸಿಸಿ ಬ್ಯಾಂಕ್‌ ಪುನಶ್ಚೇತನಗೊಳಿಸಿ ರೈತರಿಗೆ ಸಾಲ ನೀಡುವ ಭರವಸೆ ನೀಡಿದ್ದರು. ಅದರಂತೆ ಜಿಲ್ಲೆಯ ಎಲ್ಲ ಶಾಸಕರು ಜೊತೆಗೂಡಿ ಕಾಂಗ್ರೆಸ್‌ ಪಕ್ಷದ ಡಿಸಿಸಿ ಬ್ಯಾಂಕ್‌ ನಿರ್ದೇಶಕ ಗೌತಮ ಪಾಟೀಲರ ಸಹಕಾರ, ಬೆಂಬಲ ಪಡೆದುಕೊಂಡು ಅಧಿಕಾರ ಪಡೆದುಕೊಂಡಿದ್ದೇವೆ. ಐನಾಪುರ ವಲಯದ ಹಿಂದುಳಿದ ಪ್ರದೇಶದಲ್ಲಿ ಹೈನುಗಾರಿಕೆ, ಹನಿ ನೀರಾವರಿ, ಪೈಪ್‌ ಲೈನ್‌, ಕೃಷಿ ಚಟುವಟಿಕೆಗೋಸ್ಕರ ರೈತರಿಗೆ ಪ್ರತಿ ಎಕರೆಗೆ 25 ಸಾವಿರ ರೂ. ಶೂನ್ಯಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಡಿಸಿಸಿ ಬ್ಯಾಂಕ್‌ ನಿರ್ದೇಶಕ ಗೌತಮ ಪಾಟೀಲ ಮಾತನಾಡಿ, ತಾಲೂಕಿನಲ್ಲಿ ಸಹಕಾರಿ ಪತ್ತಿನ ಬ್ಯಾಂಕ್‌ಗಳಿಂದ ಇದುವರೆಗೆ ಒಟ್ಟು 17ಕೋಟಿ ರೂ. ರೈತರಿಗೆ ಸಾಲ ನೀಡಲಾಗಿದೆ. ಡಿಸಿಸಿ ಬ್ಯಾಂಕ್‌ನಿಂದ ಒಟ್ಟು ಒಂದು ಸಾವಿರ ಕೋಟಿ ರೂ. ಪ್ರಸಕ್ತ ಸಾಲಿನಲ್ಲಿ ನೀಡಲಾಗುತ್ತಿದೆ. ಚೆನ್ನೂರ ಸಹಕಾರಿ ಸಂಘಕ್ಕೆ ಒಟ್ಟು 1.43 ಕೋಟಿ ರೂ.ನೀಡಲಾಗುತ್ತಿದ್ದು, ಇದು ಶಾಸಕರ ಸಹಕಾರದಿಂದ ಸಾಧ್ಯವಾಗಿದೆ ಎಂದರು.

ಇದನ್ನೂ ಓದಿ: ನಾಗಮ್ಮ ತಾಯಿ ಜಾತ್ರೆ-ಸರಳ ಸಾಮೂಹಿಕ ವಿವಾಹ

Advertisement

ರೈತರು ಸಾಲ ಮರು ಪಾವತಿಸದೇ ಸಾಲದ ಹೊರೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಶೂನ್ಯ ದರದಲ್ಲಿ ಸಾಲ ನೀಡಲಾಗುತ್ತಿದೆ. ಪಟ್ಟಣದ ಹೊರವಲಯದಲ್ಲಿನ ಚಿಂಚೋಳಿ ಸಕ್ಕರೆ ಕಾರ್ಖಾನೆ ಮೇಲೆ 210 ಕೋಟಿ ರೂ. ಸಾಲ ಎತ್ತಿಕೊಂಡು ಪರಾರಿಯಾಗಿದ್ದಾರೆ. ಈ ಕುರಿತು ತನಿಖೆ ಜಾರಿಯಲ್ಲಿದೆ. ಆದರೆ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಕ್ಕರೆ ಕಾರ್ಖಾನೆ ಖರೀದಿಸಿ ನ.22ರಂದು ಭೂಮಿಪೂಜೆ ನಡೆಸುತ್ತಿದ್ದಾರೆ. ಇದು ಈ ಭಾಗದ ರೈತರಿಗೆ ಖುಷಿ ತಂದಿದೆ ಎಂದರು.

ಚೆನ್ನೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕಿನ ಅಧ್ಯಕ್ಷ ರೇವಣಸಿದ್ಧಪ್ಪ ಕೋಡ್ಲಿ ಮಾತನಾಡಿ, ನಮ್ಮ ಸಂಘದ ರೈತರಿಗೆ ಒಟ್ಟು 1.43ಕೋಟಿ ರೂ.ಸಾಲ ಮಂಜೂರಿಯಾಗಿದೆ. 123 ಹಳೆ ರೈತರಿಗೆ ಒಟ್ಟು ಒಂದು ಕೋಟಿ ರೂ. ಸಾಲಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ರೈತರ 1.17ಕೋಟಿ ರೂ.ಸಾಲ ಮನ್ನಾ ಆಗಿದೆ. ಇನ್ನು 12 ಲಕ್ಷ ರೂ. ಸಾಲ ಬಾಕಿ ಇದೆ ಎಂದರು.

ಬಿಜೆಪಿ ಮುಖಂಡ ಅಲ್ಲಮಪ್ರಭು ಹುಲಿ, ನಿರ್ದೇಶಕ ಶೈಲೇಶ ಹುಲಿ, ಉಪಾಧ್ಯಕ್ಷೆ ಶಕುಂತಲಾ ಹುಲಿ, ಗಡಿಲಿಂಗದಳ್ಳಿ ಗ್ರಾಪಂ ಅಧ್ಯಕ್ಷ ಗೌರಿಶಂಕರ ಉಪ್ಪಿನ, ಪ್ರೇಮಸಿಂಗ್‌ ಜಾಧವ, ದಿವಾಕರ ಜಾಹಾಗೀರದಾರ, ಸತೀಶರೆಡ್ಡಿ ತಾಜಲಾಪುರ, ಪಿಎಸ್‌ಐ ಹಣಮಂತ ಬಿ. ಭವಾನಿ ಚಂದನಕೇರಾ, ನರಸಿಂಗ ಜಾಧವ, ಜಗನ್ನಾಥ ಜಾಧವ, ರವಿ ಕೊಟಗಾ ಇನ್ನಿತರರಿದ್ದರು. ಸಮಾರಂಭದಲ್ಲಿ ಒಟ್ಟು 11 ರೈತರಿಗೆ ಸಾಮೂಹಿಕವಾಗಿ ಸಾಲದ ಚೆಕ್‌ ವಿತರಿಸಲಾಯಿತು. ಅಲ್ಲಮಪ್ರಭು ಪಾಟೀಲ ಸ್ವಾಗತಿಸಿದರು. ಕಾರ್ಯದರ್ಶಿ ಶಿವಕುಮಾರ ಪಾಟೀಲ ನಿರೂಪಿಸಿದರು, ಸೂರ್ಯಕಾಂತ ಹುಲಿ ವಂದಿಸಿದರು.ಪಾಟೀಲ, ನಿರ್ದೇಶಕ ಶೈಲೇಶ ಹುಲಿ, ಶಕುಂತಲಾ ಹುಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next