Advertisement

ನಗರದಲ್ಲಿ 1.27 ಲಕ್ಷ ಅನಧಿಕೃತ ಉದ್ದಿಮೆ!

12:53 AM Mar 05, 2020 | Lakshmi GovindaRaj |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಬರೋಬ್ಬರಿ 1.27 ಲಕ್ಷ ಅನಧಿಕೃತ ಉದ್ದಿಮೆಗಳಿರುವುದು ಪಾಲಿಕೆ ಅಧಿಕಾರಿಗಳು ನಡೆಸಿರುವ ಮರು ಸಮೀಕ್ಷಾ ವರದಿಯಲ್ಲಿ ಬೆಳಕಿಗೆ ಬಂದಿದೆ. ಅನಧಿಕೃತ ಉದ್ದಿಮೆಗಳ ಮರು ಸಮೀಕ್ಷಾ ವರದಿ “ಉದಯವಾಣಿ’ಗೆ ಲಭ್ಯವಾಗಿದ್ದು, ಪಾಲಿಕೆಯಿಂದ ಪರವಾನಗಿ ಪಡೆದ ಉದ್ದಿಮೆಗಳಿಂತ ಅನಧಿಕೃತವಾಗಿ ನಡೆಯುತ್ತಿರುವ ಉದ್ದಿಮೆಗಳ ಸಂಖ್ಯೆಯೇ ದುಪಟ್ಟಿವೆ!

Advertisement

ಕಳೆದ ಡಿಸೆಂಬರ್‌ನಲ್ಲಿ ನಗರದಲ್ಲಿನ ಅನಧಿಕೃತ ಉದ್ದಿಮೆಗಳ ಬಗ್ಗೆ ನಗರದ 198 ವಾರ್ಡ್‌ಗಳಲ್ಲಿ ಪಾಲಿಕೆ ಅಧಿಕಾರಿಗಳೇ ಸಮೀಕ್ಷೆ ನಡೆಸಿ, ಅಧಿಕೃತವಾಗಿ 50,383 ಅನಧಿಕೃತವಾಗಿ 59,130 ಉದ್ದಿಮೆಗಳು ನಡೆಯುತ್ತಿವೆ ಎಂದು ವರದಿ ಸಲ್ಲಿಸಿದ್ದರು. ಬೆಸ್ಕಾಂ ವಾಣಿಜ್ಯ ವಿದ್ಯುತ್‌ ಸಂಪರ್ಕಕ್ಕೂ ಬಿಬಿಎಂಪಿ ಸಮೀಕ್ಷೆಯಲ್ಲಿ ಅಂಕಿ ಅಂಶದ ಉದ್ದಿಮೆಗಳಿಗೂ ಸಾಕಷ್ಟು ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಮರುಸಮೀಕ್ಷೆ ನಡೆಸುವಂತೆ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಎಚ್ಚರಿಕೆ ನೀಡಿದ್ದರು.

ಯಾವುದೇ “ರಾಜಿ’ ಮಾಡಿಕೊಳ್ಳದೆ ಸಮೀಕ್ಷೆ ನಡೆಸಬೇಕು. ಸಮೀಕ್ಷೆ ಪ್ರಾಮಾಣಿಕವಾಗಿ ಮಾಡಲಾಗಿದೆ ಎಂದು ಪ್ರಮಾಣಪತ್ರ ನೀಡಬೇಕು ಎಂದು ಆದೇಶಿಸಿದ್ದರು. ಅಲ್ಲದೆ, ಲೋಪ ಕಂಡುಬಂದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.ಹೀಗಾಗಿ, ಅಧಿಕಾರಿಗಳು ಮರು ಸಮೀಕ್ಷೆ ವೇಳೆ ಎಚ್ಚರಿಕೆ ವಹಿಸಿದ್ದಾರೆ. 1.27 ಲಕ್ಷ ಅನಧಿಕೃತ, 50,124 ಅಧಿಕೃತ ಒಟ್ಟು 1,78,001 ಉದ್ದಿಮೆಗಳಿವೆ ಎಂದು ಪಾಲಿಕೆ ಆರೋಗ್ಯ ವಿಭಾಗದ ಅಧಿಕಾರಿಗಳು ವರದಿ ಸಲ್ಲಿಕೆ ಮಾಡಿದ್ದಾರೆ.

ಬೆಸ್ಕಾಂ ಸಂಪರ್ಕ ಪಡೆದವರ ಸಂಖ್ಯೆಗೂ ಸಮೀಕ್ಷೆಯಲ್ಲಿ ವರದಿಯಾಗಿರುವ ವ್ಯತ್ಯಾಸದ ಬಗ್ಗೆಯೂ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಬೆಸ್ಕಾಂನಿಂದ ವಾಣಿಜ್ಯ ಉದ್ದೇಶಕ್ಕೆ ಒಟ್ಟು 5.04 ಲಕ್ಷ ವಿದ್ಯುತ್‌ ಸಂಪರ್ಕ ಪಡೆಯಲಾಗಿದ್ದು, ಇದರಲ್ಲಿ 1.53 ಲಕ್ಷ ಮಂದಿ ಒಂದೇ ಹೆಸರು ಹಾಗೂ ವಿಳಾಸ ನೀಡಿದ ವಿದ್ಯುತ್‌ ಸಂಪರ್ಕ ಪಡೆದುಕೊಂಡಿದ್ದಾರೆ. ಉಳಿದ 3.46 ಪ್ರತ್ಯೇಕ ವಾಣಿಜ್ಯ ವಿದ್ಯುತ್‌ ಸಂಪರ್ಕ ಪಡೆದಿದ್ದಾರೆ. ಕೆಎಂಸಿ ಕಾಯ್ದೆ ವ್ಯಾಪ್ತಿಗೆ 85 ಉದ್ದಿಮೆಗಳು ಸೇರುವುದಿಲ್ಲ. ಹೀಗಾಗಿ, ಉದ್ದಿಮೆಗಳ ಸಂಖ್ಯೆ ಕಡಿಮೆಯಾಗಿವೆ.

ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆಗಳು ಪರವಾನಗಿಯಿಂದ ಸುಮಾರು 10 ಸಾವಿರ ಉದ್ದಿಮೆಗಳು ರಿಯಾಯಿತಿ ನೀಡಲಾಗಿದೆ. ನಗರದಲ್ಲಿರುವ 3,500 ಮಾಂಸ ಮಾರಾಟ ಮಳಿಗೆಗಳು ಪ್ರತ್ಯೇಕವಾಗಿ ಪಾಲಿಕೆ ಪಶುಪಾಲನಾ ವಿಭಾಗದಿಂದ ಪರವಾನಗಿ ನೀಡಲಾಗುತ್ತಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಅಭಿವೃದ್ಧಿ ಪಡಿಸಿರುವ ಪ್ರದೇಶದಲ್ಲಿರುವ ಉದ್ದಿಮೆಗಳಿಗೆ ಪರವಾನಗಿಯಿಂದ ರಿಯಾಯಿತಿ ನೀಡಲಾಗಿದೆ ಎಂದು ಬಿಬಿಎಂಪಿ ಸಾರ್ವಜನಿಕ ಆರೋಗ್ಯ ವಿಭಾಗದ ಮುಖ್ಯ ಅಧಿಕಾರಿ ಡಾ.ವಿಜಯೇಂದ್ರ ವರದಿಯಲ್ಲಿ ಉಲ್ಲೇಖೀಸಿದ್ದಾರೆ.

Advertisement

ವಲಯ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ: ವಸತಿ ಪ್ರದೇಶದಲ್ಲಿ ಉದ್ದಿಮೆ ಪರವಾನಗಿ ನೀಡುವುದಕ್ಕೆ ಅವಕಾಶವಿಲ್ಲ. ಇದರ ಹೊರತಾಗಿಯೂ ಪಾಲಿಕೆ ವ್ಯಾಪ್ತಿಯ ವಸತಿ ಪ್ರದೇಶದಲ್ಲಿ ಹೋಟಲ್‌, ಔಷಧಿ ಅಂಗಡಿ ಸೇರಿದಂತೆ ವಾಣಿಜ್ಯ ಚಟುವಟಿಕೆಗಳು ನಡೆ ಯುತ್ತಿದ್ದು, ಬಿಬಿಎಂಪಿಗೆ ಆದಾಯ ಸೋರಿಕೆ ಯಾಗುತ್ತಿದೆ. ಸಾರ್ವಜನಿಕರಿಗೂ ತೊಂದರೆ ಯಾಗುತ್ತಿದೆ.

ಹೀಗಾಗಿ, ಅಗತ್ಯವಿರುವ ಉದ್ದಿಮೆಗಳಿಗೆ ಮಾತ್ರ ವಸತಿ ಪ್ರದೇಶದಲ್ಲಿ ಅವಕಾಶ ನೀಡುವ ಸಂಬಂಧಿಸಿದಂತೆ “ವಲಯ ನಿಯಂತ್ರಣ ಕಾಯ್ದೆ’ಗೆ ತಿದ್ದುಪಡಿ ಮಾಡಿರುವ ಬಿಬಿಎಂಪಿ ಅನುಮೋದನೆಗೆ ಸರ್ಕಾರಕ್ಕೆ ಕಳುಹಿಸಲಾಗಿದೆ. ನಗರಾಭಿವೃದ್ಧಿ ಇಲಾಖೆಯಲ್ಲಿ ಕಡತವಿದ್ದು, ಶೀಘ್ರದ ಅನುಮೋದನೆ ಪಡೆ ಯುವುದಕ್ಕೆ ಪ್ರಯತ್ನ ಮಾಡುತ್ತೇವೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ಅವರು ಮಾಹಿತಿ ನೀಡಿದ್ದಾರೆ.

ವಲಯವಾರು ಉದ್ದಿಮೆಗಳ ಮರು ಸಮೀಕ್ಷೆ ವಿವರ
ವಲಯ ಅಧಿಕೃತ ಅನಧಿಕೃತ ಒಟ್ಟು ಉದ್ದಿಮೆ
ದಕ್ಷಿಣ 11,429 32,933 44,362
ಪೂರ್ವ 7,929 20,931 28,860
ಪಶ್ಚಿಮ 12,972 50,274 63,246
ಯಲಹಂಕ 2,545 3,254 5,799
ಮಹದೇವಪುರ 5,046 3,044 8,090
ಬೊಮ್ಮನಹಳ್ಳಿ 3,683 9,497 13,180
ದಾಸರಹಳ್ಳಿ 1,639 2,301 3,940
ಆರ್‌ಆರ್‌ನಗರ 4,881 5,643 10,524
ಒಟ್ಟು 50,124 1,27,877 1,78,001

ಎಲ್ಲ ಅನಧಿಕೃತ ಉದ್ದಿಮೆಗಳ ಮಾಲೀಕರಿಗೂ ನೋಟಿಸ್‌ ನೀಡಲಾಗುವುದು. ಯೋಗ್ಯ ಉದ್ದಿಮೆಗಳಿಗೆ ದಂಡ ವಿಧಿಸಿ, ಪರವಾನಗಿ ನೀಡಲಾಗುವುದು. ಪರವಾನಗಿ ಕೊಡಲು ಸಾಧ್ಯವಿಲ್ಲದಿರುವ ಅನಧಿಕೃತ ಉದ್ದಿಮೆಗಳನ್ನು ಮುಚ್ಚಿಸಲಾಗುವುದು.
-ಬಿ.ಎಚ್‌.ಅನಿಲ್‌ಕುಮಾರ್‌, ಬಿಬಿಎಂಪಿ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next