ರಷ್ಯಾ ದೇಶ, ಉಕ್ರೇನ್‌ನ ಮೇಲೆ ಯುದ್ಧ ಆರಂಭಿಸಿದಾಗಿನಿಂದ ಇಲ್ಲಿಯವರೆಗೆ ಉಕ್ರೇನ್‌ನ ಸುಮಾರು 1.20 ಲಕ್ಷ ಜನರು ಪಕ್ಕದ ಪೋಲೆಂಡ್ ಹಾಗೂ ಇನ್ನಿತರ ರಾಷ್ಟ್ರಗಳಿಗೆ ವಲಸೆ ಹೋಗಲಾರಂಭಿಸಿದ್ದಾರೆ. ಗುರುವಾರ ಹಾಗೂ ಶುಕ್ರವಾರಗಳ 48 ಗಂಟೆಗಳಲ್ಲೇ ಸುಮಾರು 50 ಸಾವಿರಕ್ಕಿಂತಲೂ ಹೆಚ್ಚು ವಲಸೆ ಹೋಗಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಆಯೋಗ ತಿಳಿಸಿದೆ.
ಉಕ್ರೇನ್‌ನ ನಾನಾ ಪಟ್ಟಣಗಳು, ಹಳ್ಳಿಗಳಿಂದ ಜನರು, ಹಗಲು ರಾತ್ರಿಯೆನ್ನದೆ, ತಮ್ಮ ಮಕ್ಕಳು, ಸಾಮಾನು- ಸರಂಜಾಮುಗಳನ್ನು ಕಟ್ಟಿಕೊಂಡು ಗುಂಪಾಗಿ ಗಡಿಗಳತ್ತ ನಡೆದು ಹೋಗುತ್ತಿರುವ ದೃಶ್ಯಗಳು ಈಗ ಮಾಮೂಲು ಎಂಬಂತಾಗಿದೆ. ಕೆಲವರು, ಕಾರು, ಬಸ್, ಟೆಂಪೋಗಳನ್ನು ಹತ್ತಿಕೊಂಡು ಗಡಿಗಳತ್ತ ಪ್ರಯಾಣ ಬೆಳೆಸುತ್ತಿದ್ದಾರೆ.
ಇತರ ರಾಷ್ಟ್ರಗಳಲ್ಲಿರುವ ಅವರ ಸ್ನೇಹಿತರು, ಸಂಬಂಧಿಕರು, ಗಡಿಗಳಲ್ಲಿ ನಿಂತು ತಮ್ಮವರನ್ನು ಸ್ವಾಗತಿಸಿ ಕರೆದುಕೊಂಡು ಹೋಗುತ್ತಿದ್ದಾರೆ. ಆಯಾ ದೇಶಗಳ ಸರಕಾರಗಳು ಗಡಿಗಳಲ್ಲಿ ಉಕ್ರೇನ್‌ನಿಂದ ಬರುತ್ತಿರುವ ನಿರಾಶ್ರಿತರಿಗಾಗಿ ಸ್ವಾಗತ ಕೇಂದ್ರಗಳನ್ನು ತೆರೆದಿವೆ.
ಪೋಲೆಂಡ್ ಮಾನವೀಯತೆ: ಅದರಲ್ಲೂ ಈ ವಿಚಾರದಲ್ಲಿ ಮುಂದಿರುವುದು ಶ್ಲಾಘನೀಯ. 90ರ ದಶಕದಲ್ಲಿ ಮಧ್ಯಪ್ರಾಚ್ಯ ಹಾಗೂ ಆಫ್ರಿಕಾ ರಾಷ್ಟ್ರಗಳಿಂದ ಬಂದಿದ್ದ ವಲಸಿಗರನ್ನು ತನ್ನಲ್ಲಿ ಬಿಟ್ಟುಕೊಂಡು ಅನಂತರ ಮೂಲಸೌಕರ್ಯ ಮುಂತಾದ ವಿಚಾರಗಳಲ್ಲಿ ವಲಸಿಗರು ಮತ್ತು ಮೂಲ ನಿವಾಸಿಗಳ ನಡುವಿನ ಆಂತರಿಕ ಸಂಘರ್ಷ ನಡೆದಿದ್ದನ್ನು ಕಣ್ಣಾರೆ ಕಂಡಿದ್ದರೂ ಈಗ ಉಕ್ರೇನ್‌ನಿಂದ ಬರುವ ನಿರಾಶ್ರಿತರನ್ನು ಕೈಬೀಸಿ ಕರೆಯುತ್ತಾ ಮಾನವೀಯತೆ ಮೆರೆಯುತ್ತಿದೆ.
ಅಜ್ಜ, ಅಜ್ಜಿಯನ್ನು ಬಿಟ್ಟು ಬಂದಿದ್ದಕ್ಕೆ ಕಣ್ಣೀರು!
ಉಕ್ರೇನ್‌ನ ಚೆರ್ನಿವ್‌ಟ್ಸೆ ನಗರದಿಂದ ಬಂದಿದ್ದ ಕುಟುಂಬ 20 ಗಂಟೆಗಳ ನಡೆದು ಪೋಲೆಂಡ್ ಗಡಿ ತಲುಪಿದೆ. ಅಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಈ ಕುಟುಂಬದ 14 ವರ್ಷದ ಬಾಲೆ ನಟಾಲಿಯಾ ಗೌರ್ನಿಕ್, ನಡೆಯಲಾಗದ ತಮ್ಮ ಅಜ್ಜ-ಅಜ್ಜಿಗೆ ಮನಸ್ಸಿಲ್ಲದ ಮನಸ್ಸಿನಿಂದ ಬಿಟ್ಟು ಬಂದಿದ್ದಕ್ಕೆ ಕಣ್ಣೀರು ಹಾಕಿದ್ದಾಳೆ. “ಯುದ್ಧ ನಿಂತರೆ ಸಾಕು, ನನ್ನ ಅಜ್ಜ-ಅಜ್ಜಿಯರನ್ನು ನೋಡಲು ನಾನು ನನ್ನೂರಿಗೆ ಓಡಿ ಹೋಗುವೆ’ ಎಂದು ಅಲವತ್ತುಕೊಂಡಿದ್ದಾಳೆ.