ಹನೂರು: ಪಟ್ಟಣ ವ್ಯಾಪ್ತಿಯ ಸಮಗ್ರ ಕಸ ವಿಲೇವಾರಿಗಾಗಿ 1.2ಕೋಟಿ ರೂ. ಅನುದಾನ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದಿದ್ದು ಈ ಅನುದಾನದಲ್ಲಿ 3 ಟಿಪ್ಪರ್, 1 ಜೆಸಿಬಿ ಸೇರಿ ಅಗತ್ಯ ವಾಹನ ಖರೀದಿಸಲು ಪ್ರಕ್ರಿಯೆ ಆರಂಭವಾಗಿದ್ದು ಶೀಘ್ರ ಟೆಂಡರ್ ಕರೆಯಲಾಗುವುದು ಎಂದು ಶಾಸಕ ಆರ್.ನರೇಂದ್ರ ತಿಳಿಸಿದರು. ಪಟ್ಟಣದ ಹೊರವಲಯದ ಹುಲುಸುಗುಡ್ಡೆ ಸಮೀಪದ ಘನತ್ಯಾಜ್ಯ ವಿಲೇವಾರಿ ಘಟಕದ 1.37 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ರೈತರಿಗೆ ಗೊಬ್ಬರ ವಿತರಣೆ: ಸ್ವಚ್ಛ ಭಾರತ್ ಯೋಜನೆಯಡಿ ಹನೂರು ಪಪಂ ಘನ ತ್ಯಾಜ್ಯ ವಿಲೇವಾರಿ ಘಟಕದ ಅಭಿವೃದ್ಧಿ ಕಾಮಗಾರಿಗಳಿಗೆ 1.37ಕೋಟಿ ರೂ. ಅನುದಾನ ಮಂಜೂರಾಗಿದೆ. ಈ ಅನುದಾನದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಅವಶ್ಯಕವಾದ ಶೌಚಾಲಯ, ಭದ್ರತಾ ಸಿಬ್ಬಂದಿ ಕೊಠಡಿ, ರಸ್ತೆ, ಚರಂಡಿ, ಡೆಕ್‌ಸ್ಲಾಬ್, ಒಣಕಸವನ್ನು ಕಾಂಪೋಸ್ಟ್ ಮಾಡಿ ಗೊಬ್ಬರ ತಯಾರಿಕೆ ಘಟಕ ಸೇರಿದಂತೆ ಅಗತ್ಯ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ಘಟಕದಲ್ಲಿ ಒಣಕಸವನ್ನು ಕಾಂಪೋಸ್ಟ್ ಮಾಡಿ ಗೊಬ್ಬರವನ್ನಾಗಿಸಿ ರೈತರಿಗೆ ವಿತರಿಸಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
ಹೆಚ್ಚುವರಿ 1.2ಕೋಟಿ ರೂ. ಅನುದಾನ: ಪಟ್ಟಣದಲ್ಲಿ ಸಮರ್ಪಕ ಕಸ ವಿಲೇವಾರಿಗಾಗಿ ಅಗತ್ಯ ವಾಹನಗಳ ಕೊರತೆ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ 1.2ಕೋಟಿ ಹೆಚ್ಚುವರಿ ಅನುದಾನ ಮಂಜೂರಾಗಿದ್ದು ಜಿಲ್ಲಾಧಿಕಾರಿಗಳ ಖಾತೆಗೆ ವರ್ಗಾವಣೆಯಾಗಿದೆ. ಈ ಅನುದಾನದಲ್ಲಿ ಕಸ ವಿಲೇವಾರಿಗೆ ಅವಶ್ಯಕವಾದ ಟಿಪ್ಪರ್ ವಾಹನ, ಜೆಸಿಬಿ ವಾಹನ ಸೇರಿ ಅಗತ್ಯ ವಾಹನ ಖರೀದಿಸಲು ಈಗಾಗಲೇ ಪ್ರಕ್ರಿಯೆ ಆರಂಭಿಸಲಾಗಿದೆ. ಅತಿ ಶೀಘ್ರವಾಗಿ ಟೆಂಡರ್ ಪ್ರಕ್ರಿಯೆ ಮುಗಿಸಿ ಸಾರ್ವಜನಿಕ ಸೇವೆಗೆ ದೊರಕಿಸಿಕೊಡಲಾಗುವುದು ಎಂದು ತಿಳಿಸಿದರು.
ಸಾರ್ವಜನಿಕರೂ ಕೈ ಜೋಡಿಸಿ: ಪಟ್ಟಣದ ನಿವಾಸಿಗಳ ಆರೋಗ್ಯದ ಹಿತದೃಷ್ಟಿಯಿಂದ ಕಸ ವಿಲೇವಾರಿ ಪ್ರಕ್ರಿಯೆ ಅತ್ಯವಶ್ಯಕ. ಈ ನಿಟ್ಟಿನಲ್ಲಿ ಪಪಂ ಸಮರ್ಪಕ ನಿರ್ವಹಣೆಗೆ ಹಲವಾರು ಕ್ರಮ ಕೈಗೊಂಡಿದ್ದು ಸಾರ್ವಜನಿಕರೂ ಕೈ ಜೋಡಿಸಬೇಕು. ಪಟ್ಟಣ ಶುಚಿಯಾಗಿರಬೇಕಾದರೆ ಪ್ರತಿ ಬಡಾವಣೆ, ಪ್ರತಿ ಮನೆಯೂ ಶುಚಿಯಾಗಿರಬೇಕು. ಈ ನಿಟ್ಟಿನಲ್ಲಿ ಪಟ್ಟಣ ವಾಸಿಗಳು ತಮ್ಮ ಮನೆಯಿಂದಲೇ ಸ್ವಚ್ಛತೆಗೆ ಆದ್ಯತೆ ನೀಡಬೇಕು.
ಪ್ರತಿನಿತ್ಯ ಬೆಳಗ್ಗೆ ಮನೆಯಲ್ಲಿ ಸಂಗ್ರಹವಾದ ಕಸವನ್ನು ಪಪಂ ವಾಹನಗಳಿಗೆ ನೀಡುವ ಮುನ್ನ ಹಸಿ ಕಸ ಮತ್ತು ಒಣಕಸವನ್ನಾಗಿ ವಿಭಜಿಸಬೇಕೆಂದರು. ಮನೆ ಸುತ್ತಮುತ್ತ ಶುಚಿಯಾಗಿಟ್ಟುಕೊಳ್ಳುವ ಮೂಲಕ ಉತ್ತಮ ಪರಿಸರ ನಿರ್ಮಾಣ ಮಾಡಿ ಸ್ವಚ್ಛ ಪಟ್ಟಣವನ್ನಾಗಿಸಲು ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.
ತಾಪಂ ಅಧ್ಯಕ್ಷ ರಾಜೇಂದ್ರ, ಪಪಂ ಸದಸ್ಯರಾದ ಸೋಮಣ್ಣ, ಸಂಪತ್‌ಕುಮಾರ್, ಹರೀಶ್‌ಕುಮಾರ್, ಪಪಂ ಮುಖ್ಯಾಧಿಕಾರಿ ಮೂರ್ತಿ, ಕಿರಿಯ ಅಭಿಯಂತರ ಶಿವಶಂಕರ್ ಆರಾಧ್ಯ, ಮುಖಂಡರಾದ ಸುದರ್ಶನ್, ದಂಟಳ್ಳಿ ಬಸವರಾಜು, ನಟರಾಜು, ಗಂಗಣ್ಣ ಇದ್ದರು.