ಶಹಾಬಾದ: ಭಂಕೂರ ಗ್ರಾಮದಲ್ಲಿ ಕೆಬಿಜಿಎನ್ ಎಲ್ ಮತ್ತು ನೀರು ಸರಬರಾಜು ಮಂಡಳಿಯಿಂದ ಸುಮಾರು 1 ಕೋಟಿ 14 ಲಕ್ಷ ರೂ. ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಎಂದು ಚಿತ್ತಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಹೇಳಿದರು.
ತಾಲೂಕಿನ ಭಂಕೂರ ಗ್ರಾಮದ ಗಾಯಕವಾಡ ಫಂಕ್ಷನ್ ಹಾಲ್‌ನಲ್ಲಿ ಶನಿವಾರ ಆಯೋಜಿಸಲಾಗಿದ್ದ ವಿವಿಧ ಕಾಮಗಾರಿಗಳ ಅಡಿಗಲ್ಲು ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಂಕೂರ ಗ್ರಾಮದಲ್ಲಿ ಕೆಬಿಜಿಎನ್‌ಎಲ್ ಯೋಜನೆಯಡಿ ಸುಮಾರು 89 ಲಕ್ಷ ರೂ. ಅನುದಾನದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಮಾಡಲಾಗುತ್ತಿದೆ. ನೀರು ಸರಬರಾಜು ಮಂಡಳಿಯಿಂದ 25 ಲಕ್ಷ ರೂ.ಅನುದಾನದಲ್ಲಿ ಹೌಸಿಂಗ್ ಸೊಸೈಟಿಯಲ್ಲಿ ನೀರಿನ ಟ್ಯಾಂಕ್ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಇಲ್ಲಿನ ಜನರ ಬಹುದಿನಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ಹೇಳಿದರು.
ಮಾಜಿ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆ ಚಿತ್ತಾಪುರ ತಾಲೂಕಿನಲ್ಲಿ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಮಾಡಿದ್ದಾರೆ. ಅವರ ಅಭಿವೃದ್ಧಿ ಕಾರ್ಯವನ್ನು ಜನರೇ ಹೇಳುತ್ತಾರೆ ಎಂದರು.
ಜಿಪಂ ಮಾಜಿ ಸದಸ್ಯ ಶಿವಾನಂದ ಪಾಟೀಲ ಮರತೂರ ಮಾತನಾಡಿ, ಚಿತ್ತಾಪುರ ತಾಲೂಕಿನಲ್ಲಿ ಶೈಕ್ಷಣಿಕ ಹಬ್ ನಿರ್ಮಿಸುವ ಮೂಲಕ ಇಡೀ ರಾಜ್ಯದ ಜನರು ತಾಲೂಕಿನ ಅಭಿವೃದ್ಧಿ ಕುರಿತು ಮಾತನಾಡುವಂತೆ ಆಗಿದೆ. ತಾಲೂಕಿನ ಗ್ರಾಮಗಳಿಗೆ ಸಿಸಿ ರಸ್ತೆ, ಚರಂಡಿ ನಿರ್ಮಾಣ, ಸಮುದಾಯ ಭವನ, ನೀರಿನ ಸಮಸ್ಯೆಯನ್ನು ಶಾಸಕರು ಬಗೆಹರಿಸಿದ್ದಾರೆ ಎಂದು ಹೇಳಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ದುಗೌಡ ಪಾಟೀಲ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಲ್ಲಿಕಾರ್ಜುನ ಪೂಜಾರಿ, ತಾಪಂ ಇಒ ಡಾ| ಬಸಲಿಂಗಪ್ಪ ಡಿಗ್ಗಿ, ಸಾಬಣ್ಣಾ ಅಣ್ಣಿಕೇರಿ, ಮಹೇಶ ಧರಿ, ಗ್ರಾಮ ಪಂಚಾಯಿತಿ ಸದಸ್ಯರಾದ ಶರಣಗೌಡ ದಳಪತಿ, ಶರಣಬಸಪ್ಪಾ ಧನ್ನಾ, ಮಲ್ಲಿಕಾರ್ಜುನ ಧರಿ, ರಮೇಶ ಕಾಳನೂರ, ಜಗದೀಶ ಮುತ್ತಗಾ, ದೇವಣ್ಣ ಹಳ್ಳಿ, ದೇವರಾಜ, ಭರತ್, ಮುಖಂಡರಾದ ಸುರೇಶ ಮೆಂಗನ, ಮೃತ್ಯುಂಜಯ ಹಿರೇಮಠ, ದೇವೇಂದ್ರ ಕಾರೊಳ್ಳಿ, ತಾಪಂ ಸದಸ್ಯ ನಾಮದೇವ ರಾಠೊಡ, ಅಮೃತ ಮಾನಕರ, ರಜನಿಕಾಂತ ಕಂಬಾನೂರ, ಗಂಗಾಧರ ಧರಿ, ಅಪ್ಪು ಕೊಳ್ಳಿ, ಪ್ರಭುಲಿಂಗ ಪೂಜಾರಿ, ಚಂದು ಜಾಧವ, ಮುಜಾಹಿದ್ ಹುಸೇನ್ ಇದ್ದರು.