ನಾಸಿಕ್ : ದೇಶದಾದ್ಯಂತ ಕೋವಿಡ್ ರೂಪಾಂತರಿ ಅಲೆ ಏರಿಕೆಯಾಗುತ್ತಿರುವ ಕಾರಣದಿಂದ ಕೇಂದ್ರ ಸರ್ಕಾರ ಕಟ್ಟು ನಿಟ್ಟಿನ ಕ್ರಮಗಳನ್ನು ಜಾರಿಗೊಳಿಸುವುದರ ಬಗ್ಗೆ ಈಗಾಗಲೆ ಸಾರ್ವಜನಿಕರಿಗೆ ಎಚ್ಚರಿಕೆಯನ್ನು ನೀಡಿದೆ. ದೇಶದ ಕೆಲವೊಂದು ರಾಜ್ಯಗಳಲ್ಲಿ ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಕಾರಣದಿಂದ ಸೋಂಕು ನಿವಾರಣೆಗಾಗಿ ನಿರ್ಬಂಧಗಳನ್ನು ಹೇರುತ್ತಿವೆಯಾದರೂ ಜನರು ಅದಕ್ಕೆ ಸರಿಯಾಗಿ ಸ್ಪಂದಿಸಿದಂತೆ ಕಾಣಿಸುತ್ತಿಲ್ಲ. ಕೆಲವೊಂದು ರಾಜ್ಯಗಳಲ್ಲಿ ಸರ್ಕಾರಿ ಕೋವಿಡ್ ನಿಯಮಾವಳಿಗಳನ್ನು ಪಾಲಿಸದಿರುವವರಿಗೆ ದಂಡವನ್ನು ಕೂಡ ಹಾಕಲಾಗುತ್ತಿದೆ.
ಕೋವಿಡ್ ಹಾಟ್ ಸ್ಪಾಟ್ ಎಂದು ಕರೆಸಿಕೊಂಡಿದ್ದ ಮಹಾರಾಷ್ಟ್ರದಲ್ಲಿ ಮತ್ತೆ ರೂಪಾಂತರಿ ಸೋಂಕು ತನ್ನ ಹರಡುವ ವೇಗವನ್ನು ದಿನನಿತ್ಯ ಹೆಚ್ಚಿಸಿಕೊಳ್ಳುತ್ತಿದ್ದು, ಸರ್ಕಾರ ಲಾಕ್ಡೌನ್ ಬಗ್ಗೆ ಚಿಂತಿಸುವಂತೆ ಮಾಡಿದೆ.
ಓದಿ : ನಿತ್ಯಭವಿಷ್ಯ: ಈ ರಾಶಿಯವರಿಗೆ ಶತ್ರುಗಳೇ ಅಚ್ಚರಿಗೊಳ್ಳುವಂತೆ ಯಶಸ್ಸು ಸಿಗಲಿದೆ !
ಈ ಹಿನ್ನಲೆಯಲ್ಲಿ ಮಹಾರಾಷ್ಟ್ರದ ಒಂದು ನಗರದಲ್ಲಿ ಮಾರುಕಟ್ಟೆಗಳಿಗೆ ಬರುವ ಜನರಿಗೆ, ಅಲ್ಲಿನ ಆಡಳಿತ ಒಂದಿಷ್ಟು ನಿರ್ಬಂಧಗಳನ್ನು ಹಾಕಿದ್ದು, ಈಗ ಮಾದರಿ ಬೆಳವಣಿಗೆ ಎಂದು ಹೇಳಿಸಿಕೊಳ್ಳುತ್ತಿದೆ. ಹೌದು, ಪಶ್ಚಿಮ ಭಾರತದ ಮಹಾರಾಷ್ಟ್ರದ ಪ್ರಾಚಿನ ನಗರ ಎಂದು ಕರೆಸಿಕೊಳ್ಳುವ ನಾಸಿಕ್ ನಗರದ ಆಡಳಿತ ಕೋವಿಡ್ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮಾರುಕಟ್ಟೆಗೆ ಬರುವ ಎಲ್ಲಾ ನಾಗರಿಕರಿಗೆ ಶುಲ್ಕ ವಿಧಿಸಲು ಮುಂದಾಗಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ನಾಸಿಕ್ ನಗರದ ಪೊಲೀಸ್ ಆಯುಕ್ತ ದೀಪಕ್ ಪಾಂಡೆ, ನಾಸಿಕ್ ನಲ್ಲಿ ಕೋವಿಡ್ 19 ಹರಡುವಿಕೆಯನ್ನು ನಿಯಂತ್ರಿಸಲು ನಾವು ವಿಭಿನ್ನ ವಿಧಾನವನ್ನು ಬಳಸುತ್ತಿದ್ದೇವೆ. ಮಾರುಕಟ್ಟೆಗೆ ಬರುವ ಪ್ರತಿ ವ್ಯಕ್ತಿಗೆ ಗಂಟೆಗೆ 5 ರೂ. ಟಿಕೆಟ್ ನ್ನು ನೀಡುತ್ತಿದ್ದೇವೆ. ಇದು ನಗರವನ್ನು ಲಾಕ್ ಡೌನ್ ಗೆ ಒಳಗಾಗದಂತೆ ಮಾಡುವ ಪ್ರಯತ್ನವಾಗಿದೆ” ಎಂದು ಅವರು ಹೇಳಿದ್ದಾರೆ.
ಇನ್ನು, ಮಾರ್ಚ್ 30 ರಂದು ಮಹಾರಾಷ್ಟ್ರದಲ್ಲಿ ಬರೋಬ್ಬರಿ 27, 918 ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 139 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಏತನ್ಮಧ್ಯೆ, ರಾಜ್ಯ ಆರೋಗ್ಯ ಸಚಿವ ರಾಜೇಶ್ ಟೊಪೆ, ವೈರಸ್ ಪರೀಕ್ಷೆಗೆ ಒಳಪಡುವಂತೆ ಮಹಾರಾಷ್ಟರ ಜನರಿಗೆ ಕೋರಿಕೊಂಡಿದ್ದು, “ಈಗಾಗಲೇ ಆಸ್ಪತ್ರೆಗಳಿಗೆ ಐಸಿಯು ಮತ್ತು ಆಕ್ಸಿಜನ್ ಬೆಡ್ ಗಳು ತುಂಬುತ್ತಿವೆ. ಪರೀಕ್ಷೆಗೆ ಒಳಪಡಬೇಕೆಂದು ನಾನು ಎಲ್ಲರಿಗೂ ಮನವಿ ಮಾಡುತ್ತೇನೆ” ಎಂದು ರಾಜೇಶ್ ಟೊಪೆ ಹೇಳಿದ್ದಾರೆ.
ಇನ್ನು, ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ಸೋಂಕಿನ ಬಗ್ಗೆ ಮಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವ ನವಾಬ್ ಮಲಿಕ್, ರಾಜ್ಯಕ್ಕೆ ಲಾಕ್ಡೌನ್ ಹೇರಲು ಸಾಧ್ಯವಿಲ್ಲ ಮತ್ತು ಲಾಕ್ಡೌನ್ ಬದಲಾಗಿ ಬೇರೆ ಆಯ್ಕೆಗಳನ್ನು ಪರಿಗಣಿಸುವಂತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಕೇಳಿಕೊಂಡಿದ್ದೇವೆ ಎಂದು ಹೇಳಿದ್ದಾರೆ.
ಓದಿ : ಐಪಿಎಲ್‌ನಲ್ಲಿ ಹೊಸತನ: ಈ ಬಾರಿಯ ಐಪಿಎಲ್ ನಿಯಮಗಳಲ್ಲಿ ಬಿಸಿಸಿಐನಿಂದ ಪ್ರಮುಖ ಬದಲಾವಣೆ