Advertisement
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪುತ್ತೂರು ವಿಭಾಗ ವ್ಯಾಪ್ತಿಯ ಪುತ್ತೂರು ವಿಧಾನಸಭಾ ಕ್ಷೇತ್ರದ ಸಾರಿಗೆ ಸಮಸ್ಯೆಗಳ ಬಗ್ಗೆ ಸಾರಿಗೆ ಅದಾಲತ್ ಫೆ.10 ರಂದು ಶಾಸಕ ಸಂಜೀವ ಮಠಂದೂರು ಅವರ ಅಧ್ಯಕ್ಷತೆಯಲ್ಲಿ ಪುತ್ತೂರು ಟೌನ್‌ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು. ಪುತ್ತೂರು-ತಿಂಗಳಾಡಿ 13 ಕಿ.ಮೀ.ಗೆ ಪ್ರಯಾಣಿಕರಿಗೆ 20 ರೂ. ಟಿಕೆಟ್ ದರವಿದೆ. ಇಷ್ಟೇ ದೂರ ಹೊಂದಿರುವ ಉಪ್ಪಿನಂಗಡಿಗೆ 15 ರೂ. ಇದೆ. ಇಂತಹ ತಾರತಮ್ಯ ಏಕೆ ಎಂದು ಕೃಷ್ಣ ಪ್ರಸಾದ್ ರೈ ಪ್ರಸ್ತಾವಿಸಿದರು. ಸ್ಟೇಜ್ ಆಧಾರದಲ್ಲಿ ದರ ನಿಗದಿಪಡಿಸಲಾಗುವುದು. ಹಾಗಾಗಿ ವ್ಯತ್ಯಾಸ ಬಂದಿದೆ ಎಂದು ಅಧಿಕಾರಿಗಳು ಉತ್ತರಿಸಿದರೂ ಒಂದೇ ದೂರಕ್ಕೆ ಎರಡು ರೀತಿಯ ದರ ಸರಿಯಲ್ಲ. ಇದನ್ನು ಸರಿಪಡಿಸುವಂತೆ ಶಾಸಕರು ಸೂಚಿಸಿದರು.
ಹೊಸ ರೂಟ್‌ಗಳಲ್ಲಿ ಬಸ್ ಓಡಾಟಕ್ಕೆ ಅನುಮತಿ ನೀಡುವಂತೆ ಹಲವು ಬೇಡಿಕೆಗಳು ವ್ಯಕ್ತವಾಗಿರುವ ಬಗ್ಗೆ ಉತ್ತರಿಸಿದ ಅಧಿಕಾರಿ ಮುರಳೀಧರ್, ಸಮಗ್ರ ಪ್ರಾದೇಶಿಕ ಯೋಜನೆಯಡಿ ಕೆಎಸ್‌ಆರ್‌ಟಿಸಿ ವಿಭಾಗೀಯ ವ್ಯಾಪ್ತಿಯ 700ಕ್ಕೂ ಅಧಿಕ ಅನುಸೂಚಿಗಳಲ್ಲಿ ಬಸ್ ಓಡಾಟಕ್ಕೆ ಅನುಮತಿ ನೀಡುವಂತೆ ಆರ್‌ಟಿಒ ಮೂಲಕ ಡೆಪ್ಯುಟಿ ಕಮಿಷನರ್‌ಗೆ ಮನವಿ ಸಲ್ಲಿಸಲಾಗಿದೆ. ಅನುಮತಿ ದೊರೆತ ಅನಂತರ ಬೇಡಿಕೆ ಇರುವ ರೂಟ್‌ಗಳಲ್ಲಿ ಬಸ್ ಓಡಾಟ ಆರಂಭಿಸಲಾಗುವುದು ಎಂದರು. ಅದಕ್ಕಾಗಿ 130 ಹೊಸ ಬಸ್‌ಗಳ ಅಗತ್ಯವಿದೆ. ಸಮಗ್ರ ಪ್ರಾದೇಶಿಕ ಯೋಜನೆಯಡಿ ಅನುಮತಿ ಸಿಕ್ಕಲ್ಲಿ ಖಾಸಗಿ ರೂಟ್‌ಗಳಲ್ಲಿ ಕೂಡ ಸರಕಾರಿ ಬಸ್ ಓಡಾಟ ನಡೆಸಲು ಅವಕಾಶ ಸಿಗಲಿದೆ ಎಂದು ಅಧಿಕಾರಿ ಮುರಳೀಧರ ರಾವ್ ಹೇಳಿದರು. ವರ್ತನೆ ಬಗ್ಗೆ ನಿಗಾ ಇರಲಿ
ಶಾಸಕ ಸಂಜೀವ ಮಠಂದೂರು ಮಾತನಾಡಿ, ಬಸ್ ಚಾಲಕರ, ನಿರ್ವಾಹಕರ ವರ್ತನೆ ಬಗ್ಗೆ ಪ್ರಯಾಣಿಕರಿಂದ ಸಾಕಷ್ಟು ದೂರುಗಳು ಬಂದಿವೆ. ಇದರಿಂದ ಪ್ರಯಾಣಿಕರು ಬಸ್ ಸಂಚಾರದಿಂದ ದೂರ ಉಳಿಯುವ ಸಾಧ್ಯತೆ ಇದೆ. ಸೇವೆ ಸಮರ್ಪಕವಾಗಿದ್ದರೆ ಮಾತ್ರ ಪ್ರಯಾಣಿಕರ ವಿಶ್ವಾಸ ಗಳಿಸಲು ಸಾಧ್ಯವಿದ್ದು, ಈ ಬಗ್ಗೆ ಗಮನಹರಿಸುವಂತೆ ಶಾಸಕರು ಅಧಿಕಾರಿಗಳಿಗೆ ನಿರ್ದೇಶಿಸಿದರು.
Related Articles
Advertisement
ಪ್ರಯಾಣಿಕನಿಗಿಂತ ಕೋಳಿ ಭಾರಕೆಎಸ್ಆರ್ಟಿಸಿ ಬಸ್‌ನಲ್ಲಿ ಪ್ರಯಾಣಿಕ ತನ್ನ ಜತೆ ಕೋಳಿ ಕೊಂಡೊಯ್ದರೆ ಅದಕ್ಕೂ ಟಿಕೆಟ್ ವಿಧಿಸಲಾಗುತ್ತಿದೆ ಎಂಬ ವಿಚಾರ ಚರ್ಚೆಗೆ ಈಡಾಯಿತು. ವಿಷಯ ಪ್ರಸ್ತಾವಿಸಿದ ಶಾಸಕರು, ಧಾರ್ಮಿಕ ಕೇಂದ್ರಕ್ಕೆ ಪ್ರಯಾಣಿಕರೋರ್ವರು ಬಸ್ ಮೂಲಕ ಕೋಳಿ ಕೊಂಡೊ ಯ್ಯುತ್ತಿದ್ದರು. ಕೋಳಿಗೆ 50 ರೂ., ಪ್ರಯಾಣಿಕರಿಗೆ 20 ರೂ.ಟಿಕೆಟ್ ವಿಧಿಸಿರುವ ಬಗ್ಗೆ ದೂರು ಬಂದಿದೆ ಎಂದರು. ಉತ್ತರಿಸಿದ ಅಧಿಕಾರಿ ಕೋಳಿ ಸಹಿತ ಎಲ್ಲ ಪ್ರಾಣಿಗಳಿಗೂ ಟಿಕೆಟ್ ಇದೆ. ಕೋಳಿ ಮಾಂಸಕ್ಕೂ ದರ ವಿಧಿಸಬೇಕು ಎಂದು ಸುತ್ತೋಲೆ ಇದೆ ಎಂದರು. ಈ ವಿಚಾರ ಚರ್ಚೆಗೆ ಒಳಗಾಗಿ ಧಾರ್ಮಿಕ ಕೇಂದ್ರಗಳಿಗೆ ಹರಕೆ ರೂಪದಲ್ಲಿ ಕೋಳಿ ಕೊಂಡು ಹೋಗುವ ಕ್ರಮವಿದೆ. ಹಾಗಾಗಿ ಕೋಳಿಗೆ ಟಿಕೆಟ್ ವಿಧಿಸಬಾರದು ಎಂದರು. ಪ್ರಮುಖ ಬೇಡಿಕೆಗಳು
– ಪುರುಷರಕಟ್ಟೆ-ಕಲ್ಲಮ-ಮುಂಡೂರು ರಸ್ತೆಯಲ್ಲಿ ಹತ್ತು ವರ್ಷಗಳ ಹಿಂದೆ ಬಸ್ ಓಡಾಟ ಇದ್ದು, ಅದನ್ನು ಪುನರಾರಂಭಿಸಬೇಕು: ರಾಧಾಕೃಷ್ಣ ರೈ
– ಮುಂಡೂರು-ತಿಂಗಳಾಡಿ ಮಾರ್ಗದಲ್ಲಿ ಸಂಚರಿಸುವ ಬಸ್ ಅನ್ನು ಸಂಜೆ ವೇಳೆ ಕೊಡಿಮರ ಪ್ರದೇಶದಿಂದ ಪುನಃ ಪುತ್ತೂರಿನ ಕಡೆಗೆ ತಿರುಗಿಸಲಾಗುತ್ತಿದೆ. ಇದರಿಂದ ತಿಂಗಳಾಡಿಯಲ್ಲಿ ಕಾಯುವ ಪ್ರಯಾಣಿಕರಿಗೆ ತೊಂದರೆ ಆಗುತ್ತಿದ್ದು, ತಿಂಗಳಾಡಿ ತನಕ ಬಸ್ ಓಡಾಟ ನಡೆಸಬೇಕು : ಕರುಣಾಕರ ಗೌಡ ಎಲಿಯ
– ಪುತ್ತೂರಿನಿಂದ ಬೆ. 7.30ಕ್ಕೆ ಪೆರ್ಲಂಪಾಡಿ ಮಾರ್ಗವಾಗಿ ಸುಬ್ರಹ್ಮಣ್ಯಕ್ಕೆ ಬಸ್ ಓಡಾಟ ನಡೆಸಬೇಕು. ಇದರಿಂದ ಬೆಳ್ಳಾರೆ, ನಿಂತಿಕಲ್ಲು ವಿದ್ಯಾಸಂಸ್ಥೆಗೆ ಕೊಳ್ತಿಗೆ, ಪೆರ್ಲಂಪಾಡಿ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ: ಶಿವರಾಮ ಭಟ್
– ಅಡ್ಯನಡ್ಕ ಹೈಸ್ಕೂಲು, ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿದೆ. ಪಕಳಕುಂಜದಿಂದ ಅಡ್ಯನಡ್ಕಕ್ಕೆ ಬೆಳಗ್ಗೆ, ಸಂಜೆ ಬಸ್ ಓಡಾಟಕ್ಕೆ ವ್ಯವಸ್ಥೆ ಕಲ್ಪಿಸಬೇಕು: ವಸಂತ
– ಕೇರಳ ಭಾಗಕ್ಕೆ ಒಳಪಟ್ಟಿರುವ ಕಾಟುಕುಕ್ಕೆ ಪ್ರದೇಶ ಹೆಚ್ಚಾಗಿ ಪುತ್ತೂರಿನೊಂದಿಗೆ ವ್ಯವಹಾರ ಹೊಂದಿದೆ. ಪುತ್ತೂರಿನಿಂದ ಪಾಣಾಜೆಗೆ ಬರುವ ಬಸ್ ಅನ್ನು ಕಾಟುಕುಕ್ಕೆ ತನಕ ವಿಸ್ತರಿಸಬೇಕು : ಜಯರಾಮ ರೈ
– ಈಶ್ವರಮಂಗಲ ಮಾರ್ಗವಾಗಿ ಕೊಟ್ಯಾಡಿಗೆ ಬರುವ ಬಸ್ ಅನ್ನು ಅಡೂರು ತನಕ ವಿಸ್ತರಿಸಬೇಕು: ಪ್ರದೀಪ್ ಕುಮಾರ್
– ಪೈಲಾರಿನಲ್ಲಿ ನಿಲುಗಡೆಯಾಗುವ ಬಸ್ 8 ಗಂಟೆಗೆ ಸರಿಯಾಗಿ ಕೊಳ್ತಿಗೆಯ ಮೂಲಕ ಸಂಚರಿಸಬೇಕು: ಯತೀಂದ್ರ ಕೊಚ್ಚಿ
– ನುಳಿಯಾಲಿನಿಂದ ಬೆಟ್ಟಂಪಾಡಿ-ಪುತ್ತೂರಿಗೆ ತೆರಳುವ ಬಸ್ ಬೆ.8 ಗಂಟೆಗೆ ಹೊರಡಬೇಕು: ವೆಂಕಟರಮಣ
– ವಿವೇಕಾನಂದ ಕ್ಯಾಂಪಸ್‌ನೊಳಗೆ ಬಸ್ ಓಡಾಟಕ್ಕೆ ಅವಕಾಶ ಕಲ್ಪಿಸಬೇಕು. ಪುತ್ತೂರು-ಉಪ್ಪಿನಂಗಡಿ ಮಾರ್ಗವಾಗಿ ಸಂಚರಿಸುವ ಬಸ್ ಅನ್ನು ಬನ್ನೂರಿನಿಂದ ಕಾಲೇಜಿಗೆ ತಿರುಗಿಸಿದರೆ ಉತ್ತಮ: ಲೋಕೇಶ್