Advertisement

ವಿದ್ಯುತ್‌ ಸಂಪರ್ಕ ಮರು ಜೋಡಣೆ; ಹೊರ ಭಾಗದಲ್ಲಿ ವ್ಯಾಪಾರ ಪುನರಾರಂಭ

10:11 PM Oct 18, 2020 | mahesh |

ಮಹಾನಗರ: ನಗರದ ಸೆಂಟ್ರಲ್‌ ಮಾರ್ಕೆಟ್‌ ಕಟ್ಟಡದ ಹೊರಭಾಗದ ಮಳಿಗೆಗಳಲ್ಲಿ ಶೇ. 50ರಷ್ಟು ವ್ಯಾಪಾರಿಗಳು ವ್ಯವಹಾರವನ್ನು ಪುನರಾರಂಭಿಸಿದ್ದು, ಒಳ ಭಾಗದ ಅಂಗಡಿಗಳು ಇನ್ನಷ್ಟೇ ತೆರೆಯಬೇಕಿವೆ.

Advertisement

ಹೈಕೋರ್ಟ್‌ ಸೂಚನೆ ಮೇರೆಗೆ ಮಂಗ ಳೂರು ಮಹಾನಗರ ಪಾಲಿಕೆಯು ಸೆಂಟ್ರಲ್‌ ಮಾರ್ಕೆಟ್‌ನಲ್ಲಿ ಈ ಹಿಂದೆ ವ್ಯಾಪಾರ ಮಾಡುತ್ತಿದ್ದ ಅಧಿಕೃತ ವ್ಯಾಪಾರಿಗಳಿಗೆ ವ್ಯವಹಾರ ನಡೆಸಲು ಅವಕಾಶ ಕಲ್ಪಿಸಲು ನಿರ್ಧರಿಸಿ, ಅಧಿಕೃತ ವ್ಯಾಪಾರಿಗಳ ವಿವರಗಳನ್ನು ಪಡೆದು ಕೊಂಡು ಅವರಿಗೆ ವ್ಯಾಪಾರವನ್ನು ಪುನರಾರಂಭಿಸಲು ಅನುವು ಮಾಡಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಕೆಲವು ಮಂದಿ ವ್ಯಾಪಾರಿಗಳು ತಮ್ಮ ಮಳಿಗೆಗಳನ್ನು ತಾತ್ಕಾಲಿಕ ದುರಸ್ತಿ, ಪೈಂಟಿಂಗ್‌ ಮಾಡಿ ವ್ಯವಹಾರ ಆರಂಭಿಸಿದ್ದಾರೆ.

ಸೆಪ್ಟಂಬರ್‌ನಲ್ಲಿ ಈ ಹಿಂದೆ ವ್ಯಾಪಾರ ಮಾಡುತ್ತಿದ್ದವರಿಂದ ಪರವಾನಿಗೆ ಸಂಬಂಧಿತ ದಾಖಲೆ ಪತ್ರಗಳನ್ನು ಪಾಲಿಕೆ ಸಂಗ್ರಹಿಸಿದ್ದು, ಈ ಪೈಕಿ ಕೇವಲ 33 ಮಂದಿ ವ್ಯಾಪಾರಸ್ಥರ ದಾಖಲೆ ಪತ್ರಗಳು ಮಾತ್ರ ಅಧಿಕೃತ ಎಂಬ ಮಾಹಿತಿ ಪಾಲಿಕೆಗೆ ಲಭಿಸಿದೆ. ಈ 33 ಮಂದಿಗೆ ವ್ಯಾಪಾರ ವ್ಯವಹಾರ ಪುನರಾರಂಭಿಸಲು ಅವಕಾಶ ನೀಡಿದ್ದು, ಅವರಲ್ಲಿ ಕೆಲವರು ಈಗ ವ್ಯಾಪಾರ ಶುರು ಮಾಡಿದ್ದಾರೆ.

ವಿದ್ಯುತ್‌ ಮರು ಸಂಪರ್ಕ
ಲಾಕ್‌ಡೌನ್‌ ಸಂದರ್ಭ ಸೆಂಟ್ರಲ್‌ ಮಾರ್ಕೆಟನ್ನು ಮುಚ್ಚಿದ್ದರಿಂದ ಪಾಲಿಕೆಯ ಸೂಚನೆ ಮೇರೆಗೆ ಮೆಸ್ಕಾಂ ಅಧಿಕಾರಿಗಳು ಮಾರ್ಕೆಟ್‌ನ ವಿದ್ಯುತ್‌ ಸಂಪರ್ಕವನ್ನು ಕಡಿದು ಹಾಕಿತ್ತು. ಇದೀಗ ಮಹಾನಗರ ಪಾಲಿಕೆಯ ಅನುಮತಿ ಮೇರೆಗೆ ಸೆಂಟ್ರಲ್‌ ಮಾರ್ಕೆಟ್‌ ವ್ಯಾಪಾರಸ್ಥರ ಸಂಘದವರೇ ವಿದ್ಯುತ್‌ನ ಮರು ಸಂಪರ್ಕವನ್ನು ಮಾಡಿಸಿಕೊಂಡಿದ್ದಾರೆ. ನಳ್ಳಿ ನೀರು ವ್ಯವಸ್ಥೆಯ ಪುನರ್‌ ಸಂಪರ್ಕ ಬಾಕಿ ಇದೆ. ವಿದ್ಯುತ್‌ ಸಂಪರ್ಕವು ಪ್ರತಿ ಅಂಗಡಿಗೆ ಪ್ರತ್ಯೇಕ ಪ್ರತ್ಯೇಕ ಇದ್ದ ಕಾರಣ ಆಯಾ ಅಂಗಡಿಗಳವರು ವಿದ್ಯುತ್‌ ಮರು ಜೋಡಣೆ ಮಾಡಿಸಿದ್ದಾರೆ. ನೀರಿನ ವ್ಯವಸ್ಥೆಗೆ ಸಂಬಂಧಿಸಿ ಇಡೀ ಕಟ್ಟಡಕ್ಕೆ ಒಂದೇ ಸಂಪರ್ಕ ಇರುವ ಕಾರಣ ಸದ್ಯದ ಮಟ್ಟಿಗೆ ನೀರಿನ ವ್ಯವಸ್ಥೆ ಮರು ಜೋಡಣೆ ಮಾಡಿಲ್ಲ. ಅಧಿಕೃತ ವ್ಯಾಪಾರಸ್ಥರಿಗೆ ಮಾತ್ರ ವ್ಯಾಪಾರಕ್ಕೆ ಅನುಮತಿ ನೀಡಲಾಗಿರುವುದರಿಂದ ನೀರಿನ ಸಂಪರ್ಕದ ಮರುಸ್ಥಾಪನೆ ಹೇಗೆ ಮಾಡುವುದೆಂದು ಚರ್ಚಿಸಿ ತೀರ್ಮಾನ ಕೈಗೊಳ್ಳ ಬೇಕಾಗಿರುವ ಕಾರಣ ಈಗ ನೀರಿನ ಸಂಪರ್ಕವನ್ನು ನೀಡಲಾಗಿಲ್ಲ ಎಂದು ಪಾಲಿಕೆಯ ಮೂಲಗಳು ತಿಳಿಸಿವೆ.

ಮಾರ್ಕೆಟ್‌ನ ಒಳಗೆ ವ್ಯಾಪಾರ ಮಾಡುತ್ತಿದ್ದ ಅಧಿಕೃತ ವ್ಯಾಪಾರಿಗಳಿಗೂ ವ್ಯವಹಾರ ನಡೆಸಲು ಅನುಮತಿ ನೀಡ ಲಾಗಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಅವರು ವ್ಯಾಪಾರ ಪುನರಾರಂ ಭಿಸುವ ನಿರೀಕ್ಷೆ ಇದೆ ಎಂದು ಪಾಲಿಕೆಯ ಅಧಿಕಾರಿ ಗಳು ಉದಯವಾಣಿಗೆ ತಿಳಿಸಿದ್ದಾರೆ.

Advertisement

ಪರವಾನಿಗೆ ನವೀಕರಿಸಿದವರಿಗೆ ಅನುಮತಿ
ಸೆಂಟ್ರಲ್‌ ಮಾರ್ಕೆಟ್‌ನಲ್ಲಿ ಈ ಮೊದಲು ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳ ಪೈಕಿ 33 ಮಂದಿ ಮಾತ್ರ ಪರವಾನಿಗೆ ನವೀಕರಿಸಿದ್ದು, ಅವರೆಲ್ಲರಿಗೂ ವ್ಯಾಪಾರ ಮಾಡಲು ಅನುಮತಿ ನೀಡಲಾಗಿದೆ. ಪರವಾನಿಗೆ ನವೀಕರಣ ಮಾಡದಿರುವ ವ್ಯಾಪಾರಿಗಳಿಗೆ ಅನುಮತಿ ನೀಡಲಾಗಿಲ್ಲ.
-ದಿವಾಕರ್‌ ಪಾಂಡೇಶ್ವರ, ಮೇಯರ್‌

ಅಧಿಕೃತ ವ್ಯಾಪಾರಿಗಳಿಗೆ ತಡೆ ಇಲ್ಲ
ಸೆಂಟ್ರಲ್‌ ಮಾರ್ಕೆಟ್‌ನಲ್ಲಿ ಅಧಿ ಕೃತ ವ್ಯಾಪಾರಿಗಳು ವ್ಯವಹಾರ ಮಾಡುವುದಕ್ಕೆ ಪಾಲಿಕೆಯಿಂದ ಯಾವುದೇ ತಡೆ ಇಲ್ಲ. ಇದೀಗ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ. ಮಾರ್ಕೆಟ್‌ ಕಟ್ಟಡದ ಒಳಗೂ ವ್ಯಾಪಾರಕ್ಕೆ ಅವಕಾಶ ನೀಡಲಾಗುವುದು.
-ಅಕ್ಷಯ್‌ ಶ್ರೀಧರ್‌, ಆಯುಕ್ತರು

ನೀರಿನ ಸಂಪರ್ಕಕ್ಕೆ ಮನವಿ
ಹೈಕೋರ್ಟ್‌ ಆದೇಶದ ಪ್ರಕಾರ ಸೆಂಟ್ರಲ್‌ ಮಾರ್ಕೆಟ್‌ನಲ್ಲಿ ವ್ಯಾಪಾರ ಪುನರಾ ರಂಭಿಸಿದ್ದೇವೆ. ಪಾಲಿಕೆಯ ಅಧಿಕಾರಿಗಳ ಸೂಚನೆ ಮೇರೆಗೆ ವಿದ್ಯುತ್‌ ಸಂಪರ್ಕವನ್ನು ನಮ್ಮ ಸಂಘದವರೇ ಸೇರಿ ಮರು ಜೋಡಣೆ ಮಾಡಿಸಿ ಕೊಂಡಿ ದ್ದೇವೆ. ನೀರಿನ ಸಂಪರ್ಕವನ್ನು ಮರು ಸ್ಥಾಪಿಸುವಂತೆ ಪಾಲಿಕೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ.
-ಹಸನ್‌ ಕೆಮ್ಮಿಂಜೆ, ಹಂಗಾಮಿ ಅಧ್ಯಕ್ಷರು, ಸೆಂಟ್ರಲ್‌ ಮಾರ್ಕೆಟ್‌ ವ್ಯಾಪಾರಸ್ಥರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next