ಚನ್ನಪಟ್ಟಣ: ಸಹಕಾರ ಸಂಘದ ನಿಯಮದ ಪ್ರಕಾರ ಬ್ಯಾಂಕ್‌ನ ಸದಸ್ಯರ ಷೇರು ಹಣ 500 ರೂ.ಯಿಂದ 2 ಸಾವಿರಕ್ಕೆ ಹೆಚ್ಚಳವಾಗಿದೆ. ಮುಂದಿನ ಆಡಳಿತ ಮಂಡಳಿ ಚುನಾವಣೆಗೆ ಮುನ್ನ ಬ್ಯಾಂಕ್‌ನ ಷೇರುದಾರರು ತಮ್ಮ ಬಾಕಿ ಷೇರು ಹಣ 1500 ರೂ. ಪಾವತಿಸಿ ಮುಂದಿನ ಚುನಾವಣೆಯಲ್ಲಿ ಮತದಾನದ ಹಕ್ಕು ಪಡೆದುಕೊಳ್ಳಬೇಕು ಎಂದು ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು ತಿಳಿಸಿದರು.
ಬ್ಯಾಂಕ್ 8 ಕೋಟಿ ರೂ.ನಷ್ಟದಲ್ಲಿದೆ: ಬ್ಯಾಂಕ್ 8 ಕೋಟಿ ರೂ.ನಷ್ಟದಲ್ಲಿದೆ. ಬ್ಯಾಂಕ್‌ನಲ್ಲಿ ರೈತರು ಪಡೆದಿರುವ ಸಾಲ ಸಕಾಲಕ್ಕೆ ಮರುಪಾವತಿ ಮಾಡುತ್ತಿಲ್ಲ. ಸಾಲಗಾರರು, ಸರ್ಕಾರಗಳು ಸಾಲಮನ್ನಾ ಮಾಡುತ್ತವೆ ಎಂಬ ನಂಬಿಕೆಯಲ್ಲೆ ಸಾಲ ಕಟ್ಟಲು ಮೀನಮೇಷ ಎಣಿಸುತ್ತಿದ್ದಾರೆ. ಬ್ಯಾಂಕ್‌ನಿಂದ ಸಾಲ ಪಡೆದವರು ಸಕಾಲದಲ್ಲಿ ಸಾಲ ಮರುಪಾವತಿಸಿ ಇತರರಿಗೆ ಸಾಲ ಸೌಲಭ್ಯ ದೊರಕಿಸಿ ಕೊಡಬೇಕು. ಬ್ಯಾಂಕ್ ಪ್ರಗತಿಗೆ ಕೈಜೋಡಿಸಿ ಎಂದು ಮನವಿ ಮಾಡಿದರು.
ಸಾಲ ವಸೂಲಾತಿಯಲ್ಲಿ ಹಿನ್ನಡೆ: ಬ್ಯಾಂಕ್‌ನಲ್ಲಿ ಕಳೆದ ಅವಧಿಯಲ್ಲಿ ಶೇ.70ರಷ್ಟು ಸಾಲ ಮರುಪಾವತಿಯಾಗಿದೆ. ನಮ್ಮ ಗುರಿ ಶೇ.100 ನೂರರಷ್ಟು ಸಾಲ ವಸೂಲಾತಿ ಇತ್ತು. ಆದರೆ, ಈ ವರ್ಷದ ಆರಂಭದಲ್ಲಿ ಕೊರೊನಾ ಕಾರಣ ಸಾಲ ವಸೂಲಾತಿಯಲ್ಲಿ ಹಿನ್ನಡೆ ಆಗಿದೆ ಎಂದು ನಾಗರಾಜು ತಿಳಿಸಿದರು. ಹೈನುಗಾರಿಕೆ ಮತ್ತು ಟ್ರಾಕ್ಟರ್ ಮೇಲಿನ ಸಾಲಗಳು ಮಾತ್ರ ಮರುಪಾವತಿಯಾಗುತ್ತಿವೆ. ಕೋಳಿ ಸಾಕಾಣಿಕೆಗೆ ನೀಡಿರುವ ಸಾಲ ಮತ್ತು ಭೂಮಿ ಅಭಿವೃದ್ಧಿಗೆ ನೀಡಿರುವ ಸಾಲ ವಸೂಲಾಗಿಲ್ಲ. ಆದರೂ ಬ್ಯಾಂಕ್‌ನಿಂದ ರೈತರಿಗೆ ಸಾಲ ಸೌಲಭ್ಯ ನಿಲ್ಲಿಸಿಲ್ಲ ಎಂದರು.
ಠೇವಣಿ ಮಾಡಿ ಸಹಕರಿಸಿ: ಬ್ಯಾಂಕ್‌ನಲ್ಲಿ ಸದಸ್ಯರಾಗಿರುವ ರೈತರು ಬೇರೆ ಬ್ಯಾಂಕ್‌ಗಳಲ್ಲಿ ಹಣ ಠೇವಣಿ ಮಾಡುತ್ತಿದ್ದಾರೆ. ಅವರಿಗೆ ಅಲ್ಲಿ ಶೇ.6ರಷ್ಟು ಬಡ್ಡಿ ನೀಡಲಾಗುತ್ತಿದೆ. ನಮ್ಮ ಬ್ಯಾಂಕ್‌ನಲ್ಲೇ ಸದಸ್ಯರ ಹಣ ಠೇವಣಿ ಮಾಡಲು ಜಾರಿಗೆ ತರಲಾಗಿದ್ದು, ನಮ್ಮಲ್ಲಿ ಶೇ.8ರಷ್ಟು ಬಡ್ಡಿ ನೀಡುವ ಜೊತೆಗೆ ಹಿರಿಯ ನಾಗರಿಕರಿಗೆ ಶೇ.9ರಷ್ಟು ಬಡ್ಡಿ ನೀಡುತ್ತೇವೆ. ಅಲ್ಲದೆ ಸದಸ್ಯರು ಹೇಳುವ ಬ್ಯಾಂಕ್‌ನ ಖಾತೆಗೆ ನೇರವಾಗಿ ಬಡ್ಡಿ ಜಮಾ ಮಾಡುವ ಸೌಲಭ್ಯ ಸಹ ಹೊಂದಿದ್ದೇವೆ. ಈ ನಿಟ್ಟಿನಲ್ಲಿ ಬ್ಯಾಂಕ್‌ನಲ್ಲಿ ಹಣ ಠೇವಣಿ ಮಾಡಿ ಸಹಕರಿಸಬೇಕು ಎಂದು ಅಧ್ಯಕ್ಷ ನಾಗರಾಜು ಮನವಿ ಮಾಡಿದರು.
ಸಭೆಯಲ್ಲಿ ಬ್ಯಾಂಕ್‌ನ ನ್ಯೂನ್ಯತೆಗಳು ಮತ್ತು ಕೆಲ ಮಾರ್ಪಾಡುಗಳ ಬಗ್ಗೆ ಚರ್ಚೆ ನಡೆಯಿತು. ಬ್ಯಾಂಕ್‌ನ ಸದಸ್ಯರು ಕೆಲವು ಲೋಪಗಳ ಬಗ್ಗೆ ಬ್ಯಾಂಕ್‌ನ ಸಾಲಕ್ಕೆ ಇರುವ ನಿಯಮಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ನಿಯಮ ಸಡಿಲಿಸುವಂತೆ ಸಲಹೆ ನೀಡಿದರು.
ವೇದಿಕೆಯಲ್ಲಿ ಉಪಾಧ್ಯಕ್ಷರಾದ ವಿಜಯಲಕ್ಷ್ಮಿ, ಹೇಮಚಂದ್ರು, ನಿರ್ದೇಶಕ ಭೈರನರ ಸಿಂಹಯ್ಯ, ಡಿ.ಗಂಗರಾಜು, ಶಿವಣ್ಣಗೌಡ, ಕೃಷ್ಣ, ಕೃಷ್ಣೇಗೌಡ, ತೂಬಿನಕೆರೆ ಟಿ.ಎಸ್.ರಾಜು, ಜೆ.ಹೇಮಂತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.