ಕೋಲ್ಕತ್ತಾ: ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಬಾಕಿ ಉಳಿದ ಹಂತಗಳ ಮತಕ್ಷೇತ್ರಗಳಲ್ಲಿ ಏಕಕಾಲದಲ್ಲಿ ಚುನಾವಣೆ ಮುಗಿಸುವಂತೆ ಟಿಎಂಸಿ ಮರು ಆಗ್ರಹಿಸಿದೆ.
“ಆಯೋಗಕ್ಕೆ ಕೈಮುಗಿದು ಕೇಳಿಕೊಳ್ಳುತ್ತೇನೆ… ಬಾಕಿ ಉಳಿದ 3 ಹಂತದ ಮತದಾನಗಳನ್ನು ಒಂದೇ ದಿನದಲ್ಲಿ ಮುಗಿಸಿ. ಒಂದು ದಿನದಲ್ಲಿ ಸಾಧ್ಯವಾಗದಿದ್ದರೆ, 2 ದಿನಗಳಲ್ಲಿ ಮುಗಿಸಿ. ಇದರಿಂದ 1 ದಿನವನ್ನು ಉಳಿಸಬಹುದು’ ಎಂದು ಸಿಎಂ ಮಮತಾ ಬ್ಯಾನರ್ಜಿ ಆಯೋಗವನ್ನು ಒತ್ತಾಯಿಸಿದ್ದಾರೆ.
ಚಾಕುಲಿಯಾದಲ್ಲಿನ ಟಿಎಂಸಿ ರ‍್ಯಾಲಿಯಲ್ಲಿ ಅವರು, “ಬಿಜೆಪಿ ಹೇಳಿಕೆ ಆಧರಿಸಿ ನಿರ್ಧಾರ ತೆಗೆದುಕೊಳ್ಳಬೇಡಿ. ಜನರ ಆರೋಗ್ಯ ರಕ್ಷಿಸಲು ಸೂಕ್ತ ಚುನಾವಣಾ ಕ್ರಮ ಅನುಸರಿಸಿ’ ಎಂದು ಆಗ್ರಹಿಸಿದ್ದಾರೆ. ಅಲ್ಲದೆ, ಬಂಗಾಳದಲ್ಲಿ ಕೊರೊನಾ ಹೆಚ್ಚಾಗಲು ಮೋದಿ ಅವರ ರ‍್ಯಾಲಿಗಳೇ ಕಾರಣ ಎಂದು ಆರೋಪಿಸಿದ್ದಾರೆ.
ಅಮಿತ್ ಶಾ ರ‍್ಯಾಲಿ: ಟಿಎಂಸಿ ಆಡಳಿತದಲ್ಲಿ ಸಾರ್ವಜನಿಕ ನಿಧಿ ವಂಚಿಸಿದವರ ವಿರುದ್ಧ ಮೇ 3ರ ಬಳಿಕ ಕಡ್ಡಾಯ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಗೃಹ ಸಚಿವ ಅಮಿತ್ ಎಚ್ಚರಿಸಿದ್ದಾರೆ. ಕಲ್ಲಿದ್ದಲು ಹಗರಣದಿಂದ ಹೆಸರಾದ ಪಶ್ಚಿಮ ವರ್ಧಮಾನ್ ಜಿಲ್ಲೆಯ ವಿವಿಧೆಡೆ ಶಾ ಸೋಮವಾರ ರ‍್ಯಾಲಿ ನಡೆಸಿದರು.
ಅಭ್ಯರ್ಥಿ ನಿಧನದಿಂದ ಮತದಾನ ಮುಂದೂಡಲ್ಪಟ್ಟಿದ್ದ ಜಂಗೀಪುರ್ ಮತ್ತು ಸಂಸರ್‌ಗಂಜ್‌ನಲ್ಲಿ ಮೇ 13ರಂದು ಚುನಾವಣೆ ನಡೆಸಲು ಆಯೋಗ ತೀರ್ಮಾನಿಸಿದೆ. ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 26 ಅಂತಿಮ ದಿನ.