Advertisement
ಅಪ್ಪು ಸರ್ ಚಿತ್ರಕ್ಕೆ ಹೀರೋಯಿನ್ ಆಗಬೇಕು…
Related Articles
Advertisement
ಒಬ್ಬ ನಟನಾಗಿ ಪುನೀತ್ ಒಂದು ವರ್ಗಕ್ಕೆ ಪ್ರಭಾವ ಬೀರಿದರೆ, ತಮ್ಮ ವ್ಯಕ್ತಿತ್ವದ ಮೂಲಕ ಅವರು ದೊಡ್ಡ ಅಭಿಮಾನಿ, ಸ್ನೇಹ ಬಳಗವನ್ನೇ ಸಂಪಾದಿಸಿದ್ದಾರೆ. ಅದೇ ಕಾರಣದಿಂದ ಪುನೀತ್ ಇನ್ನಿಲ್ಲ ಎಂಬ ವಾಸ್ತವ ಸತ್ಯವನ್ನು ಯಾರೊಬ್ಬರಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪುನೀತ್ ರಾಜಕುಮಾರ್ ಸ್ಟಾರ್ ಆಗಿದ್ದರೂ, ಆ ಸ್ಟಾರ್ ಕಿರೀಟವನ್ನು ಅವರು ಯಾವತ್ತೂ ತಲೆಗೇರಿಸಿಕೊಂಡವರಲ್ಲ. ಅದೇ ಕಾರಣದಿಂದ ಎಲ್ಲ ವರ್ಗದ ಆಡಿಯನ್ಸ್ ಕೂಡ ಅವರ ಫ್ಯಾನ್ ಆಗಿದ್ದರು.
ಪುನೀತ್ ರಾಜಕುಮಾರ್ ಅವರ ಸಾವು ಸಾಕಷ್ಟು ಹೊಸ ಪ್ರತಿಭೆಗಳ ಕನಸು ಕಸಿದಿದೆ. ಪುನೀತ್ ಅವರಿಗಾಗಿಯೇ ಕಥೆ ಬರೆಯಲು ಹಾತೊರೆಯುತ್ತಿದ್ದ, ಅದೆಷ್ಟೋ ಕಥೆಗಾರರ ಕಥೆಗಳು ಅರ್ಧಕ್ಕೆ ನಿಂತಿವೆ, ಹಾಡುಗಳ ಸಾಲುಗಳು ಮುಂದಕ್ಕೆ ಹೋಗುತ್ತಿಲ್ಲ… ರಾಜಕುಮಾರ ಇಲ್ಲದ ಮೇಲೆ ಏನು ಬರೆಯಲಿ.. ಎಂಬ ಭಾವ ಬರಹಗಾರರಲ್ಲಿ ಒಬ್ಬ ಸ್ಟಾರ್ ನಟ ಎಲ್ಲ ವರ್ಗಕ್ಕೂ ಇಷ್ಟೆಲ್ಲಾ ಹತ್ತಿರವಾಗಲು ಸಾಧ್ಯವೇ ಎಂದು ನೀವು ಕೇಳಬಹುದು. ಆದರೆ ಅದು ಸಾಧ್ಯ ಎಂದು ತೋರಿಸಿಕೊಟ್ಟವರು ಪುನೀತ್ ರಾಜಕುಮಾರ್.
ಒಂದೊಳ್ಳೆಯ ಕಥೆ ಇದೆ ಎಂದು ಗೊತ್ತಾದರೆ, ಆ ಕಥೆಗಾರರನ್ನು, ನಿರ್ದೇಶಕರನ್ನ ನೇರವಾಗಿ ಕರೆಸಿ ಮಾತನಾಡುತ್ತಿದ್ದ ಗುಣ ಅಪ್ಪು ಅವರದಾಗಿತ್ತು. ಕಥೆ ತನಗೆ ಇಷ್ಟವಾದರೆ ತನ್ನ ಸಿನೆಮಾ ಮಾಡಲು ಸಿದ್ಧವಾಗಿದ್ದ ನಿರ್ಮಾಪಕರಿಗೆ ಹೀಗೊಂದು ಕಥೆ ಇದೆ ಎಂದು ಸೂಚಿಸಿ, ಹೊಸ ನಿರ್ದೇಶಕರಿಗೆ ದಾರಿದೀಪ ಆಗುತ್ತಿದ್ದವರು ಪುನೀತ್.
ಇನ್ನು ತಮ್ಮ ಕನಸಿನ “ಪಿಆರ್ ಕೆ’ ಬ್ಯಾನರ್ ನಲ್ಲು ಹೊಸಬರಿಗೆ ಅವಕಾಶ ನೀಡುವ ಕನಸು ಅವರದಾಗಿತ್ತು. ತಮ್ಮದೇ ಬ್ಯಾನರ್‌ನಲ್ಲಿ ಈಗಾಗಲೇ ಒಂದಷ್ಟು ಸದಭಿರುಚಿ ಸಿನಿಮಾಗಳನ್ನು ನಿರ್ಮಿಸಿ, ಅದೆಷ್ಟೋ ಹೊಸಬರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದರು. ಸ್ಟಾರ್ ನಟ ಆಗಿಯೂ, ಯಾವುದೇ ಬಿಲ್ಡಪ್ ಗಳಿಲ್ಲದ ಸರಳ ಸುಂದರ ಕಥೆಗಳನ್ನು ನಿರ್ಮಾಣ ಮಾಡುತ್ತಾ, ಅದನ್ನು ಮನೆ ಮನೆಗೆ ತಲುಪಿಸಿ ಖುಷಿ ಪಟ್ಟವರು ಪುನೀತ್. ಆದರೆ ಈಗ ಅಪ್ಪು ಇಲ್ಲದ ಮೇಲೆ, ಅದೆಲ್ಲವೂ ಅರ್ಧಕ್ಕೆ ನಿಂತಿದೆ.
ಪುನೀತ್ ಇದ್ದಿದೆ ಹಾಗೆ.. ತನಗೆ ಇಷ್ಟವಾದರೆ ಅದು ಹೊಸಬರು, ಅವ್ರಿಗೆ ಯಾಕೆ ನಾನು ಮಣೆ ಹಾಕಬೇಕು ಎಂದು ಯಾವತ್ತೂ ಯೋಚಿಸಿದವರಲ್ಲ. ಪುನೀತ್ ಅವರ ಈ ಗುಣದಿಂದಲೇ ಇವತ್ತು ಅವರ ಸಿನಿಮಾಗಳ ಮೂಲಕ ಸಿನಿಮಾರಂಗಕ್ಕೆ ಬಂದ ಅದೆಷ್ಟೋ ಮಂದಿ ಚಿತ್ರರಂಗದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಸಿನೆಮಾ ಎಂದರೆ ಕೇವಲ ಮನರಂಜನೆಯಲ್ಲ ಜೊತೆಗೊಂದು ಸಂದೇಶವು ಬೇಕೆಂದು ನಂಬಿದ್ದಕ್ಕೆ ಸಾಕ್ಷಿಯಾಗಿ ಇವತ್ತು ಅವ್ರ ಸಿನೆಮಾಗಳು ನಮ್ಮ ಮುಂದಿದೆ.
ಸ್ಯಾಂಡಲ್‌ವುಡ್‌ನಲ್ಲಿ ಮಂಕಾದ ದೀಪಾವಳಿ ಸಂಭ್ರಮ: ಪ್ರತಿವರ್ಷ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿಗಳ ಸೌಂಡ್ ಗಿಂತಲೂ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಸಿನಿಮಾಗಳ ಸೌಂಡೇ ಜೋರಾಗಿರುತ್ತಿತ್ತು. ಆದರೆ ಈ ದೀಪಾವಳಿಗೆ ಚಂದನವನದಲ್ಲಿ ಅಂಥ ಯಾವುದೇ ಸಂಭ್ರಮ, ಸಡಗರವಿಲ್ಲ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ರಿಲೀಸ್‌ಗೆ ರೆಡಿಯಾಗಿದ್ದ ಹಲವು ಸಿನಿಮಾಗಳು ಒಂದಷ್ಟು ಕಾಲ ತಮ್ಮ ಬಿಡುಗಡೆಯನ್ನು ಮುಂದಕ್ಕೆ ಹಾಕಿಕೊಂಡಿವೆ. ಉಳಿದಂತೆ ಹಬ್ಬದ ಸಂದರ್ಭದಲ್ಲಿ ತಮ್ಮ ಹಾಡು, ಟೀಸರ್, ಟ್ರೇಲರ್‌ಗಳನ್ನು ಬಿಡುಗಡೆ ಮಾಡಿ ಸಂಭ್ರಮಿಸಬೇಕು ಎಂಬ ಯೋಚನೆಯಲ್ಲಿದ್ದ ಅನೇಕ ಸಿನಿಮಾ ತಂಡಗಳು, ಪುನೀತ್ ನಿಧನದಿಂದ ಆ ಸಂಭ್ರಮ, ಸಡಗರವನ್ನು ಕಳೆದುಕೊಂಡಿವೆ. ಒಟ್ಟಾರೆ ದೀಪಾವಳಿಯ ಸಂದರ್ಭದಲ್ಲಿ ಚಂದನವನದ ನಂದಾದೀಪ ಆರಿ ಹೋದ ಭಾವ ಎಲ್ಲರನ್ನೂ ಆವರಿಸಿದೆ
ರವಿಪ್ರಕಾಶ್ ರೈ