ಸಕಲೇಶಪುರ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತಿಗೊಂಡು ಹುಟ್ಟೂರಿಗೆ ಬಂದ ಯೋಧನಿಗೆ ಗ್ರಾಮಸ್ಥರು, ಕುಟುಂಬದವರು ಮಳೆಯಲ್ಲಿಯೇ ಪಟಾಕಿ ಸಿಡಿಸಿ, ಹೂವಿನ ಸಿಂಚನ ಗೈದು ಅದ್ಧೂರಿ ಸ್ವಾಗತ ನೀಡಿದ ಕ್ಷಣಕ್ಕೆ ತಾಲೂಕಿನ ಹಾನುಬಾಳು ಹೋಬಳಿ ಕೇಂದ್ರ ಸಾಕ್ಷಿಯಾಗಿತ್ತು.
ಇದೇ ಹೋಬಳಿ, ಹುನುಮನಹಳ್ಳಿ ಗ್ರಾಮದ ಎಚ್.ಕೆ.ಲಕ್ಷ್ಮಣಗೌಡ ಅವರ ಪುತ್ರ ಎಚ್‌ಎಲ್. ಹಿರಣ್ಣಯ್ಯ ಬಿಎಸ್‌ಎಫ್ ನಲ್ಲಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿ ಶುಕ್ರವಾರ ಮನೆಗೆ ಮರಳಿದರು. ಇವರು ಬರುತ್ತಾರೆ ಎಂಬ ವಿಷಯ ತಿಳಿಯುಲ್ಲೇ ಹಾನುಬಾಳು ಗ್ರಾಮಕ್ಕೆ ತೆರಳುತ್ತಿದ್ದಂತೆ ಗ್ರಾಮಸ್ಥರು ಬ್ಯಾನರ್‌ಗಳು, ಹಾರ ತುರಾಯಿಗಳಿಂದ ಬರಮಾಡಿ ಕೊಂಡರು. ಹೋಬಳಿ ಕೇಂದ್ರದಲ್ಲಿ ಗ್ರಾಮದ ಮುಖ್ಯಸ್ಥರು ಯೋಧನ ಸೇವೆ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿ ಗೌರವ ಸಮರ್ಪಿಸಿದರು.
ಎರಡು ದಶಕಗಳ ಕಾಲ ಸೇನೆಯಲ್ಲಿದ್ದು, ಮನೆಯಿಂದ ದೂರವೇ ಉಳಿದಿದ್ದ ಮಗನನ್ನು ಸ್ವಾಗತಿಸಲು ತಂದೆ, ತಾಯಿ, ಸಹೋದರಿಯರು ಮಕ್ಕಳು ಸೇರಿದಂತೆ ಕುಟುಂಬದವರು ಮನೆ ಮುಂದೆ ರಂಗೋಲಿ, ತಳಿರು, ತೋರಣ ಹಾಕಿ ಶೃಂಗರಿಸಿದರು. ಪಟಾಕಿ ಶಬ್ದ, ಅಂಗಳದಿಂದ ಮನೆಯೊಳಗಿನ ದೇವರ ಕೋಣೆವರೆಗೂ ನೆಲವನ್ನುಹೂವಿನಲ್ಲಿ ಶೃಂಗರಿಸಿದ್ದರು.
ಭಾರತ್ ಮಾತಾಕಿ ಜೈ ಎಂಬ ಘೋಷಣೆಯೊಂದಿಗೆ ಹೂವಿನ ಸಿಂಚನದಿಂದ ಹಿರಣ್ಣಯ್ಯ ಅವರಿಗೆ ಆರತಿ ಎತ್ತಿ ಸ್ವಾಗತಿಸುವ ಮೂಲಕ ಯೋಧನಿಗೆ ಪ್ರೀತಿ, ಅಭಿಮಾನದ ಗೌರವ ಸಲ್ಲಿಸಿದರು.
ಪಶ್ಚಿಮ ಬಂಗಾಳ, ಜಮ್ಮುಕಾಶ್ಮೀರ್,ಪಂಚಾಬ್, ಗುಜರಾತ್, ರಾಜಸ್ತಾನ್, ದೆಹಲಿ, ಮಣಿಪುರ ರಾಜ್ಯಗಳಲ್ಲಿ ಬಿಎಸ್‌ಎಫ್ನಲ್ಲಿ ಸೇವೆ ಸಲ್ಲಿಸಿದ್ದೇನೆ. ಸೇವಾ ಅವಧಿಯ ಪ್ರತಿ ಕ್ಷಣಗಳೂ ಇಡೀ ಬದುಕಿನಲ್ಲಿ ಸುಂದರ, ಸಾಹಸ ನೆನಪು ತಂದು ಕೊಡುತ್ತವೆ.
-ಎಚ್‌ಎಲ್.ಹಿರಣ್ಣಯ್ಯ,ನಿವೃತ್ತ ಯೋಧ