Advertisement
32 ವರ್ಷದ ಕಾರ್ಲಾ ಸೂರೆಜ್ ನವಾರೊ ಅವರಲ್ಲಿ ಕಳೆದ ಸೆಪ್ಟಂಬರ್ ವೇಳೆ ಬಿಳಿ ರಕ್ತಕಣದ ಕ್ಯಾನ್ಸರ್ ಗೋಚರಿಸಿತ್ತು. ಇದು ಆರಂಭಿಕ ಹಂತದಲ್ಲೇ ಪತ್ತೆಯಾದ್ದರಿಂದ ಅವರು ಪ್ರಾಣಾಪಾಯಕ್ಕೆ ಸಿಲುಕಲಿಲ್ಲ. ಸತತ 6 ತಿಂಗಳ ಕಾಲ ಕಿಮೋಥೆರಪಿಗೆ ಒಳಗಾಗಿ ಜಯಿಸಿ ಬಂದರು. ಈ ನಡುವೆ ಡಿಸೆಂಬರ್‌ನಲ್ಲೇ ಮರಳಿ ಅಭ್ಯಾಸಕ್ಕೆ ಇಳಿದಿದ್ದರು. ಆಗಿನ್ನೂ ಚಿಕಿತ್ಸೆ ಜಾರಿಯಲ್ಲಿತ್ತು. ಕಳೆದ ತಿಂಗಳಷ್ಟೇ ಚಿಕಿತ್ಸೆ ಮುಗಿದಿತ್ತು. ಅಷ್ಟರಲ್ಲಿ ಪ್ಯಾರಿಸ್ ಅಂಗಳಕ್ಕೆ ಧುಮುಕಲು ಸಜ್ಜಾಗಿದ್ದಾರೆ!
“ನನ್ನ ಪಾಲಿಗೆ ಇದು ಯಾವತ್ತೂ ಸ್ಪೆಷಲ್ ಟೂರ್ನಮೆಂಟ್. ಪ್ಯಾರಿಸ್‌ನಲ್ಲಿ ಆಡುವ ಮೂಲಕವೇ ಮತ್ತೂಂದು ಸುತ್ತಿನ ರ್ಯಾಕೆಟ್ ಸ್ಪರ್ಧೆಗೆ ಅಣಿಯಾಗಬೇಕು ಎಂಬುದು ನನ್ನ ಯೋಜನೆ ಆಗಿತ್ತು. ಇದೀಗ ಸಾಕಾರಗೊಳ್ಳುತ್ತಿದೆ’ ಎಂದು ಎರಡು ಬಾರಿ ಫ್ರೆಂಚ್ ಓಪನ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ನವಾರೊ ಖುಷಿಯಿಂದ ಹೇಳಿದ್ದಾರೆ. ಸದ್ಯ ಅವರು ವಿಶ್ವ ರ್‍ಯಾಂಕಿಂಗ್‌ನಲ್ಲಿ 118ನೇ ಸ್ಥಾನದಲ್ಲಿದ್ದಾರೆ. “ಟೆನಿಸ್ ನನಗೆ ಎಲ್ಲವನ್ನೂ ಕೊಟ್ಟಿದೆ. ರೊಲ್ಯಾಂಡ್ ಗ್ಯಾರಸ್ ಸವಿನೆನಪು ರೋಮಾಂಚನ. ನನ್ನ ವೃತ್ತಿ ಬದುಕಿನ ಸ್ಮರಣೀಯ ಕ್ಷಣಗಳಿಗೆ ಇದು ಸಾಕ್ಷಿಯಾಗಿದೆದ. ಟೆನಿಸ್ ಅಂಕಣದಲ್ಲೇ ಗುಡ್‌ಬೈ ಹೇಳುವುದು ನನ್ನ ಯೋಜನೆಯೂ ಹೌದು’ ಎಂದು ನವಾರೊ ಹೇಳಿದರು.