Advertisement

ಸಿಇಒ ವರ್ಗಕ್ಕೆ ಜಿಪಂ ಸದಸ್ಯರ ಬಿಗಿಪಟ್ಟು

11:22 AM Jul 24, 2018 | Team Udayavani |

ಕಲಬುರಗಿ: ಸದಸ್ಯರ ಮಾತಿಗೆ ಗೌರವ ಕೊಡದ, ಅಭಿವೃದ್ಧಿ ಹಾಗೂ ಸೇವೆಯನ್ನೇ ಮರೆತಿರುವ ಜಿಪಂ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ (ಸಿಇಒ) ಹೆಪ್ಸಿಬಾ ರಾಣಿ ಕೋರ್ಲಪಾಟಿ ಅವರ ಸೇವೆ ಬೇಡವೇ ಬೇಡ, ಅವರು ವರ್ಗಾವಣೆಯಾಗುವವರೆಗೂ ಸಾಮಾನ್ಯ ಸಭೆ ನಡೆಸೋದಿಲ್ಲ!

Advertisement

ಇದು ಜಿಪಂ ಸದಸ್ಯರು ಕಳೆದ ಮೂರು ಸಾಮಾನ್ಯ ಸಭೆಗಳುದ್ದಕ್ಕೂ ಪಕ್ಷ ಬೇದ ಮರೆತು ಒಕ್ಕೊರಲಿನಿಂದ ತೆಗೆದುಕೊಂಡ ನಿರ್ಣಯ. ಸೋಮವಾರ ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರು ಸಿಇಒ ಹೆಪ್ಸಿಬಾ ರಾಣಿ ಕೋರ್ಲಪಾಟಿ ಸೇವೆ ಬೇಡವೆಂದು ಈಗಾಗಲೇ ಎರಡು ಸಭೆಗಳಲ್ಲಿ ಒಕ್ಕೊರಲಿನಿಂದ ನಿರ್ಣಯ ತೆಗೆದುಕೊಳ್ಳಲಾಗಿದೆ. ಅಲ್ಲದೆ ಸರ್ಕಾರಕ್ಕೂ ಪ್ರಸ್ತಾವನೆ ಕಳುಹಿಸಲಾಗಿದೆ. ಸಿಇಒ
ವರ್ಗಾವಣೆ ಆಗುವವರೆಗೂ ಸಭೆ ನಡೆಸೋದು ಬೇಡ ಎಂದು ಸದಸ್ಯರು ಪಕ್ಷ ಬೇಧ ಮರೆತು ಒಕ್ಕೊರಲಿನಿಂದ ಆಗ್ರಹಿಸಿ
ಬಿಗಿಪಟ್ಟು ಹಿಡಿದರು. 

ಸರ್ವ ಸದಸ್ಯರ ಅಭಿಪ್ರಾಯಕ್ಕೆ ಮಣಿದ ಜಿಪಂ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಸಭೆ ಮುಂದುವರೆಸದೆ ಮುಂದಿನ ಸಾಮಾನ್ಯ ಸಭೆ ಬರುವ ಆಗಸ್ಟ್‌ 10ಕ್ಕೆ ನಿಗದಿ ಮಾಡಲಾಗಿದೆ ಎಂದು ಘೋಷಿಸಿಸುವ ಮುಖಾಂತರ ಸಿಇಒ ಕಾರ್ಯವೈಖರಿ ವಿರುದ್ಧ ಸಂಘರ್ಷ ಮುಂದುವರಿದಿರುವುದನ್ನು ಸಾಬೀತುಪಡಿಸಿದರು.

ಸಭೆ ಆರಂಭವಾಗುತ್ತಿದ್ದಂತೆ ಸದಸ್ಯರಾದ ಹರ್ಷಾನಂದ ಗುತ್ತೇದಾರ್‌, ಶಿವಾನಂದ ಪಾಟೀಲ ಮರತೂರ, ಶಿವರಾಜ ಪಾಟೀಲ ರದ್ದೇವಾಡಗಿ, ರೇವಣಸಿದ್ದಪ್ಪ ಸಂಕಾಲಿ, ಸಿದ್ಧರಾಮ ಪ್ಯಾಟಿ, ಸಂಜೀವನ್‌ ಯಾಕಾಪುರ, ಸಂತೋಷ ಪಾಟೀಲ ದಣ್ಣೂರ, ಗೌತಮ ಪಾಟೀಲ ಮಾತನಾಡಿ, ಸಿಇಒ ಅವರು ಕಲಬುರಗಿ ಜಿಲ್ಲಾ ಪಂಚಾಯತ್‌ಗೆ ಬಂದ 17 ತಿಂಗಳಿನಲ್ಲಿ ಒಂದು ದಿನವೂ ಸರಿಯಾಗಿ ಕೆಲಸ ಮಾಡಿಲ್ಲ.

ಸದಸ್ಯರ ಮಾತಿಗೆ ಎಳ್ಳು ಕಾಳಷ್ಟು ಗೌರವ ಕೊಟ್ಟಿಲ್ಲ. ಮುಖ್ಯವಾಗಿ ಕಳೆದ ತಿಂಗಳು ಜುಲೈ 7ರಂದು ಕರೆಯಲಾದ ಸಾಮಾನ್ಯ ಸಭೆಗೆ ಹೇಳದೇ ಕೇಳದೇ ಹೋಗಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಸದಸ್ಯರು ವಾಗ್ಧಾಳಿ ನಡೆದಿಸಿದರು. 

Advertisement

ಸದಸ್ಯರ ವಾಗ್ಧಾಳಿಗೆ ಆತಂಕಕ್ಕೆ ಒಳಗಾದ ಸಿಇಒ ಹೆಪ್ಸಿಬಾರಾಣಿ ಕೋರ್ಲಪಾಟಿ ಅವರು, ಸಿಇಒ ಹುದ್ದೆ ಜತೆಗೆ ಇತರ ಹುದ್ದೆಗಳನ್ನು ಹೆಚ್ಚುವರಿಯಾಗಿ ನಿಭಾಯಿಸಲಾಗಿದೆ. ಜಿಪಂನಲ್ಲಿ ಅಧಿಕಾರಿಗಳ ಕೊರತೆ ನಡುವೆ ಆರ್ಥಿಕ ಗುರಿಯನ್ನು ಶೇ. 93ರಷ್ಟು ಸಾಧಿಸಲಾಗಿದೆ ಎಂದು ಸಮಜಾಯಿಸಲು ಮುಂದಾದರು.

ಇದಕ್ಕೆ ಸದಸ್ಯರು ಮತ್ತೆ ವಾಗ್ಧಾಳಿ ಮುಂದುವರಿಸಿ, ಒಂದೇ ಒಂದು ಸ್ಥಳಕ್ಕೆ ಹೋಗಿ ಭೇಟಿ ನೀಡಲಿಲ್ಲ. ನಮ್ಮೊಂದಿಗೆ ತಾವು ಪೊಲೀಸ್‌ರಾಗಿ ನಮ್ಮನ್ನು ಕಳ್ಳರ ರೀತಿನಲ್ಲಿ ನಡೆಸಿಕೊಂಡಿದ್ದಿರಿ, ಈ ಹಿಂದೆ ಸೇವೆ ಸಲ್ಲಿಸಿದ್ದ ಜಿಲ್ಲೆಗಳಲ್ಲೂ ಸರಿಯಾಗಿ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಅಲ್ಲೂ ಕೂಡಾ ಸೇವೆ ಬೇಡ ಎಂದು ಜನಪ್ರತಿನಿಧಿಗಳು ನಿರ್ಣಯ ತೆಗೆದುಕೊಂಡಿದ್ದನ್ನು ನೋಡಿದರೆ ನಿಮ್ಮ ಕಾರ್ಯವೈಖರಿಗೆ ಕನ್ನಡಿ ಹಿಡಿದಂತಿದೆ. ಆದ್ದರಿಂದ ನಿಮ್ಮ ಉಸಾಬರಿಯೇ ಬೇಡ. ಆದ್ದರಿಂದ ಸಭೆ ನಡೆಸೋದು ಯಾವ ಪುರುಷಾರ್ಥಕ್ಕೆ ಎಂದು ಪುನರುಚ್ಚರಿಸಿದರು.

ಅರಳಗುಂಡಗಿ ಕ್ಷೇತ್ರದ ಸದಸ್ಯ ರೇವಣಸಿದ್ದಪ್ಪ ಸಂಕಾಲಿ ಅವರು ಸದಸ್ಯರ ಒಂದೇ ಒಂದು ಮಾತನ್ನು ಸಿಇಒ ಹಾಗೂ ಜಿಪಂ ಉಪಾಧ್ಯಕ್ಷರು ಕೇಳಿಲ್ಲ ಎಂದು ಹೇಳಿದರು. ಇದೇ ವೇಳೆ ಸಭೆಗೆ ಮೊದಲ ಬಾರಿಗೆ ಆಗಮಿಸಿದ ನೂತನ ಶಾಸಕರಾದ ರಾಜಕುಮಾರ ಪಾಟೀಲ ತೇಲ್ಕೂರ, ಬಸವರಾಜ ಮತ್ತಿಮೂಡ ಅವರನ್ನು ಸನ್ಮಾನಿಸಲಾಯಿತು.

ಸದಸ್ಯರೇ ಹಠ ಬಿಡಿ: ಶಾಸಕ ತೇಲ್ಕೂರ ಸಲಹೆ
ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದ ಜಿಪಂ ಹೀಗೆ ಸಾಗುತ್ತಿರುವುದು ಶೋಭೆ ತರುವಂತದ್ದಲ್ಲ. ಇಲ್ಲಿ ಯಾರೂ ಮೇಲೆ-ಕೆಳಗೆ ಎಂಬುದಿಲ್ಲ. ಅಧಿಕಾರಿಗಳು-ಜನಪ್ರತಿನಿಧಿಗಳು ಜತೆ-ಜತೆಯಾಗಿ ಮುನ್ನಡದರೆ ಮಾತ್ರ ಅಭಿವೃದ್ಧಿಯಾಗಲು ಸಾಧ್ಯ. ಇಲ್ಲಿ ಒಬ್ಬರು ತಮ್ಮ ಕರ್ತವ್ಯಕ್ಕೆ ಚ್ಯುತಿ ತಂದುಕೊಂಡರೆ ಯಾವುದೇ ಕೆಲಸ ಪರಿಪೂರ್ಣ ಆಗುವುದಿಲ್ಲ ಎಂದು ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಸಲಹೆ ನೀಡಿದರು. ಕಲಬುರಗಿ ಜಿಪಂನಲ್ಲಿ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಡುವೆ ಅಂತರ ಆಗಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ. ಈ ಹಿಂದೆ ಯಾವುದೇ ಲೋಪವಾಗಿದ್ದರೆ ಅವುಗಳನ್ನು ಮತ್ತೆ ಕೆದಕದೆ ಜಿಪಂ ಸದಸ್ಯರು ಮತ್ತು ಅಧಿಕಾರಿಗಳು ಸಮನ್ವಯದಿಂದ ಜಿಲ್ಲೆಯ ಅಭಿವೃದ್ಧಿಯಲ್ಲಿ ತೊಡಗಬೇಕು.

ಸಭೆಯಲ್ಲಿ ಒಳ್ಳೆಯ ನಿರ್ಣಯ ಲೈಗೊಳ್ಳುವ ಮೂಲಕ ಜನರಿಗೆ ಸಹಾಯವಾಗಬೇಕು. ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಮುಂದುವರಿಸುವುದು ಅಥವಾ ಬಿಡುವುದು ಸರ್ಕಾರಕ್ಕೆ ಬಿಟ್ಟ ವಿಷಯ. ಸದಸ್ಯರೆಲ್ಲರೂ ಹಠ ಬಿಟ್ಟು ಸಭೆ ಮುಂದುವರಿಸಿ ಚರ್ಚಿಸಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next