Advertisement

ಅಧಿಕಾರಿಗಳಿಗೆ ಬೆವರಿಳಿಸಿದ ತಾಪಂ ಸದಸ್ಯರು!

12:13 PM Sep 01, 2017 | |

ಎಚ್‌.ಡಿ.ಕೋಟೆ: ತಾಲೂಕು ಮಟ್ಟದ ಅಧಿಕಾರಿಗಳು ಗ್ರಾಮ ಸಭೆಗಳಿಗೂ ಬರಲ್ಲ…ಇತ್ತ 2 ತಿಂಗಳಿಗೊಮ್ಮೆ ನಡೆಯುವ ತಾಪಂ ಸಾಮಾನ್ಯ ಸಭೆಗೂ ಬರಲ್ಲ… ನಮಗೆ ಇಲಾಖೆಗಳ ಕಾರ್ಯಕ್ರಮಗಳು ಮತ್ತು ಸೌಲಭ್ಯಗಳ ಬಗ್ಗೆ ತಿಳಿಸುವವರು ಯಾರು… ನಾವು ಯಾರನ್ನು ಕೇಳಬೇಕು… ಇಂತಹ ಸಭೆಗಳನ್ನು ಏಕೆ ಮಾಡುತ್ತೀರಿ…? 

Advertisement

ಹೀಗೆಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದು ತಾಪಂ ಸದಸ್ಯರು. ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಪಂ ಅಧ್ಯಕ್ಷೆ ಮಂಜುಳ ದೇವಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಸಭೆ ಆರಂಭವಾಗುತ್ತಿದ್ದಂತೆ ಸದಸ್ಯ ವೆಂಕಟೇಶ್‌ ಮಾತನಾಡಿ, ಅಧ್ಯಕ್ಷರೇ ತಾನು ಕಳೆದ 2 ಸಭೆಗಳಿಂದಲೂ ನಿಮಗೆ ತಿಳಿಸುತ್ತಿದ್ದೇನೆ. ಗ್ರಾಪಂಗಳಲ್ಲಿ ನಡೆಯುವ ಗ್ರಾಮ ಸಭೆಗಳಿಗೆ ತಾನು ಹೋಗಿದ್ದೇನೆ.

ಆದರೆ, ಯಾವ ಅಧಿಕಾರಿಗಳೂ ಬರಲ್ಲ. ಜನ ನಮಗೆ ಬಾಯಿಗೆ ಬಂದಂತೆ ಬೈಯ್ಯುತ್ತಿದ್ದಾರೆಂದು ದೂರಿದರು. ಈ ವೇಳೆ ನೀರಾವರಿ ಎಂಜಿನಿಯರ್‌ ಎಲ್ಲಿ, ಜಿಪಂ ಎಂಜಿನಿಯರ್‌ ಬಂದಿಲ್ಲ, ಜನರು ಕ್ಷೇತ್ರದ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಪರದಾಡುತ್ತಿದ್ದಾರೆ. ನಾವು ಯಾರಿಗೆ ಹೇಳಬೇಕು ಎಂದು ಪ್ರಶ್ನಿಸಿದರು.

ತಾಪಂ ಇಒ ಶ್ರೀಕಂಠರಾಜೇಅರಸ್‌ ಮಧ್ಯ ಪ್ರವೇಶಿಸಿ, ಸ್ಪಷ್ಟೀಕರಣ ನೀಡಿದರು. ಅಬಕಾರಿ ಅಧಿಕಾರಿ ಎಲ್ಲಿ ಅಧ್ಯಕ್ಷರೇ ಕಳೆದ ಎಲ್ಲಾ ಸಭೆಗೂ ಗೈರಾಗಿದ್ದಾರೆಂದರು. ಮತ್ತೇ ಇಒ ಮಧ್ಯ ಪ್ರವೇಶಿಸಿ, ಉತ್ತರ ನೀಡಲು ಮುಂದಾದಾಗ ಕೆರಳಿದ ಸದಸ್ಯ ವೆಂಕಟೇಶ್‌, ರೀ ಇಒ ನಾವು ಕೆಲಸ ಇಲ್ಲದೆ ನಿಂತಿಲ್ಲ. ನೀವು ಮೇಲೆ ಕೂತು ಗೈರಾದ ಎಲ್ಲರನ್ನೂ ನೀವೇ ಸಮರ್ಥಿಸಿಕೊಳ್ಳಬೇಡಿ ಎಂದು ದೂರಿದರು.

 ನಂತರ ಸಭೆ ಬಹಿಷ್ಕರಿಸುತ್ತೇನೆ ಎಂದು ಹೇಳಿ ಹೊರ ಹೋಗಲು ಮುಂದಾದರು. ಈ ವೇಳೆ ಎಲ್ಲವನ್ನೂ ಸರಿಪಡಿಸೋಣ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಶಂಭೇಗೌಡ ಮತ್ತು ಕೆಲ ಸದಸ್ಯರು ಸಮಾಧಾನಪಡಿಸಿದರು. ಸದಸ್ಯರಾದ ಹಂಚೀಪುರ ಎಚ್‌.ಸಿ.ಮಹದೇವಸ್ವಾಮಿ, ಇನ್ನಾದರೂ ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಅಧಿಕಾರಿಗಳು ಸೇರಿ ಗ್ರಾಮ ಮಟ್ಟದಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಿ ಎಂದು ಸಲಹೆ ನೀಡಿದರು.

Advertisement

ಮಹಿಳಾ ಸದಸ್ಯೆ ಸುಧಾ, ಡಿ.ಬಿ.ಕುಪ್ಪೆ ಗಡಿಭಾಗದ ಗ್ರಾಮವಾಗಿದ್ದು ಪ್ರಾಥಮಿಕ ಆಸ್ಪತ್ರೆಯಲ್ಲಿ 6 ತಿಂಗಳಿಂದ ವೈದ್ಯರಿಲ್ಲ. ಪ್ರತಿ ಸಭೆಯಲ್ಲೂ ಹೇಳುತ್ತಿದ್ದೇನೆ. ಸಮಸ್ಯೆ ಮಾತ್ರ ಬಗೆಹರಿದಿಲ್ಲ ಎಂದರು. ಪ್ರಭಾರ ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಜ್ವಲ್‌, ಡಿ.ಬಿ.ಕುಪ್ಪೆಗೆ ಈಗಾಗಲೇ 3-4 ವೈದ್ಯರನ್ನು ನಿಯೋಜಿಸಿದರೂ ಯಾರೂ ಹೋಗಲ್ಲ. ಮೇಲಧಿಕಾರಿಗಳಿಗೆ ಪತ್ರ ಬರೆದು ಶೀಘ್ರ ತಾತ್ಕಾಲಿಕ ವೈದ್ಯರೊಬ್ಬರನ್ನು ವಾರಕ್ಕೆ ಒಂದು ಬಾರಿಯಾದರೂ ಇರುವಂತೆ ನೇಮಿಸುತ್ತೇನೆಂದರು.

ತೋಟಗಾರಿಕೆ, ಕೃಷಿ, ರೇಷ್ಮೆ ಹಾಗೂ ಪಶುವೈದ್ಯಕೀಯ ಅಧಿಕಾರಿಗಳು ಹಾಜರಿದ್ದು ತಮ್ಮ ಇಲಾಖೆಯಲ್ಲಿ ಕಾರ್ಯಕ್ರಮಗಳ ಬಗ್ಗೆ ಸಿಗುವ ಅನುದಾನಗಳ ಬಗ್ಗೆ ಮಾಹಿತಿ ನೀಡಿದರು. ತಾಪಂ ಉಪಾಧ್ಯಕ್ಷೆ ಮಂಜುಳಾ, ಸದಸ್ಯರಾದ ಟಿ.ವೆಂಕಟೇಶ್‌, ಸುಂದರನಾಯ್ಕ, ಗಿರಿಗೌಡ, ಹೆಬ್ಬಲಗುಪ್ಪೆ ರವಿ, ಸುಧಾ ಬಸವರಾಜು, ಕುಸುಮ, ಬೀದರಹಳ್ಳಿ ರಾಜು, ಎಚ್‌.ಸಿ.ಮಹದೇವಸ್ವಾಮಿ, ಅಂಕನಾಯ್ಕ,ತಾಲೂಕು ಮಟ್ಟದ ಅಧಿಕಾರಿಗಳಾದ ರೇಷ್ಮೆ ಇಲಾಖೆ ವಿಸ್ತರಣಾಧಿಕಾರಿ ಉಮೇಶ್‌, ಕೃಷಿ ಅಧಿಕಾರಿ ಜಯರಾಮಯ್ಯ, ಸೆಸ್ಕ್ ಎಇಇ ಪ್ರದೀಪ್‌, ಸರಗೂರು ಸೆಸ್ಕ್ ಎಇಇ ಎಂ.ಕುಮಾರ್‌ ಇದ್ದರು.

ನೀವು ಇಒ ಆಗಕ್ಕೆ ಲಾಯಕ್ಕಿಲ್ಲ 
ಗೈರಾಗಿರುವ ಅಧಿಕಾರಿಗಳ ಬಗ್ಗೆ ತಾಪಂ ಇಒ ಶ್ರೀಕಂಠರಾಜೇಅರಸ್‌ ಅವರು ಸಮರ್ಥಿಕೊಂಡಿದ್ದರಿಂದ ಕೆರಳಿದ ಸದಸ್ಯರು ಏನ್ರಿ ಇಒ ನೀವು ಚಿಕ್ಕಮಕ್ಕಳ ರೀತಿ ಅಡ್ತೀರಲ್ಲ. ನೀವು ತಾಪಂ ಇಒ ಆಗಲು ಲಾಯಕ್ಕಿಲ್ಲ, ನಿಮಗೆ ಯಾವ ಅಧಿಕಾರೀನೂ ಬೆಲೆ ಕೊಡಲ್ಲ. ನೀವು ಕ್ರಮ ತೆಗೆದುಕೊಳ್ಳಲ್ಲ, ಗೈರಾದವರ ವಿರುದ್ಧ ಸೂಕ್ತ ಕ್ರಮಕ್ಕೆ ಜಿಪಂ ಸಿಇಒಗೆ ಪತ್ರ ಬರೆಯಿರಿ ಎಂದು ತಾಪಂ ಸದಸ್ಯರು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next