ನವದೆಹಲಿ: ವಿಡಿಯೋ ಕಾನ್ಫರೆನ್ಸ್ ಅಪ್ಲಿಕೇಷನ್ ಮೂಲಕ ಜಗತ್ತಿನಾದ್ಯಂತ ಸದ್ದು ಮಾಡಿದ್ದ ಝೂಮ್ ಕಂಪನಿ ಇದೀಗ ಉದ್ಯೋಗ ಕಡಿತದಿಂದ ಸುದ್ದಿಯಾಗಿದೆ. ತನ್ನ ಕಂಪನಿಯ ಸುಮಾರು 1,300 ಸಿಬ್ಬಂದಿಯನ್ನು ತೆಗೆದುಹಾಕುವ ಮೂಲಕ ಕಂಪನಿಯ ಒಟ್ಟು ಉದ್ಯೋಗಿಗಳ ಪೈಕಿ ಶೇ.15ರಷ್ಟು ಸಿಬ್ಬಂದಿಯನ್ನು ಕೈಬಿಟ್ಟು ಆದೇಶ ಹೊರಡಿಸಿದೆ. ಈ ಮೂಲಕ ಜಗತ್ತಿನಾದ್ಯಂತ ಉದ್ಯೋಗ ಕಡಿತದಿಂದ ಸುದ್ದಿಯಾಗಿರುವ ದೈತ್ಯ ಟೆಕ್ ಕಂಪನಿಗಳ ಸಾಲಿಗೆ ಇದೀಗ ಝೂಮ್ ಕೂಡ ಸೇರಿದಂತಾಗಿದೆ.
ಜಗತ್ತಿನ ಆರ್ಥಿಕ ಹೊಡೆತದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಕೋವಿಡ್ ಸಮಯದಲ್ಲಿ ಅತಿ ವೇಗವಾಗಿ ಬೆಳೆದಿದ್ದ ಆಪ್‌ಗಳ ಪೈಕಿ ಝೂಮ್ ಆಪ್ ಕೂಡ ಒಂದು.
ʻನಾವು ಕೋವಿಡ್ ಅತ್ಯಂತ ವೇಗವಾಗಿ ಬೆಳೆದಿದ್ದೆವು. ಹೀಗಾಗಿ ನಾವು ಆ ಸಮಯದಲ್ಲಿ ಅತೀ ಹೆಚ್ಚು ಜನರನ್ನು ನೇಮಕಾತಿ ಮಾಡಿಕೊಂಡಿದ್ದೆವು. ಆದರೆ ಈಗ ಜಗತ್ತಿನ ಆರ್ಥಿಕತೆಯ ಅನಿಶ್ಚಿತತೆಯಿಂದಾಗಿ ನಾವು ಉದ್ಯೋಗ ಕಡಿತದ ನಿರ್ಧಾರಕ್ಕೆ ಬಂದಿದ್ದೇವೆʼ ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಎರಿಕ್ ಯುವಾನ್.
ʻಝೂಮ್ ಅತ್ಯಂತ ಉತ್ತಮವಾದ ಸೇವೆಯನ್ನು ನೀಡುವ ಮೂಲಕ ತನ್ನ ಗ್ಯಾಹಕರನ್ನು ಸೆಳೆದಿತ್ತು. ಕಳೆದ ವರ್ಷ ಕಂಪನಿಯ ಷೇರುಗಳು ಶೇ. 63 ರಷ್ಟು ಕುಸಿತ ಕಂಡಿತ್ತು. ನಾವು ಕೆಲವೊಂದು ತಪ್ಪು ನಿರ್ಧಾರಗಳನ್ನೂ ತೆಗೆದುಕೊಂಡಿದ್ದೆವುʼ ಎಂದು ಎರಿಕ್ ಯುವಾನ್ ತಮ್ಮ ಬ್ಲಾಗ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
2019 ಜುಲೈನಿಂದ ಅಕ್ಟೋಬರ್ 2022ರ ಮಧ್ಯೆ ಝೂಮ್ ಕಂಪನಿಯ ಉದ್ಯೋಗಿಗಳ ಸಂಖ್ಯೆ ಶೇ .275 ಏರಿಕೆಯಾಗಿ 8,422ಕ್ಕೆ ತಲುಪಿತ್ತು ಎಂದು ಭದ್ರತೆ ಮತ್ತು ವಿನಿಮಯ ಆಯೋಗ ಹೇಳಿದೆ.