ನವದೆಹಲಿ: ಚೆನ್ನೈ ಪೊಲೀಸರ ಸೂಚನೆಯ ನಂತರ 10 ನಿಮಿಷದಲ್ಲಿ ಆಹಾರ ವಿತರಣಾ ಸೇವೆಯ ಕುರಿತು ಝೊಮ್ಯಾಟೋ ಸ್ಪಷ್ಟನೆ ನೀಡಿದೆ.
10 ನಿಮಿಷಗಳಲ್ಲಿ ಆಹಾರ ವಿತರಣೆಯ ಭರವಸೆ ನೀಡುವ ಇತ್ತೀಚಿನ ಸೇವೆಯು ಕುರಿತು ಆನ್‌ಲೈನ್‌ನಲ್ಲಿ ಸಾಕಷ್ಟು ಚರ್ಚೆ ಆರಂಭವಾಗಿದ್ದು, ಮುಂದಿನ ತಿಂಗಳು ಹರಿಯಾಣದ ಗುರುಗ್ರಾಮ್‌ನಲ್ಲಿ ಪ್ರಾಯೋಗಿಕ ಕಾರ್ಯಕ್ರಮ ಪ್ರಾರಂಭವಾಗಬೇಕಿತ್ತು. ವಿವಿಧ ರಾಜ್ಯಗಳ ಅಧಿಕಾರಿಗಳು ಆಹಾರ ಸಂಗ್ರಾಹಕರೊಂದಿಗೆ ವಿವರಗಳನ್ನು ಚರ್ಚಿಸುತ್ತಿದ್ದಾರೆ.
ಪತ್ರಿಕಾ ಪ್ರಕಟಣೆಯ ಪ್ರಕಾರ, ಗ್ರೇಟರ್ ಚೆನ್ನೈ ಟ್ರಾಫಿಕ್ ಪೊಲೀಸ್ ಇಲಾಖೆಯು ಇತ್ತೀಚೆಗೆ ರಸ್ತೆ ಸುರಕ್ಷತೆಯ ಕುರಿತು ಚರ್ಚಿಸಲು ಆಹಾರ ವಿತರಣಾ ಸಂಗ್ರಾಹಕರಾದ ಸ್ವಿಗ್ಗಿ ಮತ್ತು ಝೊಮ್ಯಾಟೋ ಪ್ರತಿನಿಧಿಗಳನ್ನು ಭೇಟಿ ಮಾಡಿ ಟ್ರಾಫಿಕ್ ಪರಿಸ್ಥಿತಿಗಳನ್ನು ಉಲ್ಲೇಖಿಸಿ 10 ನಿಮಿಷಗಳ ತ್ವರಿತ ವಿತರಣೆಯ ಭರವಸೆಯನ್ನು ಪ್ರಶ್ನಿಸಿತ್ತು.
ದೀಪಿಂದರ್ ಗೋಯಲ್ ನೇತೃತ್ವದ ಕಂಪನಿಯು 10 ನಿಮಿಷಗಳ ತ್ವರಿತ ವಿತರಣಾ ಸೇವೆಯನ್ನು ಪರೀಕ್ಷಿಸಲು ಉದ್ದೇಶಿಸಿರುವ ನಗರಗಳಲ್ಲಿ ಚೆನ್ನೈ ಸೇರಿಲ್ಲ ಎಂದು ತಿಳಿಸಿದೆ. ತ್ವರಿತ ವಿತರಣಾ ಸೇವೆಯು ಕೇವಲ ಪ್ರಾಯೋಗಿಕ ಯೋಜನೆಯಾಗಿದೆ, ಇದು ಭವಿಷ್ಯದಲ್ಲಿ ತನ್ನ ಯೋಜನೆಯನ್ನು ಅನ್ನು ಬದಲಾಯಿಸಬಹುದು ಎಂದು ಹೇಳಿದೆ.
10-ನಿಮಿಷದ ತ್ವರಿತ ಡೆಲಿವರಿಯು ವೇಗವಾಗಿ ಮಾರಾಟವಾಗುವ ಮೆನುಗಳನ್ನು ಒಳಗೊಂಡಿರುತ್ತದೆ ಎಂದು ಝೊಮ್ಯಾಟೋ ಈ ಹಿಂದೆ ವಿವರಿಸಿತ್ತು. ಇದಲ್ಲದೆ, ಸ್ಟ್ಯಾಂಡರ್ಡ್ 30-ನಿಮಿಷದ ಡೆಲಿವರಿಯಲ್ಲಿ ಒಬ್ಬ ಎಕ್ಸಿಕ್ಯೂಟಿವ್ ಪ್ರಯಾಣಿಸುವ ಸರಾಸರಿ 5 ರಿಂದ 7 ಕಿಲೋಮೀಟರ್‌ಗಳ ಬದಲಿಗೆ ಅವರ ಡೆಲಿವರಿ ಎಕ್ಸಿಕ್ಯೂಟಿವ್‌ಗಳು ಪ್ರಯಾಣಿಸುವ ಸರಾಸರಿ ದೂರವು 1 ಕಿಮೀ ನಿಂದ 2 ಕಿಮೀ ಆಗಿರುತ್ತದೆ ಎಂದು ಕಂಪನಿ ಹೇಳಿದೆ.
30-ನಿಮಿಷದ ಡೆಲಿವರಿಯಲ್ಲಿ ಪ್ರಯಾಣಿಸುವ 15-20 ನಿಮಿಷಗಳ ಸರಾಸರಿ ಸಮಯಕ್ಕೆ ವಿರುದ್ಧವಾಗಿ, ಡೆಲಿವರಿ ಎಕ್ಸಿಕ್ಯೂಟಿವ್‌ಗಳು ಪ್ರಯಾಣಿಸುವ ಸರಾಸರಿ ಸಮಯವನ್ನು 3 ರಿಂದ 6 ನಿಮಿಷಗಳವರೆಗೆ ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಆಹಾರವನ್ನು ವೇಗವಾಗಿ ತಲುಪಿಸಲು ವಿತರಣಾ ಪಾಲುದಾರರ ಮೇಲೆ ಯಾವುದೇ ಒತ್ತಡವನ್ನು ಹೇರುವುದಿಲ್ಲ ಎಂದು ಕಂಪನಿಯು ಒತ್ತಿಹೇಳಿದೆ. ತಡವಾದ ಡೆಲಿವರಿಗಳಿಗಾಗಿ ವಿತರಣಾ ಪಾಲುದಾರರಿಗೆ ಝೊಮ್ಯಾಟೋ ದಂಡ ವಿಧಿಸುವುದಿಲ್ಲ ಎಂದು ತಿಳಿದು ಬಂದಿದೆ.
ಅತೀ ವೇಗದ ಚಾಲನೆ ಮತ್ತು ವಿತರಕರ ಮೇಲೆ ಈ ರೀತಿಯ ಯೋಜನೆಗಳು ಕೆಟ್ಟ ಪರಿಣಾಮ ಬೀರುತ್ತವೆ, ಅವಘಡಗಳಿಗೆ ಕಾರಣವಾಗುತ್ತವೆ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ಕೇಳಿ ಬಂದಿತ್ತು.