ಜೋಯಿಡಾ: ತಾಲೂಕಿನಲ್ಲಿ ಕಳೆದ ಒಂದುವಾರದಿಂದ ಬಿದ್ದ ಮಳೆಯಿಂದಾಗಿ ಕಟಾವಿಗೆ ಬಂದ ಭತ್ತದ ಬೆಳೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಕಂದಾಯ ಹಾಗೂ ಕೃಷಿ ಅಧಿಕಾರಿಗಳು ಜಂಟಿ ಸಮಿಕ್ಷೆಮಾಡಿ ಪರಿಹಾರ ನೀಡಬೇಕೆಂದು ರೈತರು ಅಗ್ರಹಿಸಿದ್ದಾರೆ.
ತಾಲೂಕಿನಲ್ಲಿ 5600 ಹೆಕ್ಚೆರ್ ಕೃಷಿ ಭೂಮಿ ಇದೆ. ಈಗಾಗಲೇ ಭತ್ತದ ಬೆಳೆ ಕಟಾವಿಗೆ ಬಂದಿದೆ. ಒಂದು ವಾರದಿಂದ ಬೀಳುತ್ತಿದ್ದ ಭಾರಿ ಮಳೆಯಿಂದ ತಾಲೂಕಿನಾದ್ಯಂತ ಕಟಾವಿಗೆ ಬಂದ ಭತ್ತದ ಬೆಳೆ ನೆಲಕಚ್ಚಿದೆ. ಇದರಿಂದ ಭತ್ತದ ಗದ್ದೆಗೆ ನೀರು ತುಂಬಿ, ಲಕ್ಷಾಂತರ ರೂಪಾಯಿ ಬೆಳೆ ಹಾನಿಯಾಗಿದೆ.
ರಾಮನಗರ, ಜಗಲಪೇಟ, ಜೋಯಿಡಾ, ಕುಂಬಾರವಾಡಾ ಹೋಬಳಿ, ಅಣಶಿ, ಉಳವಿ, ಪ್ರಧಾನಿ ಈ ಪ್ರದೇಶದಲ್ಲಿ ಸಂಪೂರ್ಣವಾಗಿ ಭತ್ತದ ಬೆಳೆ ಕಟಾವಿಗೆ ಬಂದಿದೆ. ಅಕಾಲಿಕ ಮಳೆ ಪ್ರಾರಂಭಗೊಂಡಿದೆ. ರೈತರ ಬದುಕು ಅಯೋಮಯವಾಗಿದೆ.
ತಾಲೂಕಿನಲ್ಲಿ ಕಂದಾಯ ಹಾಗೂ ಕೃಷಿ ಇಲಾಖೆಗಳು ಜಂಟಿಯಾಗಿ ಸಮಿಕ್ಷೆ ಮಾಡಿ ರೈತರಿಗೆ ಬೆಳೆ ಪರಿಹಾರದ ವರದಿಯನ್ನು ಸರಕಾರಕ್ತೆ ಸಲ್ಲಿಸಬೇಕಾಗಿದೆ. ಆದರೆ ಇಂದಿಗೂ ಇಲಾಖೆಗಳಿಂದ ಸಮಿಕ್ಷೆ ಮುಗಿದಿಲ್ಲ.
ಸೇವಾ ಸಹಕಾರಿ ಸಂಘಗಳಲ್ಲಿ ಸಾಲ ಮಾಡಿದ ರೈತರು ಬೆಳೆ ವಿಮೆ ಮಾಡಿಕೊಂಡಿರುತ್ತಾರೆ. ಇವರಿಗೆ ಬೆಳೆ ಹಾನಿಯಾದರೆ ಕಡ್ಡಾಯವಾಗಿ ಪರಿಹಾರ ನೀಡಬೇಕು. ಬೆಳೆ ವಿಮೆ ಮಾಡದ ಕೆಲ ರೈತರಿಗೆ ಬೆಳೆ ಹಾನಿಯಾದ ಬಗ್ಗೆ ಪರಿಹಾರದ ಅಗತ್ಯವಿದೆ.
ತಾಲೂಕಿನಲ್ಲಿ 122 ಹೆಕ್ಚೆರ್ ಭತ್ತದ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ರೈತರು ಕೃಷಿ ಇಲಾಖೆಯಲ್ಲಿ ಅರ್ಜಿ ನೀಡಬಹುದು. ವಿಮೆ ಮಾಡಿದ ರೈತರು ಸೇವಾ ಸಹಕಾರಿ ಸಂಘಗಳಲ್ಲಿ ದಾಖಲೆ ನೀಡಬೇಕು. ಯಾವ ರೈತರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುತ್ತದೆ.
– ಸುಷ್ಮಾ ಮಳಿಮಠ