ಹರಾರೆ: ಬರೋಬ್ಬರಿ ಮೂವತ್ತೇಳು ವರ್ಷಗಳ ಕಾಲ ಆಫ್ರಿಕಾ ಖಂಡದ ರಾಷ್ಟ್ರ ಜಿಂಬಾಬ್ವೆ ಅಧ್ಯಕ್ಷರಾಗಿದ್ದ ರಾಬರ್ಟ್ ಗ್ಯಾಬ್ರಿಯಲ್ ಮುಗಾಬೆ ಮಂಗಳವಾರ ಕೊನೆಗೂ ರಾಜೀನಾಮೆ ನೀಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಅಲ್ಲಿನ ಸೇನೆ ನಡೆಸಿದ ಕ್ಷಿಪ್ರ ಕ್ರಾಂತಿಯಲ್ಲಿ
ಅವರು ಅಧಿಕಾರ ಕಳೆದುಕೊಂಡಿದ್ದರು.
ರಾಜೀ ನಾಮೆ ವಿಚಾರವನ್ನು ಜಿಂಬಾಬ್ವೆ ಸಂಸತ್ ಸ್ಪೀಕರ್ ಜಾಕೊಬ್ ಮುಡೆಂಡಾ ಪ್ರಕಟಿಸಿ ದ್ದಾರೆ. ದೇಶದ ಸಂವಿಧಾನದ 96ನೇ ವಿಧಿಯನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ಹುದ್ದೆಯಿಂದ ನಿರ್ಗಮಿಸುತ್ತಿದ್ದೇನೆ ಎಂದು ಮುಗಾಬೆ ತ್ಯಾಗಪತ್ರದಲ್ಲಿ ವಿವರಿಸಿದ್ದಾರೆ.
ಗಮನಾರ್ಹ ಬೆಳವಣಿಗೆಯೆಂದರೆ ಅವರ ವಿರುದ್ಧ ಸಂಸತ್‌ನಲ್ಲಿ ಮಂಡಿಸಲಾಗಿದ್ದ ವಾಗ್ಧಂಡನೆ ಗೊತ್ತುವಳಿ ವಿರುದ್ಧ ಚರ್ಚೆ ನಡೆಯುತ್ತಿದ್ದಂತೆಯೇ ಈ ನಾಟಕೀಯ ಬೆಳವಣಿಗೆ ನಡೆದಿದೆ. ಭಾನುವಾರ ಹುದ್ದೆಯಿಂದ ನಿರ್ಗಮಿಸಲು ಒಪ್ಪಿದ್ದರಾದರೂ, ನಿರ್ಗಮಿಸಿರಲಿಲ್ಲ. ಮಾಧ್ಯಮಗಳಲ್ಲಿ ಮುಗಾಬೆ ಹುದ್ದೆಯಿಂದ ನಿರ್ಗಮಿಸಿದ್ದಾರೆ ಎಂಬ ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಸಂಸದರು, ಸಾರ್ವಜನಿಕರು ಕೇಕೆ ಹಾಕಿ ಸಂಭ್ರಮಿಸಿದರು. 1980ರಿಂದ ಸತತವಾಗಿ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದ ರಾಬರ್ಟ್, ಹಲವು ರೀತಿಯ ಅಕ್ರಮ, ಸಂವಿಧಾನದ ಉಲ್ಲಂಘನೆ ಮಾಡಿದ ಆರೋಪಕ್ಕೆ ಗುರಿಯಾಗಿದ್ದಾರೆ.
ಮುಗಾಬೆ ಪತ್ನಿ ಗ್ರೇಸಿ (52) ಝಾನು -ಪಿಎಫ್ ಪಕ್ಷದ ನೇತೃತ್ವ ವಹಿಸುವ ಸಾಧ್ಯತೆ ಅಧಿಕವಾಗಿದೆ. ಬ್ರಿಟಿಷರ ವಿರುದ್ಧ ಹೋರಾಟ ನಡೆಸಿ ಗೆದ್ದು ಜಿಂಬಾಬ್ವೆಗೆ ಸ್ವಾತಂತ್ರ್ಯ ತಂದು ಕೊಟ್ಟು ಅಧಿಕಾರಕ್ಕೇರಿದ ಮುಗಾಬೆ ಕೊನೆಯ ದಿನಗಳಲ್ಲಿ ಗಂಭೀರ ಆರೋಪಗಳಿಗೆ ಗುರಿಯಾಗಿದ್ದಾರೆ.