ಮುಂಬೈ: 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕೂಟದ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಎಲ್ಲಾ ತಂಡಗಳು ಅಭ್ಯಾಸದಲ್ಲಿ ತೊಡಗಿದೆ. ಈ ನಡುವೆ ಕೆಲ ತಂಡಗಳು ತಮ್ಮ ಗಾಯಗೊಂಡ ಆಟಗಾರರ ಬದಲಿ ವ್ಯವಸ್ಥೆ ಮಾಡಿಕೊಳ್ಳುತ್ತಿವೆ.
ಹೊಸ ಫ್ರಾಂಚೈಸಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ವೇಗದ ಬೌಲರ್ ಮಾರ್ಕ್ ವುಡ್ ಅವರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೂಟದಿಂದಲೇ ಹೊರಬಿದ್ದ ಮಾರ್ಕ್ ವುಡ್ ಬದಲಿಗೆ ಲಕ್ನೋ ತಂಡ ಜಿಂಬಾಬ್ವೆ ಬೌಲರ್ ನನ್ನು ಕರೆತಂದಿದೆ.
ವುಡ್ ಬದಲಿಗೆ ಜಿಂಬಾಬ್ವೆ ತಂಡದ ವೇಗದ ಬೌಲರ್ ಬ್ಲೆಸ್ಸಿಂಗ್ ಮುಜರಬಾನಿ ಅವರನ್ನು ಲಕ್ನೋ ತಂಡ ಆಯ್ಕೆ ಮಾಡಿಕೊಂಡಿದೆ. ಆರು ಟೆಸ್ಟ್, 30 ಏಕದಿನ ಮತ್ತು 21 ಟಿ20 ಪಂದ್ಯಗಳನ್ನಾಡಿರುವ 25 ವರ್ಷದ ಮುಜರಬಾನಿ ಇದೇ ಮೊದಲ ಬಾರಿಗೆ ಐಪಿಎಲ್ ನಲ್ಲಿ ಆಡುವ ಅವಕಾಶ ಪಡೆದಿದ್ದಾರೆ.
ಇದನ್ನೂ ಓದಿ:ವನಿತಾ ವಿಶ್ವಕಪ್: ಬಾಂಗ್ಲಾ ವಿರುದ್ಧ ಗೆದ್ದ ಟೀಂ ಇಂಡಿಯಾದ ಸೆಮಿ ಆಸೆ ಜೀವಂತ
Related Articles
ಸೋಮವಾರ ತಡರಾತ್ರಿ, ಜಿಂಬಾಬ್ವೆಯಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಬ್ಲೆಸ್ಸಿಂಗ್ ಮುಜರಬಾನಿ ಜೊತೆಗಿನ ರಾಯಭಾರಿಯ ಚಿತ್ರವನ್ನು ಅಪ್‌ಲೋಡ್ ಮಾಡಿದೆ. ಜಿಂಬಾಬ್ವೆ ರಾಷ್ಟ್ರೀಯ ಆಟಗಾರ ಲಕ್ನೋ ಸೂಪರ್ ಜೈಂಟ್ಸ್‌ಗಾಗಿ ಆಡಲು ಭಾರತಕ್ಕೆ ತೆರಳುತ್ತಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಎಂಟು ವರ್ಷಗಳಲ್ಲೇ ಮೊದಲ ಆಟಗಾರ: ಬ್ಲೆಸ್ಸಿಂಗ್ ಮುಜರಬಾನಿ ಅವರು ಕಳೆದ ಎಂಟು ವರ್ಷಗಳಲ್ಲಿ ಐಪಿಎಲ್ ನಲ್ಲಿ ಭಾಗವಹಿಸುತ್ತಿರುವ ಮೊದಲ ಜಿಂಬಾಬ್ವೆ ಆಟಗಾರನಾಗಿದ್ದಾರೆ. 2014ರಲ್ಲಿ ಜಿಂಬಾಬ್ವೆಯ ಮಾಜಿ ನಾಯಕ ಬ್ರೆಂಡನ್ ಟೇಲರ್ ಅವರು ಸನ್ ರೈಸರ್ಸ್ ಹೈದರಾಬಾದ್ ತಂಡದ ಭಾಗವಾಗಿದ್ದರು. ಆದರೆ ಒಂದೂ ಪಂದ್ಯವಾಡದ ಅವರನ್ನು 2015ರಲ್ಲಿ ತಂಡದಿಂದ ಬಿಡುಗಡೆ ಮಾಡಲಾಗಿತ್ತು.
ಗಾಯಾಳು ಮಾರ್ಕ್ ವುಡ್ ಬದಲಿಗೆ ಬಾಂಗ್ಲಾದೇಶದ ವೇಗದ ಬೌಲರ್ ತಸ್ಕಿನ್ ಅಹ್ಮದ್ ಅವರನ್ನು ಲಕ್ನೋ ತಂಡ ಆಯ್ಕೆ ಮಾಡಿದೆ ಎಂದು ವರದಿಯಾಗಿತ್ತು. ಆದರೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ರಾಷ್ಟ್ರೀಯ ಬದ್ಧತೆಗಳ ಕಾರಣ ತಸ್ಕೀನ್ ಅಹ್ಮದ್ ಗೆ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ನೀಡಲು ನಿರಾಕರಿಸಿದೆ.