Advertisement
ಜನಸಂಖ್ಯೆ ಆಧಾರದಲ್ಲಿ ಕ್ಷೇತ್ರ ಪುನರ್‌ವಿಂಗಡಣೆ ಆಗಲಿದ್ದು, ಪ್ರತೀ ತಾಲೂಕಿಗೆ ಸ್ಥಾನಗಳ ಸಂಖ್ಯೆಯನ್ನು ಆಯೋಗ ನಿಗದಿ ಪಡಿಸಿದ್ದು, ಇದರ ಅನ್ವಯ ಯಾವ್ಯಾವ ಕ್ಷೇತ್ರಗಳನ್ನು ಹೊಸದಾಗಿ ರಚಿಸಬಹುದು ಎಂಬ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಪುನರ್ ವಿಂಗಡಿತ ಕ್ಷೇತ್ರಗಳಲ್ಲಿ ಸ್ಪರ್ಧೆ ನಡೆಯಲಿದೆ.
2016ರ ಚುನಾವಣೆ ಸಂದರ್ಭದಲ್ಲಿ ಪುತ್ತೂರು ತಾ.ಪಂ.ವ್ಯಾಪ್ತಿಗೆ ಕಡಬವು ಒಳಪಟ್ಟಿತ್ತು. ಆಗ ಒಟ್ಟು 24 ಸದಸ್ಯ ಸ್ಥಾನ ಬಲವನ್ನು ಹೊಂದಿತ್ತು. ಕಳೆದ ವರ್ಷ ಕಡಬ ಪ್ರತ್ಯೇಕ ತಾಲೂಕು ಆಗಿ ಅನಂತರ ಹೊಸ ತಾ.ಪಂ.ಆಗಿ ರೂಪುಗೊಂಡಿತು.
ಹೀಗಾಗಿ ಪುತ್ತೂರು ತಾ.ಪಂ.ನ 24 ಸ್ಥಾನಗಳ ಪೈಕಿ 10 ಸ್ಥಾನ ಕಡಬಕ್ಕೆ ಸೇರಿತು. ಇದರಿಂದ ಪುತ್ತೂರಿನ ಸ್ಥಾನ ಬಲ 14ಕ್ಕೆ ಇಳಿಯಿತು. ಹೊಸದಾಗಿ ಕ್ಷೇತ್ರ ಪುನರ್‌ರಚನೆ ಸಂದರ್ಭದಲ್ಲಿ ಮತ್ತೆ 3 ಸ್ಥಾನ ಇಳಿಕೆ ಕಂಡು 11 ಕ್ಕೆ ತಲುಪಲಿದೆ. ಜಿ.ಪಂ.ಕ್ಷೇತ್ರಕ್ಕೆ ಸಂಬಂಧಿಸಿ ಈ ಹಿಂದಿನ ಅವಧಿಯಲ್ಲಿ ಪುತ್ತೂರು ಕಡಬ ತಾಲೂಕು ಒಟ್ಟು 6 ಸ್ಥಾನ ಹೊಂದಿತ್ತು. ಈಗ ಅದರ ಸಂಖ್ಯೆ 8 ಕ್ಕೆ ಏರಿಕೆ ಕಂಡಿದೆ.
Related Articles
ಪುನರ್ ವಿಂಗಡಿತ ತಾ.ಪಂ., ಜಿ.ಪಂ.ಕ್ಷೇತ್ರಕ್ಕೆ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮದ ಹೆಸರನ್ನು ಇಡಲಾಗುತ್ತದೆ. ಪುನರ್ ವಿಂಗಡಣೆಗೆ ಸಂಬಂಧಿಸಿ ಆಯೋಗವು ಉಲ್ಲೇಖ-1 ಅನ್ವಯ ಮಾರ್ಗಸೂಚಿ ಹೊರಡಿಸಿದ್ದು, ಇದರ ಅನ್ವಯ ಕ್ಷೇತ್ರಗಳ ಪುನರ್ ವಿಂಗಡಣೆ ಮಾಡಿ ವರದಿ ಸಲ್ಲಿಸುವಂತೆ ಚುನಾವಣ ಆಯೋಗ ಜಿಲ್ಲಾಧಿಕಾರಿಗಳಿಗೆ ಸೂಚಿಸಿ ದಿನ ನಿಗದಿ ಮಾಡಿದೆ. ತಾಲೂಕುವಾರು ನಕ್ಷೆಯನ್ನು ಜಿ.ಪಂ. ಎನ್‌ಆರ್‌ಡಿಎಂಎಸ್ ಸಹಕಾರದೊಂದಿಗೆ ಸಿದ್ಧಪಡಿಸುವುದು, ಕ್ಷೇತ್ರವಾರು ಜನಸಂಖ್ಯೆ, ಗಡಿ ಗುರುತು ಇತ್ಯಾದಿಗಳ ಮಾಹಿತಿ ನೀಡುವಂತೆ ತಿಳಿಸಿದೆ.
Advertisement
ಜಿ.ಪಂ.ಕ್ಷೇತ್ರ ಪುನರ್ ವಿಂಗಡಣೆ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳನ್ನು ಗಣನೆಗೆ ತೆಗೆದು ಕೊಳ್ಳುವುದು, ತಾಲೂಕಿನೊಳಗಿರುವ ಗ್ರಾ.ಪಂ.ಗಳನ್ನು ವಿಭಜಿಸದೆ ಪೂರ್ಣ ಗ್ರಾ.ಪಂ.ಗಳನ್ನು ಒಟ್ಟುಗೂಡಿಸಿ ಒಂದು ಜಿ.ಪಂ.ಕ್ಷೇತ್ರವಾಗಿ ರಚಿಸುವುದು, ಗ್ರಾ.ಪಂ.ಗಳನ್ನು ಒಟ್ಟುಗೂಡಿಸುವ ಸಂದರ್ಭದಲ್ಲಿ ಅಕ್ಕಪಕ್ಕದ ಗ್ರಾ.ಪಂ.ಗಳನ್ನು ಒಂದು ಗೂಡಿಸುವುದು, ಒಂದೊಕ್ಕೊಂದು ಭೌಗೋ ಳಿಕವಾಗಿ ಹೊಂದಿಕೊಂಡಂತೆ ಇರುವ ಹಾಗೆ ನೋಡಿಕೊಳ್ಳುವುದು, ಸಂಪರ್ಕ ವ್ಯವಸ್ಥೆಗೆ ಅಡೆತಡೆ ಇಲ್ಲ ಎಂಬುದನ್ನು ದೃಢಪಡಿಸುವಿಕೆ ಸೇರಿದಂತೆ ನಿಯಮಗಳನ್ನು ವಿಧಿಸಲಾಗಿದೆ.
ತಾ.ಪಂ.ಕ್ಷೇತ್ರ ಪುನರ್ ರಚನೆ ಸಂದರ್ಭದಲ್ಲಿ ಜಿ.ಪಂ.ಕ್ಷೇತ್ರದೊಳಗೆ ಎಷ್ಟು ತಾ.ಪಂ.ಕ್ಷೇತ್ರಗಳನ್ನು ರಚಿಸಬಹುದೋ ಅಷ್ಟು ಕ್ಷೇತ್ರಗಳನ್ನು ಆ ಜಿ.ಪಂ.ಕ್ಷೇತ್ರದ ವ್ಯಾಪ್ತಿಯೊಳಗೆ ರಚಿಸುವುದು, ಪೂರ್ಣ ಗ್ರಾಮ ಪಂಚಾಯತ್‌ಗಳನ್ನು ಒಟ್ಟುಗೂಡಿಸಿ ಕ್ಷೇತ್ರ ರಚಿಸುವುದು ಅಥವಾ ಅದು ಸಾಧ್ಯವಾಗದಿದ್ದರೆ ಕಂದಾಯ ಗ್ರಾಮವನ್ನು ಬೇರ್ಪಡಿಸದೆ ಗ್ರಾಮ ಗಳನ್ನು ಗುಂಪು ಮಾಡುವುದು, ಒಂದು ತಾ.ಪಂ.ಕ್ಷೇತ್ರ ಎರಡು ಜಿ.ಪಂ. ವ್ಯಾಪ್ತಿಯೊಳಗೆ ಸೇರದಂತೆ ಗಮನಹರಿಸುವ ಬಗ್ಗೆ ಸೂಚನೆ ನೀಡಲಾಗಿದೆ. ತಾ.ಪಂ.ಕ್ಷೇತ್ರ ರಚಿಸಲು 12.5 ಸಾವಿರದಿಂದ 15 ಸಾವಿರ ಜನಸಂಖ್ಯೆ ಅಗತ್ಯವಿದ್ದರೆ, ಜಿ.ಪಂ.ಕ್ಷೇತ್ರ ರಚಿಸಲು 35 ರಿಂದ 40 ಸಾವಿರ ಜನಸಂಖ್ಯೆಯ ಆವಶ್ಯಕತೆ ಇದೆ ಎಂದು ತಾಲೂಕು ಚುನಾವಣ ಶಾಖಾ ಅಧಿಕಾರಿಗಳು ತಿಳಿಸಿದ್ದಾರೆ.
ಸುಳ್ಯ: ತಾ.ಪಂ. 11ಕ್ಕೆ ಇಳಿಕೆ ಸುಳ್ಯ,ಫೆ.11: ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗೆ ಕ್ಷೇತ್ರ ಪುನರ್ ವಿಂಗಡನೆಯಾಗಿದ್ದು ಸುಳ್ಯ ತಾಲೂಕಿನಲ್ಲಿ ಈ ಬಾರಿ ಒಟ್ಟು 11 ತಾ.ಪಂ. ಸ್ಥಾನ ಹಾಗೂ 4 ಜಿ.ಪಂ. ಸ್ಥಾನಗಳು ನಿಗದಿಯಾಗಿವೆ. ಕಳೆದ ಚುನಾವಣೆಯಲ್ಲಿ ಒಟ್ಟು 13 ತಾ.ಪಂ. ಹಾಗೂ 4 ಜಿ.ಪಂ. ಸದಸ್ಯ ಸ್ಥಾನಗಳಿದ್ದವು. ಸುಬ್ರಹ್ಮಣ್ಯ ಹಾಗೂ ಎಡಮಂಗಲ ಸ್ಥಾನಗಳು ಕಡಬ ತಾಲೂಕು ವ್ಯಾಪ್ತಿಗೆ ಸೇರ್ಪಡೆಗೊಂಡಿವೆ.