ಕೊಟ್ಟಿಗೆಹಾರ : ಶಿವರಾತ್ರಿ ಪಾದಯಾತ್ರೆಯ ಕಸವನ್ನು ಮೂಡಿಗೆರೆಯಿಂದ ಚಾರ್ಮಾಡಿ ಘಾಟ್ ಗಡಿ ಭಾಗದವರೆಗೂ ಅರಣ್ಯ ಇಲಾಖೆ, ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ಗ್ರಾಮ ಪಂಚಾಯಿತಿ, ಆರೋಗ್ಯ ಇಲಾಖೆ, ಆಶಾಕಾರ್ಯಕರ್ತರು, ತೋಟಗಾರಿಕಾ ಇಲಾಖೆ, ವಿವಿಧ ಶಾಲಾ ಎನ್‌ಎಸ್‌ಎಸ್ ತಂಡ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಸ್ವಚ್ಚತಾ ಕಾರ್ಯಕ್ರಮ ನಡೆಸಲಾಯಿತು. ಲೋಡು ಗಟ್ಟಲೆ ಪ್ಲಾಸ್ಟಿಕ್ ಕಸ ಮತ್ತು ತ್ಯಾಜ್ಯವನ್ನು ವಿಲೇವಾರಿ ಮಾಡಲಾಯಿತು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಪತ್ರಿಕೆಯೊಂದಿಗೆ ಮಾತನಾಡಿ ‘ಕಳೆದ ಶಿವರಾತ್ರಿಗೆ ರಾಜ್ಯದ ವಿವಿಧ ಕಡೆಯ ಪಾದಯಾತ್ರೆಗಳು ಸಂಚರಿಸಿದ್ದರಿಂದ ಮೂಡಿಗೆರೆಯಿಂದ ಚಾರ್ಮಾಡಿ ಘಾಟ್ ವರೆಗೂ ಪ್ಲಾಸ್ಟಿಕ್ ಕಸ, ಮತ್ತಿತರ ತ್ಯಾಜ್ಯ ಹೆಚ್ಚಾಗಿ ಸಂಗ್ರಹಣೆಯಾಗಿದ್ದು ಅದರ ಸ್ವಚ್ಚತಾ ಕಾರ್ಯಕ್ರಮವನ್ನು ವಿವಿಧ ಇಲಾಖೆಗಳ ಜೊತೆ ಸೇರಿ ಮಾಡುತ್ತಿದ್ದೇವೆ.
ಒಟ್ಟು 800ಕ್ಕೂ ಅಧಿಕ ಜನರು ತಂಡೋಪ ತಂಡವಾಗಿ ಸ್ವಚ್ಚತಾ ಅಭಿಯಾನದಲ್ಲಿ ಭಾಗವಹಿಸಿದ್ದಾರೆ. ಪಾದಯಾತ್ರೆಗಳಿಗೆ ಮೂಲ ಸೌಲಭ್ಯಗಳ ಕೊರತೆಯಿಂದ ಸಮಸ್ಯೆಯಾಗಿತ್ತು. ಲಕ್ಷಾಂತರ ಪಾದಯಾತ್ರಿಗಳ ಯಾತ್ರೆಯಿಂದ ಕಸ ವಿಲೇವಾರಿ ಮಾಡುವುದು ಸವಾಲಾಗಿದೆ. ಹಾಗಾಗಿ ಮುಂದಿನ ವರ್ಷದಲ್ಲಿ ಪಾದಯಾತ್ರೆಗೆ ತಿಂಗಳ ಮುಂಚಿತವಾಗಿ ಎಲ್ಲ ಇಲಾಖೆಗಳನ್ನು ಒಗ್ಗೂಡಿಸಿ ಸ್ವಚ್ಚತೆಯ ದೃಷ್ಟಿಯಿಂದ ಕಸ ಬಿಸಾಕದಂತೆ ಉತ್ತಮ ವ್ಯವಸ್ಥೆ ಮಾಡಲಾಗುವುದು. ಪಾದಯಾತ್ರಿಗಳಿಗೆ ತಾತ್ಕಾಲಿಕ ಶೌಚಾಲಯದ ವ್ಯವಸ್ಥೆ ಮಾಡಿ ಪರಿಸರ ನೈರ್ಮಲ್ಯತೆ ಕಾಪಾಡಲು ಶ್ರಮಿಸಲಾಗುವುದು. 40 ಕಿಮೀ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 5 ಕಿಮಿ ನಂತೆ ಸ್ವಚ್ಚತೆಗೆ ನಿಗಾ ವಹಿಸಲು ತಂಡ ರಚಿಸಲಾಗುವುದು ಎಂದರು.
ಇದನ್ನೂ ಓದಿ : ಅರಣ್ಯ ಅಧಿಕಾರಿಗಳಿಂದ ಕೃಷಿ ಭೂಮಿ ತೆರವು ಕಾರ್ಯಾಚರಣೆ
ಕೊಟ್ಟಿಗೆಹಾರ ಪ್ರವಾಸಿ ತಾಣವಾಗಿರುವುದರಿಂದ ವಾಣಿಜ್ಯ ಅಂಗಡಿಗಳ ಮುಂದೆ ಕಸ ಬೀಳದಂತೆ ಆಯಾ ಅಂಗಡಿ ಹೋಟೇಲುಗಳಿಗೆ ಜವಾಬ್ದಾರಿ ವಹಿಸಲಾಗುವುದು. ನಿಯಮ ಉಲ್ಲಂಘನೆ ಮಾಡಿದರೆ ಅಂತಹವರಿಗೆ 10 ಸಾವಿರದವರೆಗೂ ದಂಡ ವಿಧಿಸಲು ಆಯಾ ಗ್ರಾಮ ಪಂಚಾಯಿತಿಗೆ ಸೂಚನಾ ಪತ್ರ ಕಳುಹಿಸಲಾಗುವುದು. ಪರಿಸರ ನೈರ್ಮಲ್ಯ ಕಾಪಾಡುವುದೇ ಎಲ್ಲರ ಜವಾಬ್ದಾರಿಯಾಗಿದ್ದು ಮುಂದೆ ಅನೈರ್ಮಲ್ಯ ಕೆಲಸವಾಗದಂತೆ ನಿಗಾ ವಹಿಸಲಾಗುತ್ತದೆ. ಪ್ರವಾಸಿ ತಾಣಗಳಾದ ದೇವರಮನೆ, ಚಾರ್ಮಾಡಿ ಘಾಟ್, ಮಲಯಮಾರುತ, ಎತ್ತಿನ ಭುಜ, ಬಲ್ಲಾಳರಾಯನ ದುರ್ಗ ಮುಂತಾದ ಪ್ರವಾಸಿ ತಾಣಗಳಲ್ಲಿ ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿಗಳ ನೇತೃತ್ವದಲ್ಲಿ ತಿಂಗಳಿಗೊಮ್ಮೆ ಸ್ವಚ್ಚತಾ ಕಾರ್ಯ ನೆರವೇರಿಸಲಾಗುವುದು ಎಂದರು.
ಸ್ವಚ್ಚತಾ ಕಾರ್ಯದಲ್ಲಿ ಮೂಡಿಗೆರೆ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಅರಣ್ಯ ಅಧಿಕಾರಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಶಾಲಾ ಎನ್‌ಎಸ್‌ಎಸ್ ಶಿಬಿರದ ವಿದ್ಯಾರ್ಥಿಗಳ ತಂಡ, ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಭಾಗವಹಿಸಿದ್ದರು.