ಬೆಳಗಾವಿ: ನಿವೇಶನ ನೀಡುವುದಾಗಿ ಹೇಳಿ ವಂಚಿಸಿದ ಪ್ರಕರಣದ ಆರೋಪ ಎದುರಿಸುತ್ತಿರುವ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ಐಹೊಳೆ ನಾಳೆ ನಡೆಯುವ ಸಾಮಾನ್ಯ ಸಭೆಯಲ್ಲಿ ಭಾಗವಹಿಸುವರೇ..?
ಬಲ್ಲ ಮೂಲಗಳ ಪ್ರಕಾರ ಪ್ರಕಾರ ಜಿಲ್ಲಾ ನ್ಯಾಯಾಲಯದಲ್ಲಿ ತಮ್ಮ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತವಾದ ನಂತರ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹೈಕೋರ್ಟ್ ಮೆಟ್ಟಿಲು ಹತ್ತಿದ್ದಾರೆ. ಇದರಿಂದ ಅವರು ನಾಳಿನ ಸಭೆಗೆ ಬರುವುದು ಅನುಮಾನ ಎನ್ನಲಾಗುತ್ತಿದೆ. ಇದು ನಿಜವಾದರೆ ಜಿಪಂ ಉಪಾಧ್ಯಕ್ಷ ಅರುಣ ಕಟಾಂಬಳೆ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಲಿದೆ.
ಮಹಾಲಕ್ಷ್ಮಿ ಎಸ್ಟೇಟ್ ಹೆಸರಿನಲ್ಲಿ ನಿವೇಶನ ಕೊಡುವುದಾಗಿ ಹೇಳಿ ವಂಚನೆ ಮಾಡಿದ ಅರೋಪದ ಮೇಲೆ ಜಿಪಂ ಅಧ್ಯಕ್ಷೆ ಆಶಾ ಐಹೊಳೆ ಅವರ ಪತಿ ಪ್ರಶಾಂತ ಅವರನ್ನು ಅಥಣಿ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದರು. ನಂತರ ಇದೇ ಪ್ರಕರಣದಲ್ಲಿ ಆಶಾ ಐಹೊಳೆ ಅವರ ವಿರುದ್ಧವೂ ಆರೋಪ ಕೇಳಿಬಂದು ಪ್ರಕರಣ ದಾಖಲಾಗಿತ್ತು. ಈ ಬಂಧನದಿಂದ ಪಾರಾಗಲು ಅಧ್ಯಕ್ಷರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿ ತಿರಸ್ಕೃತವಾಗಿದ್ದರಿಂದ ಬಂಧನದ ಭೀತಿ ಎದುರಿಸುತ್ತಿರುವ ಆಶಾ ಐಹೊಳೆ ಯಾರ ಸಂಪರ್ಕಕ್ಕೆ ಸಿಗುತ್ತಿಲ್ಲ ಇದರಿಂದ ಅವರು ಸಾಮಾನ್ಯ ಸಭೆಗೆ ಬರುವುದು ಅನುಮಾನ ಎಂಬ ಮಾತುಗಳು ದಟ್ಟವಾಗಿ ಕೇಳಿ ಬರುತ್ತಿವೆ.
ಬದಲಾವಣೆಗೆ ಒತ್ತಡ: ಜಿಲ್ಲಾ ಪಂಚಾಯತ್ ಅಧ್ಯಕ್ಷರ ಮೇಲೆ ವಂಚನೆ ಪ್ರಕರಣದ ಆರೋಪ ಇರುವುದರಿಂದ ಈಗ ಅವರನ್ನು ಬದಲಾವಣೆ ಮಾಡಬೇಕು. ಅಧ್ಯಕ್ಷ ಸ್ಥಾನವನ್ನು ಬೇರೆಯವರಿಗೆ ನೀಡಬೇಕು ಎಂಬ ಒತ್ತಾಯ ಆರಂಭವಾಗಿದ್ದು ಇದು ನಾಳಿನ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪವಾಗುವ ಸಾಧ್ಯತೆಗಳಿವೆ.
Advertisement
ಇಂತಹ ಪ್ರಶ್ನೆ ಈಗ ಜಿಲ್ಲಾ ಪಂಚಾಯತ್ ಆವರಣದಲ್ಲಿ ಹರಿದಾಡುತ್ತಿದೆ. ಸಾಮಾನ್ಯ ಸಭೆಗೆ ಬರುವ ಸದಸ್ಯರಿಗೂ ಸಹ ಇದು ಕುತೂಹಲ ಮೂಡಿಸಿದೆ. ನಿವೇಶನ ವಂಚನೆ ಪ್ರಕರಣದ ಆರೋಪಕ್ಕೆ ಗುರಿಯಾಗಿ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತವಾದ ನಂತರ ಆಶಾ ಐಹೊಳೆ ಯಾರ ಸಂಪರ್ಕಕ್ಕೆ ಸಿಗದೇ ಇರುವುದು ಈ ಎಲ್ಲ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕಳೆದ ಹಲವು ದಿನಗಳಿಂದ ಅವರ ಮೊಬೈಲ್ ಸಹ ನಾಟ್ ರೀಚೆಬಲ್ ಆಗಿದೆ.
Related Articles
Advertisement
ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನ ಅನುಸೂಚಿತ ಜಾತಿ ಮಹಿಳೆಗೆ ಮೀಸಲಾಗಿದೆ. ಜಿಲ್ಲೆಯಲ್ಲಿ ಆಶಾ ಐಹೊಳೆ ಹಾಗೂ ರಾಯಬಾಗ ತಾಲೂಕಿನ ಜಯಶ್ರೀ ಮೋಹಿತೆ ಮಾತ್ರ ಈ ವರ್ಗಕ್ಕೆ ಸೇರಿದವರಾಗಿದ್ದಾರೆ. ಒಂದು ವೇಳೆ ಆಶಾ ಐಹೊಳೆ ಅವರನ್ನು ಬದಲಾವಣೆ ಮಾಡುವದು ಖಚಿತ ಎಂದಾದರೆ ಆಗ ಜಯಶ್ರಿ ಮೊಹಿತೆ ಅವರಿಗೆ ಈ ಅವಕಾಶ ಒದಗಿಬರಲಿದೆ. ಈ ನಿಟ್ಟಿನಲ್ಲಿ ಆಡಳಿತ ಪಕ್ಷದ ಸದಸ್ಯರು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಜೊತೆ ಒಂದು ಹಂತದ ಮಾತುಕತೆ ಸಹ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೆಳಗಾವಿ ಜಿಲ್ಲಾ ಪಂಚಾಯತ್ ಒಟ್ಟು 90 ಸದಸ್ಯರ ಬಲ ಹೊಂದಿದ್ದು ಕಾಂಗ್ರೆಸ್ 43, ಬಿಜೆಪಿ 39, ಜೆಡಿಎಸ್ 2 ಹಾಗೂ ಆರು ಜನ ಪಕ್ಷೇತರ ಸದಸ್ಯರಿದ್ದಾರೆ. ಈಗ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಆಡಳಿತ ನಡೆದಿದೆ. ಎಲ್ಲ ಸದಸ್ಯರು ಅಧ್ಯಕ್ಷರ ಬದಲಾವಣೆಗೆ ಒತ್ತಾಯ ಮಾಡಿದರೆ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಪದಚ್ಯುತಿ ನಿಶ್ಚಿತವಾಗಲಿದೆ. ಹೀಗಾಗಿ ಸದಸ್ಯರ ಒತ್ತಾಯದ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರ ನಿರ್ಧಾರ ಮಹತ್ವ ಪಡೆದುಕೊಂಡಿದೆ.
ಅಧ್ಯಕ್ಷರು ಸಾರ್ವಜನಿಕರ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂಬುದು ಬೇಸರದ ಸಂಗತಿ. ಬೆಳಗಾವಿ ಜಿಲ್ಲಾ ಪಂಚಾಯತ್ ಇತಿಹಾಸದಲ್ಲಿ ಈ ರೀತಿ ಹಿಂದೆಂದೂ ಆಗಿಲ್ಲ. ಅಧ್ಯಕ್ಷರ ಮೇಲೆ ಇರುವ ಪ್ರಕರಣದ ಬಗ್ಗೆ ಸಾಮಾನ್ಯ ಸಭೆಯಲ್ಲಿ ಪ್ರಶ್ನೆ ಮಾಡುತ್ತೇವೆ. ಅವರ ಬದಲಾವಣೆಗೆ ಸಹ ಒತ್ತಾಯ ಮಾಡಲಾಗುವುದು.
• ರಮೇಶ ದೇಶಪಾಂಡೆ, ಜಿಪಂ ಸದಸ್ಯ
ಜಿಪಂ ಅಧ್ಯಕ್ಷರು ಯಾರ ಸಂಪರ್ಕಕ್ಕೆ ಸಿಗುತ್ತಿಲ್ಲ. ಕಳೆದ ಹಲವಾರು ದಿನಗಳಿಂದ ಕಚೇರಿಗೂ ಬಂದಿಲ್ಲ ಎಂಬುದು ನಮ್ಮ ಗಮನಕ್ಕೆ ಬಂದಿದೆ. ನಿವೇಶನ ವಂಚನೆ ಪ್ರಕರಣದಲ್ಲಿ ಅವರು ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸಬೇಕು. ಇದರ ಬಗ್ಗೆ ಪರಿಶೀಲಿಸಿ ನಾವು ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಅಧ್ಯಕ್ಷರ ಬದಲಾವಣೆ ಸಂಬಂಧ ಇನ್ನೂ ಆಲೋಚನೆ ಮಾಡಿಲ್ಲ. ಈ ಸಂಬಂಧ ಸದಸ್ಯರ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. • ಸತೀಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ
• ಕೇಶವ ಆದಿ