Advertisement

Zika Virus Test: “ಝೀಕಾ’ ಸೋಂಕನ್ನೂ ಹರಡುತ್ತಿದೆ ಈಡಿಸ್‌ ಸೊಳ್ಳೆ!

11:50 PM Jul 12, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಮತ್ತು ಚಿಕೂನ್‌ಗುನ್ಯ ಹರಡುವ ಸೊಳ್ಳೆಗಳೇ “ಝೀಕಾ’ ವೈರಾಣುವನ್ನೂ ಹರಡುವ ಭೀತಿ ಸೃಷ್ಟಿಯಾಗಿದ್ದು, ಒಂದು ವೇಳೆ ಡೆಂಗ್ಯೂ, ಚಿಕೂನ್‌ಗುನ್ಯ ಪರೀಕ್ಷೆಯ ವರದಿ ನೆಗೆಟಿವ್‌ ಬಂದರೂ ರೋಗಲಕ್ಷಣ ಇರುವ ಶೇ.10ರಷ್ಟು ಮಂದಿಯನ್ನು ಝೀಕಾ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

Advertisement

ಇಷ್ಟು ದಿನ “ಈಡಿಸ್‌’ ಸೊಳ್ಳೆಯು ಕೇವಲ ಡೆಂಗ್ಯೂ ಮತ್ತು ಚಿಕೂನ್‌ಗುನ್ಯವನ್ನಷ್ಟೇ ಹರಡುತ್ತದೆ ಎಂದುಕೊಳ್ಳಲಾಗಿತ್ತು. ಆದರೆ, ಝೀಕಾ ಸೋಂಕಿತರಿಗೆ ಕಚ್ಚಿದ ಈಡಿಸ್‌ ಸೊಳ್ಳೆ, ಅವರಲ್ಲಿನ ಝೀಕಾ ವೈರಾಣುವನ್ನು ಹೊತ್ತೂಯ್ದು ಮತ್ತೊಬ್ಬರಿಗೆ ಹರಡುವ ಆತಂಕ ಶುರುವಾಗಿದೆ.

ಪ್ರಸ್ತುತ ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆಯಲ್ಲಿ ಡೆಂಗ್ಯೂ ಹಾಗೂ ಚಿಕೂನ್‌ಗುನ್ಯ ಸೋಂಕಿನ ಲಕ್ಷಣಗಳಾದ ಹಠಾತ್‌ ತೀವ್ರ ಜ್ವರ, ಕಣ್ಣುಗಳ ಹಿಂದೆ ನೋವು, ವಾಕರಿಕೆ, ತೀವ್ರ ತಲೆನೋವು, ಕೀಲು ಮತ್ತು ಸ್ನಾಯು ನೋವು ಮತ್ತು ದದ್ದುಗಳಂತಹ ರೋಗ ಲಕ್ಷಣಗಳು ವರದಿಯಾಗುತ್ತಿವೆ. ಆದರೆ ಡೆಂಗ್ಯೂ -ಚಿಕೂನ್‌ಗುನ್ಯ ಪರೀಕ್ಷೆಗೆ ಒಳಪಡಿಸಿದಾಗ ನೆಗೆಟಿವ್‌ ವರದಿ ಕೈ ಸೇರುತ್ತಿದೆ. ರಾಜ್ಯದಲ್ಲಿ ಇದುವರೆಗೆ ಡೆಂಗ್ಯೂಗೆ ಸಂಬಂಧಿಸಿದಂತೆ 61,037 ಶಂಕಿತ ವ್ಯಕ್ತಿಗಳ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಅದರಲ್ಲಿ 8,221ಮಂದಿಯಲ್ಲಿ ಪಾಸಿಟಿವ್‌ ವರದಿಯಾಗಿದೆ. ರೋಗಿಯಲ್ಲಿ ಎಲ್ಲ ಲಕ್ಷಣಗಳಿದ್ದರೂ, ವರದಿ ಮಾತ್ರ ನೆಗೆಟಿವ್‌ ವರದಿಯಾಗುತ್ತಿದೆ. ಇದು ವೈದ್ಯರ ಹಾಗೂ ಆರೋಗ್ಯ ಇಲಾಖೆಯ ಪಾಲಿಗೆ ತಲೆ ನೋವಾಗಿ ಪರಿಣಮಿಸಿದೆ.

ಶೇ.10ರಷ್ಟು ಮಾದರಿ ಪರೀಕ್ಷೆ
ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿಯ (ಐಸಿಎಂಆರ್‌) ವಿಜ್ಞಾನಿಗಳು ಡೆಂಗ್ಯೂ ಮತ್ತು ಚಿಕೂನ್‌ಗುನ್ಯ ಜ್ವರದ ಲಕ್ಷಣಗಳಿದ್ದು, ವರದಿ ನೆಗೆಟಿವ್‌ ಹೊಂದಿರುವ ರೋಗಿಯ ಮಾದರಿಯನ್ನು ಸಹ ಝೀಕಾ ಪರೀಕ್ಷೆಗೆ ಒಳಪಡಿಸಲು ರಾಜ್ಯಗಳಿಗೆ ಸಲಹೆ ನೀಡಿದೆ. ಪ್ರಸ್ತುತ ಆರೋಗ್ಯ ಇಲಾಖೆ ಚಿಕೂನ್‌ಗುನ್ಯ ಹಾಗೂ ಡೆಂಗ್ಯೂ ನೆಗೆಟಿವ್‌ ಬಂದಿರುವ ಒಟ್ಟು ಪ್ರಕರಣಗಳ ಶೇ.10ರಷ್ಟು ಮಾದರಿಗಳನ್ನು ಝೀಕಾ ಪರೀಕ್ಷೆ ಒಳಪಡಿಸಲಾಗುತ್ತಿದೆ.

ಸಾಮಾನ್ಯ ಲಕ್ಷಣಗಳು !
ಝೀಕಾ ವೈರಾಣು ಮನುಷ್ಯನ ದೇಹ ಹೊಕ್ಕಿದ 3 ರಿಂದ 14 ದಿನಗಳ ನಂತರ ರೋಗ ಲಕ್ಷಣಗಳು ಸಣ್ಣದಾಗಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಸೋಂಕಿನ ಲಕ್ಷಣಗಳು ಕಂಡು ಬಂದ 5 ದಿನಗಳ ಬಳಿಕವೇ ಝೀಕಾ ಪರೀಕ್ಷೆಗೆ ರಕ್ತ, ಲಾಲಾರಸ ಹಾಗೂ ಮೂತ್ರದ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಪ್ರಸ್ತುತ ಬೆಂಗಳೂರಿನಲ್ಲಿ ರಾಷ್ಟ್ರೀಯ ವೈರಾಲಜಿ ಸಂಸ್ಥೆ ಹಾಗೂ ವೈರಾಣು ಸಂಶೋಧನೆ ಮತ್ತು ರೋಗನಿರ್ಣಯ ಪ್ರಯೋಗಾಲಯದಲ್ಲಿ ಝೀಕಾ ವೈರಸ್‌ ಶಂಕಿತ ಮಾದರಿಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ.

Advertisement

ಮೈಕ್ರೊಸೆಫಾಲಿ ಸಮಸ್ಯೆ
ಮತ್ತೂಂದು ಅಪಾಯಕಾರಿ ಅಂಶವೆಂದರೆ ಬಹುತೇಕ ಝೀಕಾ ಸೋಂಕಿತರಲ್ಲಿ ರೋಗ ಲಕ್ಷಣಗಳು ಅಷ್ಟಾಗಿ ಕಂಡುಬರದ ಪ್ರಕರಣಗಳೂ ಇವೆ. ಕೆಲವರಿಗೆ ಇದ್ದರೂ ಸೌಮ್ಯ ಹಾಗೂ ಸಾಧಾರಣ ಸ್ವರೂಪದ್ದಾಗಿರುತ್ತವೆ. ಆದರೆ, ಗರ್ಭಾವಸ್ಥೆಯಲ್ಲಿ ಝೀಕಾ ಸೋಂಕು ಕಾಣಿಸಿಕೊಂಡರೆ, ಜನಸಿದ ಶಿಶುವಿನಲ್ಲಿ ತಲೆ ಗಾತ್ರದಲ್ಲಿ ಕಡಿಮೆ (ಮೈಕ್ರೊಸೆಫಾಲಿ) ಬೆಳವಣಿಗೆ ದೋಷ ಕಂಡು ಬರಲಿದೆ. ಝೀಕಾ ರೋಗಕ್ಕೂ ನಿರ್ದಿಷ್ಟ ಚಿಕಿತ್ಸೆ ಹಾಗೂ ಲಸಿಕೆಯಿಲ್ಲ. ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ.

ಝೀಕಾ ಲಕ್ಷಣಗಳು?
-ಜ್ವರ
– ತಲೆನೋವು
-ಕಣ್ಣು ಕೆಂಪಾಗುವಿಕೆ
-ಗಂಧೆಗಳು (ದದ್ದು)
-ಕೀಲು, ಸ್ನಾಯುಗಳಲ್ಲಿ ನೋವು

ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿಯ ಸಲಹೆಯಂತೆ ರಾಜ್ಯದಲ್ಲಿ ಚಿಕೂನ್‌ ಗುನ್ಯ ಹಾಗೂ ಡೆಂಗ್ಯೂ ಪರೀಕ್ಷೆಯಲ್ಲಿ ನೆಗೆಟಿವ್‌ ಬಂದಿರುವವರ ಮಾದರಿಗಳನ್ನು ಝೀಕಾ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
-ಡಾ| ರಂದೀಪ,
ಆಯುಕ್ತರು, ಆರೋಗ್ಯ ಇಲಾಖೆ.

– ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next