ಮಲ್ಪೆ: ಎತ್ತ ನೋಡಿದರೂ ಕೆಸರು, ಕೊಳೆತ ತರಕಾರಿಗಳ ತ್ಯಾಜ್ಯಗಳ ದುರ್ವಾಸನೆ, ಎಲ್ಲೆಂದರಲ್ಲಿ ಕಸದ ರಾಶಿ, ಅಂಗಳದಲ್ಲಿ ಕಾಲಿಟ್ಟರೆ ಪಿಚಕ್ ಎನ್ನುವಂತೆ ಕಾಲಿಗೆ ಮೆತ್ತಿಕೊಳ್ಳುವ ರಾಡಿ ಮಣ್ಣು, ಸರಿಯಾದ ನಿರ್ವಹಣೆ ಇಲ್ಲದೆ ಚರಂಡಿಯಲ್ಲಿ ಬೇಕಾ ಬಿಟ್ಟು ಹರಿಯುತ್ತಿರುವ ಕೊಳಚೆ ನೀರು. ಹೀಗೆ ಕಾಲಿಡಲೂ ಒಂದು ಕ್ಷಣ ಯೋಚನೆ ಮಾಡುವಂತಹ ಜಾಗಕ್ಕೆ ರೈತರು ತಾವು ಬೆಳೆದ ಫಸಲುಗಳನ್ನು ಮಾರಾಟ ಮಾಡಲು ತರುತ್ತಾರೆ. ಸಾರ್ವಜನಿಕರು ಸೊಪ್ಪು ತರಕಾರಿಗಳ ಖರೀದಿಗೆ ಇಲ್ಲಿಗೆ ತರುತ್ತಾರೆ. ಇದು ಜನಜನಿತ ಆದಿಉಡುಪಿ ಸಂತೆ ಮಾರುಕಟ್ಟೆಯ ಮಳೆಗಾಲದ ಚಿತ್ರಣ.
ಇದು ಒಂದು ದಿನದ ಕತೆಯಲ್ಲ. ಮಳೆ ಸುರಿದಾಗಲೆಲ್ಲ ವ್ಯಾಪಾರಿಗಳು ವಾರದ ಮಾರುಕಟ್ಟೆಯಲ್ಲಿ ತಿಪ್ಪೆಯಾಗುವಂತ ರಸ್ತೆಯಲ್ಲಿ ಕುಳಿತು ವ್ಯಾಪಾರ ಮಾಡುತ್ತಾರೆ. ಬೇರೆ ದಾರಿ ಕಾಣದ ಸಾರ್ವಜನಿಕರು ದುರ್ನಾತದ ಮಧ್ಯೆಯೇ ತರಕಾರಿ ಕೊಳ್ಳಬೇಕಾದ ಸ್ಥಿತಿ ಉಂಟಾಗಿದೆ. ನಿಜಕ್ಕೂ ಇದು ತರಕಾರಿ ಮಾರುಕಟ್ಟೆಯೇ ಎಂಬ ಆನುಮಾನ ಮೊದಲ ಬಾರಿಗೆ ಕಾಲಿಡುವವರಿಗೆ ಕಾಡುತ್ತದೆ. ಪ್ರತಿ ವಾರ ಇಲ್ಲಿ ಮಾರಾಟಕ್ಕೆ ತೆರಿಗೆ ಕಟ್ಟುತ್ತೇವೆ ಆದರೆ ಸಂಬಂಧಪಟ್ಟ ಆಡಳಿತ ಸೂಕ್ತ ಸೌಲಭ್ಯ ಮಾತ್ರ ನೀಡುತ್ತಿಲ್ಲ ಎಂದು ವ್ಯಾಪಾರಿಗಳು ಅರೋಪಿಸಿದ್ದಾರೆ.
ಸಂತೆಗೆ ಬಂದರೆ ಡೆಂಗ್ಯೂ ಉಚಿತ
ಮಳೆಗಾಲದ ಸಮಯದಲ್ಲಿ ತ್ಯಾಜ್ಯಗಳ ಸಹಿತ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಈ ತ್ಯಾಜ್ಯಗಳು ವಿಲೇವಾರಿ ಆಗದೇ ನೀರಿನಲ್ಲಿ ಕೊಳೆತು ಮಣ್ಣಿನಲ್ಲಿ ಸೇರಿ ದುರ್ವಾಸನೆ ಬೀರುವುದಲ್ಲದೆ, ನೊಣ, ಸೊಳ್ಳೆಗಳ ಆವಾಸ ಸ್ಥಾನವಾಗಿದೆ. ಮಳೆಗಾಲದ ಸಮಯದಲ್ಲಿ ಸೊಳ್ಳೆ ಕಡಿತದೊಂದಿಗೆ ವ್ಯಾಪಾರಿಗಳು, ಗ್ರಾಹಕರು ಕೆಸರು ಗುಂಡಿಯಲ್ಲಿಯೇ ವ್ಯಾಪಾರ ವ್ಯವಹಾರ ಮಾಡುವಂತಾಗಿದೆ. ಇಲ್ಲಿ ಕಾಲಿಟ್ಟವರಿಗೆ ಯಾವುದಾದರೊಂದು ರೋಗ ಖಚಿತ ಎಂಬಂತಾಗಿದೆ. ಇತ್ತೀಚೆಗೆ ಇಲ್ಲಿನ ಸಂತೆ ಮಾರುಕಟ್ಟೆಯಲ್ಲಿ ಖರೀದಿಗೆ ಬಂದವರಿಗೆ ಡೆಂಗ್ಯೂ ಕಾಣಿಸಿಕೊಂಡು ಹಲವರು ಆಸ್ಪತ್ರೆಗೆ ದಾಖಲಾದ ಪ್ರಕರಣಗಳು ನಡೆದಿದೆ. ಇದೊಂದು ಗಂಭೀರವಾದ ವಿಚಾರವಾಗಿದ್ದು, ಸಾರ್ವಜನಿಕರು, ರೈತರು, ವ್ಯಾಪಾರಸ್ಥರ ಬಗ್ಗೆ ಆಡಳಿತ ವರ್ಗಕ್ಕೆ ಕಿಂಚಿತ್ತೂ ಕಾಳಜಿ ಇಲ್ಲ ಎಂಬುದನ್ನು ಸಾಕ್ಷೀಕರಿಸುತ್ತದೆ. ಇತ್ತೀಚೆಗೆ ಎಲ್ಲೆಡೆ ಹರಡುತ್ತಿರುವ ಡೆಂಗ್ಯು ಬಗ್ಗೆ ಜಿಲ್ಲಾಡಳಿತ ಎಷ್ಟರ ಮಟ್ಟಿಗೆ ಕ್ರಮ ಕೈಗೊಳ್ಳುತ್ತಿದೆ ಎಂಬುದನ್ನು ಈ ಮಾರುಕಟ್ಟೆ ಪ್ರದೇಶ ಸಾಬೀತು ಪಡಿಸುತ್ತದೆ ಎನ್ನಲಾಗುತ್ತಿದೆ.
ಆಟಕ್ಕುಂಟು ಲೆಕ್ಕಕ್ಕಿಲ್ಲ
ಸಂತೆಯ ಪಕ್ಕದಲ್ಲೆ ಶೌಚಾಲಯ ವ್ಯವಸ್ಥೆ ಇದ್ದರೂ ಸ್ವತ್ಛತೆ ಜತೆಗೆ ಮೂಲಭೂತ ವ್ಯವಸ್ಥೆ ಇಲ್ಲದೇ ಗಬ್ಬೆದ್ದು ನಾರುತ್ತಿದೆ. ಇಲ್ಲಿ ಹೇಳುವವರು ಕೇಳುವವರು ಯಾರೂ ಇಲ್ಲದೆ ಪಾಳು ಬಿದ್ದಂತಿದೆ. ಹಾಗಾಗಿ ಇಲ್ಲಿಗೆ ಬರುವ ವ್ಯಾಪಾರಿಗಳು ಸೇರಿದಂತೆ ಗ್ರಾಹಕರು ಎಲ್ಲೆಂದರಲ್ಲಿ ಬಹಿರ್ದೆಸೆ ತೀರಿಸುವುದು ಕಂಡು ಬರುತ್ತದೆ.
ಸೂಕ್ತ ವ್ಯವಸ್ಥೆ ಅಗತ್ಯ
ಇಲ್ಲಿನ ಸಂತೆ ಮಾರುಕಟ್ಟೆ ಉಚಿತ ದುರ್ವಾಸನೆ, ಉಚಿತ ಸೊಳ್ಳೆ ಕಡಿತ, ಉಚಿತ ಖಾಯಿಲೆಗಳ ಕೇಂದ್ರವಾಗಿ ಪರಿಣಮಿಸಿದರೂ ಪ್ರತೀ ವಾರ ಬಾಡಿಗೆ ವಸೂಲಿ ಮಾಡುವ ಇಲಾಖೆಗೆ ಇದೆಲ್ಲಾ ತಿಳಿಯದಿರುವುದು ದುರಂತ. ಸಾಂಕ್ರಮಿಕ ರೋಗ ಭೀತಿಯಿಂದಾಗಿ ಇತ್ತೀಚೆಗೆ ಜನರು ಸಾಮಗ್ರಿ ಖರೀದಿಸಲು ಬರಲು ಹೆದರುತ್ತಾರೆ. ಜನರ ಆರೋಗ್ಯ ದೃಷ್ಟಿಯಿಂದಾದರೂ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಬೇಕು.
-ಬಸವರಾಜ್, ಹಣ್ಣಿನ ವ್ಯಾಪಾರಿ