Advertisement

Siruguppa: ನಗರದಲ್ಲಿ ಸ್ವಚ್ಛತೆ ಮಾಯ, ಹೆಚ್ಚಿದ ಅನಾರೋಗ್ಯ ಸಮಸ್ಯೆ, ಡೆಂಗಿ ಪ್ರಕರಣ ಪತ್ತೆ

11:00 AM Aug 24, 2024 | Team Udayavani |

ಸಿರುಗುಪ್ಪ: ನಗರದಲ್ಲಿ ಢೆಂಘಿ, ಚಿಕನ್‌ಗುನ್ಯ ಹಾವಳಿ ಜೊತೆಗೆ ವೈರಲ್ ಫೀವರ್ ವ್ಯಾಪಕವಾಗಿ ಹರಡುತ್ತಿದ್ದು, ಕಳೆದ ಒಂದು ವಾರದಿಂದ ನಗರದಲ್ಲಿರುವ ಸರ್ಕಾರಿ ಆಸ್ಪತ್ರೆ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ಇದರ ಚಿಕಿತ್ಸೆಗೆಂದು ಬರುವ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ನಗರದಲ್ಲಿ ನಗರಸಭೆಯು ಸ್ವಚ್ಛತೆ ಕಾಪಾಡುವಲ್ಲಿ ಮತ್ತು ಚರಂಡಿಗಳನ್ನು ಸ್ವಚ್ಛಗೊಳಿಸಲು ವಿಫಲವಾಗಿರುವುದೇ ಢೆಂಘಿ, ಚಿಕನ್‌ಗುನ್ಯಾ, ವೈರಲ್ ಫೀವರ್, ಜ್ವರ ಹರಡಲು ಕಾರಣವಾಗಿದೆ.

Advertisement

ಮಕ್ಕಳು, ವಯಸ್ಸಾದವರಿಗೆ ಸೊಂಕು ಸುಲಭವಾಗಿ ಹರಡಿ ಆಸ್ಪತ್ರೆಗೆ ಅಲೆಯುವಂತಾಗಿದೆ. ನಗರದ ಸರ್ಕಾರಿ ಆಸ್ಪತ್ರೆ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಿತ್ಯವೂ ಮಕ್ಕಳು ಮತ್ತು ವೃದ್ಧರು ವೈರಲ್ ಫೀವರ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರದಲ್ಲಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ಹೊರ ರೋಗಿಗಳಿಗೆ ಶೇಕಡ ೫೦ಕ್ಕೂ ಹೆಚ್ಚು ಜನ ವೈರಲ್ ಫೀವರ್‌ನಿಂದ ಬಳಲುತ್ತಿದ್ದಾರೆ. ಕಳೆದ ಕೆಲವುದಿನಗಳ ಹಿಂದೆ ಸುರಿದ ಮಳೆಯಿಂದಾಗಿ ನಗರದಲ್ಲಿ ವ್ಯಾಪಕವಾಗಿ ಸೊಂಕು ಜ್ವರ ಮತ್ತು ಢೆಂಘಿ ಜ್ವರ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿರುತ್ತದೆ.

ಸಾಮಾನ್ಯವಾಗಿ ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಈ ಜ್ವರ ಒಬ್ಬರಿಗೆ ಬಂದರೆ ಮನೆ ಮಂದಿಗೆಲ್ಲ ಕಾಡುತ್ತದೆ. ನೆಗಡಿ, ಕೆಮ್ಮು, ಮೈಕೈ ನೋವಿನಿಂದ ಪ್ರಾರಂಭವಾಗಿ 5-6 ದಿನ ಬಾದಿಸುತ್ತದೆ. ತಣ್ಣನೆ ವಾತಾವರಣದಿಂದಾಗಿ ಮನುಷ್ಯರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಗ್ಗುತ್ತದೆ. ಇದರಿಂದ ಸುಲಭವಾಗಿ ಸೊಂಕು ಹರಡುತ್ತದೆ. ಸೊಂಕು ಕಾರಕ ರೋಗಾಣುಗಳು ಗಾಳಿ ಇತ್ಯಾದಿ ಮಾರ್ಗಗಳಿಗಿಂತಲು ಸೊಳ್ಳೆ ಕಡಿತದ ಮೂಲಕವೇ ಹರಡುವ ಪ್ರಕರಣಗಳು ಹೆಚ್ಚಾಗಿವೆ.

ನಗರದಲ್ಲಿ ೮ಜನರಿಗೆ ಢೆಂಘಿಜ್ವರ ಕಾಣಿಸಿಕೊಂಡಿದ್ದು, ನಗರದ ಸರ್ಕಾರಿ 100 ಹಾಸಿಗೆಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲರ ಆರೋಗ್ಯದಲ್ಲಿಯೂ ಚೇತರಿಕೆ ಕಂಡುಬಂದಿದೆ ಯಾವುದೇ ಪ್ರಾಣಾಪಾಯ ಸಂಭವಿಸುವ ಸಾಧ್ಯತೆ ಇರುವುದಿಲ್ಲವೆಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ನಗರದ 10ನೇ ವಾರ್ಡ್ ನಲ್ಲಿ ಆಯೇಷ ಸಿದ್ದಿಕಾ (8) ಎನ್ನುವ ಬಾಲಕಿಗೆ ಢೆಂಘಿ ಜ್ವರ ಕಾಣಿಸಿಕೊಂಡಿದ್ದು, ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಿಸದೆ ಇತ್ತೀಚೆಗೆ ಮರಣಹೊಂದಿದ್ದಳು.

ನಗರದಲ್ಲಿ ಢೆಂಘಿ ಮತ್ತು ವೈರಲ್ ಫೀವರ್ ಜ್ವರ ಹರಡಲು ಸ್ವಚ್ಛತೆ ಇಲ್ಲದೆ ಇರುವುದು ಮುಖ್ಯ ಕಾರಣವಾಗಿದೆ ನಮ್ಮ ಮನೆಯಲ್ಲಿರುವ ಇಬ್ಬರು ಮಕ್ಕಳಿಗೆ ಜ್ವರ ಬಂದಿದ್ದು, ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಕಸ ವಿಲೇವಾರಿ ಮಾಡಲು ಹಾಗೂ ಚರಂಡಿಗಳನ್ನು ಸ್ವಚ್ಛಗೊಳಿಸಲು ಕ್ರಮ ತೆಗೆದುಕೊಳ್ಳಬೇಕೆಂದು ನಗರಸಭೆ ಅಧಿಕಾರಿಗಳಿಗೆ ಖುದ್ದಾಗಿ ಕಂಡು ಹೇಳಿ ಬಂದರೂ 8 ದಿನಕ್ಕೊಮ್ಮೆ ನಮ್ಮ ವಾರ್ಡ್ ನಲ್ಲಿ ಕಸ ವಿಲೇವಾರಿ ಮಾಡುತ್ತಿರುವುದರಿಂದ ರೋಗಗಳ ಹರಡುತ್ತಿವೆ ಎಂದು 10 ವಾರ್ಡ್ ನ ನಿವಾಸಿ ಕಟುಗರ ಮಾಲಸಾಬ್ ತಿಳಿಸಿದ್ದಾರೆ.

ನಗರದಲ್ಲಿರುವ 31 ವಾರ್ಡ್ ಗಳಲ್ಲಿ ಕಸ ವಿಲೇವಾರಿಯು ಸಮಪರ್ಕವಾಗಿ ನಡೆಯದೇ 8 ದಿನಕ್ಕೊಮ್ಮೆ ವಾರ್ಡ್ಗಳಲ್ಲಿ ಕಸ ವಿಲೇವಾರಿ ಮಾಡಲಾಗುತ್ತಿದೆ, ಕಸ ವಿಲೇವಾರಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಅಧಿಕಾರಿಗಳು ವಿಫಲರಾಗಿದ್ದು, ರೋಗ ಹರಡಲು ಕಾರಣವಾಗಿದೆ, ಕನಿಷ್ಠ ಫಾಗಿಂಗ್ ಮಾಡಿ ಎಂದು ತಿಳಿಸಿದರು ಮಾಡುತ್ತಿಲ್ಲವೆಂದು ನಗರಸಭೆ ಸದಸ್ಯ ಮಹೇಶ್‌ಗೌಡ ಆರೋಪಿಸಿದ್ದಾರೆ.

ನಗರದಲ್ಲಿ ವೈರಲ್ ಫೀವರ್ ಪ್ರಕರಣಗಳು ಹೆಚ್ಚಾಗಿದ್ದು, ಢೆಂಘಿ ಜ್ವರ ಕಾಣಿಸಿಕೊಂಡಿದ್ದು, ಢೆಂಘಿ ಜ್ವರಕ್ಕೆ ಚಿಕಿತ್ಸೆ ನೀಡಲು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ 11 ಬೆಡ್‌ಗಳ ವಾರ್ಡ್ ನ ಸಿದ್ದಪಡಿಸಲಾಗಿದೆ, 8 ಜನ ಢೆಂಘಿ ಜ್ವರದಿಂದ ಬಳಲುತ್ತಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ, ನಗರದಲ್ಲಿ ಸ್ವಚ್ಛತೆ ಕಾಪಾಡುವಂತೆ ನಗರಸಭೆ ಅಧಿಕಾರಿಳಿಗೆ ತಿಳಿಸಲಾಗಿದೆ ಎಂದು ಟಿ.ಹೆಚ್.ಒ. ಡಾ.ಡಿ.ವೀರೇಂದ್ರಕುಮಾರ್ ತಿಳಿಸಿದ್ದಾರೆ.

ಇರುವ ಸಿಬ್ಬಂದಿಯಿಂದಲೇ ನಗರದಲ್ಲಿ ಕಸ ವಿಲೇವಾರಿ ಮತ್ತು ಚರಂಡಿ ಸ್ವಚ್ಛತೆ ಕಾರ್ಯವನ್ನು ಮಾಡುತ್ತಿದ್ದೇವೆ, ಢೆಂಘಿ ಪ್ರಕರಣ ಕಾಣಿಸಿಕೊಂಡ ಸ್ಥಳಗಳಲ್ಲಿ ಆರೋಗ್ಯ ಇಲಾಖೆ ಸೂಚನೆಯ ಮೇರೆಗೆ ಧೂಮೀಕರಣವನ್ನು ಮಾಡುತ್ತಿದ್ದೇವೆಂದು ನೈರ್ಮಲ್ಯ ಅಧಿಕಾರಿ ರಂಗಸ್ವಾಮಿ ತಿಳಿಸಿದ್ದಾರೆ.

ಇದನ್ನೂ ಓದಿ: Thekkatte: ಪ್ರಯಾಣಿಕರ ಬಸ್‌ ತಂಗುದಾಣ ಸ್ಥಳಾಂತರಕ್ಕೆ ಮಹತ್ವದ ನಿರ್ಣಯ ಕೈಗೊಂಡ ಗ್ರಾ.ಪಂ.!

Advertisement

Udayavani is now on Telegram. Click here to join our channel and stay updated with the latest news.