ಚಾಮರಾಜನಗರ: ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಕೇರಳ ರಾಜ್ಯದಲ್ಲಿ ನಾಲ್ಕೈದು ದಿನಗಳ ಹಿಂದೆ ಸೊಳ್ಳೆಗಳಿಂದ ಹರಡುವ ಝೀಕಾ ವೈರಸ್ ಪತ್ತೆಯಾಗಿದ್ದು, ಅಂದಾಜು 40 ಜನರಿಗೆ ಹರಡಿದೆ. ಇದು ನೆರೆಯಲ್ಲೇ ಇರುವ ಚಾಮರಾಜನಗರ ಜಿಲ್ಲೆಗೂ ಎಚ್ಚರಿಕೆ ಗಂಟೆಯಾಗಿದೆ.
ಈ ಹಿಂದೆ ಡೆಂಘ್ಯೂ, ಚಿಕೂನ್‌ಗುನ್ಯ ಕಾಯಿಲೆಗಳ ಕಾರಣವಾಗಿದ್ದ, ಈಡೀಸ್ ಈಜಿಪ್ಟಿ ಸೊಳ್ಳೆಗಳೇ ಝೀಕಾ ವೈರಸ್‌ಗೂ ಕಾರಣವಾಗಿವೆ. ಈ ಸೊಳ್ಳೆಗಳು ಹಗಲು ಹಾಗೂ ಮುಸ್ಸಂಜೆ ಹೊತ್ತಿನಲ್ಲಿ ಸಕ್ರಿಯವಾಗಿರುತ್ತವೆ. ಈ ಸೋಂಕು ತಗುಲಿದವರಿಗೆ ಜ್ವರ, ತಲೆನೋವು, ಮೈಕೈ ನೋವು, ಸುಸ್ತಿನ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದು ಗರ್ಭಿಣಿಯರಿಗೆ ತಗುಲಿದರೆ ಜನಿಸುವ ಶಿಶುವಿನ ಮೆದುಳಿನ ಬೆಳವಣಿಗೆಗೆ ತೊಂದರೆಯಾಗಬಹುದೆಂದು ತಜ್ಞರು ತಿಳಿಸಿದ್ದಾರೆ.
ಹಾಗಾಗಿ ಜನರು ಸೊಳ್ಳೆಗಳ ನಿಯಂತ್ರಣಕ್ಕೆ ಆದ್ಯತೆ ನೀಡಬೇಕಿದೆ. ನಗರ ಹಾಗೂ ಗ್ರಾಮಗಳ ಸ್ಥಳೀಯ ಸಂಸ್ಥೆಗಳು ಸೊಳ್ಳೆಗಳ ನಿಯಂತ್ರಣಕ್ಕೆ ವ್ಯಾಪಕ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ. ಸಾಮಾನ್ಯವಾಗಿ ಸೊಳ್ಳೆಗಳು ಮನೆಯೊಳಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶಿಸುವುದು ಮುಸ್ಸಂಜೆ ವೇಳೆಗೆ. ಸಂಜೆ 6 ಗಂಟೆಯ ಬಳಿಕ ಮನೆಯ ಕಿಟಕಿ ಹಾಗೂ ಬಾಗಿಲನ್ನು ಮುಚ್ಚಿ, ರಾತ್ರಿ 8ಗಂಟೆಯ ಬಳಿಕ ತೆರೆದರೆ ಸೊಳ್ಳೆಗಳು ಮನೆಯೊಳಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುವುದನ್ನು ತಡೆಯಬಹುದಾಗಿದೆ.
ಜಿಲ್ಲೆಯಲ್ಲೂ ಮುಂಜಾಗ್ರತೆ: ಜಿಲ್ಲೆಯ ಗಡಿಗೆ ಹೊಂದಿಕೊಂಡಂತೆ ಇರುವ ಕೇರಳದಲ್ಲಿ ಸೊಳ್ಳೆಗಳಿಂದ ಹರಡುವ ಝೀಕಾ ವೈರಸ್ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಯೂ ಮುಂಜಾಗ್ರತೆ ವಹಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ.
ಇದನ್ನೂ ಓದಿ:ಪೊಲೀಸರಿಗೆ ಮಾಸ್ಕ್ ಹಾಕಿಕೊಳ್ಳಿ ಎಂದ ಲಾರಿ ಚಾಲಕ! ವಿಡಿಯೋ ವೈರಲ್
ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮೂಲೆಹೊಳೆ ಅರಣ್ಯ ಪ್ರದೇಶ ಕೇರಳ ಗಡಿಗೆ ಹೊಂದಿಕೊಂಡಿದೆ. ಕೋವಿಡ್ ಹಿನ್ನೆಲೆಯಲ್ಲಿ ಈಗಾಗಲೇ ಮೂಲೆ ಹೊಳೆ ಚೆಕ್ ಪೋಸ್ಟ್ ನಲ್ಲಿ ಕೇರಳದಿಂದ ಬರುವವರು 48 ಗಂಟೆಗಳೊಳಗಿನ ಕೋವಿಡ್ ನೆಗೆಟಿವ್ ರಿಪೋರ್ಟ್ ತರುವುದು ಕಡ್ಡಾಯವಾಗಿದೆ.
ಪ್ರಮುಖವಾಗಿ, ಝೀಕಾ ವೈರಸ್ ಸೊಳ್ಳೆಗಳಿಂದ ಹರಡುವ ಕಾಯಿಲೆ ಯಾದ್ದರಿಂದ ಸೊಳ್ಳೆಗಳ ನಿರ್ಮೂಲನೆಗೆ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರ್ಕಾರ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯಿಂದ ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಿಮಿನಾಶಕ ಸಿಂಪಡಣೆ, ಚರಂಡಿಗಳ ಸ್ವಚ್ಛತೆ, ಫಾಗಿಂಗ್ ಮಾಡುವ ಮೂಲಕ ಕ್ರಮ ಕೈಗೊಳ್ಳುವಂತೆ, ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಆಡಳಿತಗಳಿಗೆ ಸೂಚನೆ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಸಿ. ರವಿ
ಉದಯವಾಣಿಗೆ ತಿಳಿಸಿದರು.
ಮಲೇರಿಯಾ, ಡೆಂಘೀ ಬಾರದಂತೆ ಸೊಳ್ಳೆಗಳ ನಿಯಂತ್ರಣಕ್ಕಾಗಿ ಈಗಾಗಲೇ ಕ್ರಮಗಳನ್ನು ಕಾಲಕಾಲಕ್ಕೆ ತೆಗೆದುಕೊಳ್ಳಲಾಗುತ್ತಿದೆ. ಈಗ ಝೀಕಾ ವೈರಸ್ ನೆರೆಯ ಕೇರಳ ರಾಜ್ಯದಲ್ಲೇ ಕಾಣಿಸಿಕೊಂಡಿರುವುದರಿಂದ ನಮ್ಮ ಜಿಲ್ಲೆಯಲ್ಲೂ ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: ದೇಶದಲ್ಲಿ 41,506 ಹೊಸ ಕೋವಿಡ್ ಸೋಂಕು ಪ್ರಕರಣಗಳು ಪತ್ತೆ; 895 ಮಂದಿ ಸಾವು
ಝೀಕಾ ವೈರಸ್ ಈಡೀಸ್ ಈಜಿಪ್ಟಿ ಸೊಳ್ಳೆಗಳಿಂದ ಹರಡುವ ವೈರಸ್ ಆಗಿದ್ದು, ಈ ಸೊಳ್ಳೆಗಳು ಹಗಲು ಹಾಗೂ ಮುಸ್ಸಂಜೆ ಹೊತ್ತಿನಲ್ಲಿ ಸಕ್ರಿಯವಾಗಿರುತ್ತವೆ. ಈಡಿಸ್ ಸೊಳ್ಳೆಗಳು ನೀರಿನ ತೊಟ್ಟಿ, ಬಿಸಾಡಿದ ಖಾಲಿ ಎಳನೀರಿನ ಕರಟಗಳಲ್ಲಿ, ಪ್ಲಾಸ್ಟಿಕ್ ಡಬ್ಬಗಳಲ್ಲಿ ಸಂಗ್ರಹವಾದ ನೀರಿನಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಆದ್ದರಿಂದ ಜನರು ಇದಕ್ಕೆ ಆಸ್ಪದ ಕೊಡಬಾರದು. ಮನೆಯ ಮುಂದಿನ ಚರಂಡಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮನೆಯ ಸುತ್ತಮುತ್ತ ಕಳೆಗಿಡಗಳನ್ನು ನಾಶ ಮಾಡಬೇಕು. ರಾತ್ರಿ ಮಲಗುವಾಗ ಸೊಳ್ಳೆಪರದೆ ಕಟ್ಟಿಕೊಳ್ಳಬೇಕು ಎಂದು ಡಿಎಚ್‌ಓ ಸಲಹೆ ನೀಡಿದರು.
ಜನರು ತಮ್ಮ ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕು.ಜ್ವರ, ತಲೆನೋವು, ಮೈಕೈ ನೋವು ಬಂದವರು, ಗರ್ಭಿಣಿಯರು ಈ ಲಕ್ಷಣ ಕಂಡುಬಂದರೆ ಕೂಡಲೇ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು. -ಡಾ. ಎಂ.ಸಿ. ರವಿ, ಡಿಎಚ್‌ಓ
ಕೆ. ಎಸ್ . ಬನಶಂಕರ ಆರಾಧ್ಯ