Advertisement

ಮೇ 11ರ ವರೆಗೆ ರಾಜ್ಯದ ವಿವಿಧೆಡೆ ಶೂನ್ಯ ನೆರಳಿನ ದಿನ ಗೋಚರ

12:34 AM Apr 23, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ ಶನಿವಾರದಿಂದ ಶೂನ್ಯ ನೆರಳಿನ ದಿನ ಆರಂಭವಾಗಿದ್ದು, ಮೇ 11 ರ ವರೆಗೆ ಹಲವು ಕಡೆ ಗೋಚರಿಸಲಿದೆ.
ಸೂರ್ಯನು ಆಕಾಶದಲ್ಲಿ ಉತ್ತರ ದಿಕ್ಕಿನತ್ತ ಚಲಿಸುವಾಗ ಶೂನ್ಯ ನೆರಳಿನ ದಿನ (ರಾಜ್ಯಾದ್ಯಂತ ವೀಕ್ಷಿಸಬಹುದಾದ ಖಗೋಳ ವಿದ್ಯಮಾನ) ಬರಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಮುಂಬರುವ ದಿನಗಳಲ್ಲಿ ಸೂರ್ಯನು ಆಕಾಶದಲ್ಲಿ ಉತ್ತರ ದಿಕ್ಕಿನತ್ತ ಚಲಿಸುವಾಗ, ನೀವು ಇರುವ ಸ್ಥಳಕ್ಕೆ ಅವಲಂಬಿತವಾಗಿ ಸೂರ್ಯನು ಮಧ್ಯದ ಮೂಲಕ ಅಂದರೆ ನೆತ್ತಿಯ ನೇರದಲ್ಲಿ ಹಾದು ಹೋಗುತ್ತಾನೆ. ನೀವು ನಿಂತಿರುವ ಸ್ಥಳದಿಂದ ನೆತ್ತಿಯ ಮೇಲಿರುವ ಬಿಂದುವನ್ನು ಖಮಧ್ಯ ಎನ್ನುತ್ತಾರೆ. ಭೂಮಿಯು ಗೋಳಾಕಾರದಲ್ಲಿರುವುದರಿಂದ ಈ ಬಿಂದುವು ಆಕಾಶಕ್ಕೆ ಸಂಬಂಧಿಸಿದಂತೆ ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತದೆ.

ಬೇರೆ ಯಾವುದೇ ಸಮಯದಲ್ಲಿ ಸೂರ್ಯನು ನಿಮ್ಮನ್ನು ಒಂದು ಕೋನದಲ್ಲಿ ಎದುರಿಸುತ್ತಿದ್ದರೆ, ನಿಮ್ಮ ನೆರಳು ನಿಮ್ಮ ಸುತ್ತಲಿನ ನೆಲದ ಮೇಲೆ ಬೀಳುತ್ತದೆ. ಸೂರ್ಯನು ಆಕಾಶದಲ್ಲಿ ಮೇಲೇರುತ್ತಿದ್ದಂತೆ, ನೆರಳಿನ ಉದ್ದವು ಕಡಿಮೆಯಾಗುತ್ತದೆ. ಈ ದಿನ ಸೂರ್ಯನು ನಿಮ್ಮ ತಲೆಯ ಮೇಲೆ ನಿಖರವಾಗಿ ಇರುವಾಗ ನಿಮ್ಮ ನೆರಳು ನೇರವಾಗಿ ನಿಮ್ಮ ಕೆಳಗಿರುತ್ತದೆ. ನೀವು ನಿಮ್ಮ ನೆರಳಿನ ಮೇಲೆಯೇ ನಿಂತಿರುವುದರಿಂದ ಈ ನೆರಳು ನಿಮಗೆ ಗೋಚರಿಸುವುದಿಲ್ಲ ಅಥವಾ ಇದನ್ನು ಶೂನ್ಯ ನೆರಳು ಎನ್ನುತ್ತೇವೆ.
ಉಪಕರಣ ಬಳಸದೇ ಗಮನಿಸಿ: ಭೂಮಿಯು 23.5 ಡಿಗ್ರಿ ಕೋನದಲ್ಲಿ ಬಾಗಿರುವುದರಿಂದ (ಗ್ಲೋಬ್‌ಗಳನ್ನು ತಯಾರಿಸಿ ದಂತೆ) ಭೂಮಿಯು ಸೂರ್ಯನ ಸುತ್ತ ಚಲಿಸುವಾಗ ಸೂರ್ಯನು ಉತ್ತರದಿಂದ ದಕ್ಷಿಣಕ್ಕೆ ಚಲಿಸುವಂತೆ ಕಾಣುತ್ತದೆ. ಕರ್ಕಾಟಕ ಸಂಕ್ರಾಂತಿ ವೃತ್ತ ಹಾಗೂ ಮಕರ ಸಂಕ್ರಾಂತಿ ವೃತ್ತದ ನಡುವೆ ವಾಸಿಸುವ ಎಲ್ಲ ಜನರಿಗೆ ವರ್ಷದ ಎರಡು ದಿನಗಳಲ್ಲಿ ಸೂರ್ಯನು ಉತ್ತುಂಗದಲ್ಲಿ ಕಾಣಿಸಿಕೊಳ್ಳುತ್ತಾನೆ. ಈ ಎರಡು ದಿನಗಳು ಪ್ರತೀ ವರ್ಷ ಎಪ್ರಿಲ್‌-ಮೇ ಹಾಗೂ ಆಗಸ್ಟ್‌ನಲ್ಲಿ ಸಂಭವಿಸುತ್ತವೆ. ಆಗಸ್ಟ್‌ ಮಳೆಗಾಲವಾಗಿದ್ದರಿಂದ ಬೇಸಗೆ ಕಾಲವಾದ ಎಪ್ರಿಲ್‌ ತಿಂಗಳಿನಲ್ಲಿ ಈ ಶೂನ್ಯ ನೆರಳಿನ ದಿನ ನೋಡುವ ಸಾಧ್ಯತೆ ಹೆಚ್ಚಿರುತ್ತದೆ. ಯಾವುದೇ ಉಪಕರಣ ಬಳಸದೆ ಗಮನಿಸಬಹುದಾದ ಸುಲಭವಾದ ಖಗೋಳ ವಿದ್ಯಮಾನಗಳಲ್ಲಿ ಇದು ಒಂದು.

ಕರ್ನಾಟಕದಲ್ಲಿ ಶೂನ್ಯ ನೆರಳಿನ ದಿನಗಳು
ಎಪ್ರಿಲ್‌ 23: ಮಂಡ್ಯ, ಪುತ್ತೂರು
ಎಪ್ರಿಲ್‌ 24 : ಮಂಗಳೂರು (ದ.ಕ.),
ಹಾಸನ, ಬೆಂಗಳೂರು
ಎಪ್ರಿಲ್‌ 25: ಉಡುಪಿ, ಚಿಕ್ಕಮಗಳೂರು, ತುಮಕೂರು, ಚಿಕ್ಕಬಳ್ಳಾಪುರ
ಎಪ್ರಿಲ್‌ 26: ಕುಂದಾಪುರ, ತೀರ್ಥಹಳ್ಳಿ, ಗೌರಿಬಿದನೂರು
ಎಪ್ರಿಲ್‌ 27: ಭಟ್ಕಳ , ಶಿವಮೊಗ್ಗ, ಚನ್ನಗಿರಿ
ಎಪ್ರಿಲ್‌ 28: ಹೊನ್ನಾವರ, ಕುಮಟಾ,
ಶಿಕಾರಿಪುರ, ಚಿತ್ರದುರ್ಗ
ಎಪ್ರಿಲ್‌ 29: ಗೋಕರ್ಣ, ಶಿರಸಿ,
ರಾಣೆಬೆನ್ನೂರು, ದಾವಣಗೆರೆ
ಎಪ್ರಿಲ್‌ 30: ಕಾರವಾರ, ಹಾವೇರಿ
ಮೇ 01 ಹುಬ್ಬಳ್ಳಿ , ಹೊಸಪೇಟೆ , ಬಳ್ಳಾರಿ
ಮೇ 02: ಧಾರವಾಡ, ಗದಗ
ಮೇ 03: ಬೆಳಗಾವಿ, ಸಿಂಧನೂರ್‌
ಮೇ 04: ಗೋಕಾಕ್‌, ಬಾಗಲಕೋಟೆ, ರಾಯಚೂರು
ಮೇ 06: ಯಾದಗಿರಿ
ಮೇ 07: ವಿಜಯಪುರ
ಮೇ 09: ಕಲಬುರಗಿ
ಮೇ 10: ಹುಮ್ನಾಬಾದ್‌
ಮೇ 11: ಬೀದರ್‌

ಮೇಲಿನ ಸ್ಥಳದ ನೆರಳುಗಳು ಪೂರ್ವಕ್ಕೆ ಮಧ್ಯಾಹ್ನ 12.15 ರಿಂದ ಮತ್ತು ರಾಜ್ಯದ ಪಶ್ಚಿಮ ಭಾಗಗಳಿಗೆ ಮಧ್ಯಾಹ್ನ 12.35ರ ನಡುವೆ ಒಂದು ನಿಮಿಷ ಕಣ್ಮರೆಯಾಗುತ್ತವೆ. ಶೂನ್ಯ ನೆರಳನ್ನು ಗಮನಿಸಲು, ವಸ್ತುವು ಸಿಲಿಂಡರ್‌, ಕ್ಯೂಬ್‌ ಅಥವಾ ಶಂಕುವಿನಂತೆ ಮೇಲಿನಿಂದ ಕೆಳಕ್ಕೆ ಸಮಾನ ಅಥವಾ ಹೆಚ್ಚುತ್ತಿರುವ ಅಗಲವನ್ನು ಹೊಂದಿರಬೇಕು. ಮನುಷ್ಯರ ದೇಹದ ಮೇಲ್ಭಾಗವು ಕೆಳಭಾಗಕ್ಕಿಂತ ವಿಶಾಲವಾಗಿದ್ದರಿಂದ ಸ್ವಲ್ಪ ಪ್ರಮಾಣದಲ್ಲಿ ನೆರಳನ್ನು ಉಂಟು ಮಾಡುತ್ತದೆ. ಇದು ಶೂನ್ಯ ನೆರಳಿನ ದಿನದಂದು ಅತ್ಯಲ್ಪ ಪ್ರಮಾಣದಲ್ಲಿ ಕಾಣುತ್ತದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next