ಧಾರವಾಡ : ಕವಿವಿ ಆವರಣದಲ್ಲಿನ ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಗುರುವಾರ ಶೂನ್ಯ ನೆರಳಿನ ದಿನ ಆಚರಿಸಲಾಯಿತು.
ಮಧ್ಯಾಹ್ನ 12:32 ಗಂಟೆಗೆ ಒಂದು ನೇರವಾದ ಕಂಬಿಯ ನೆರಳು ಇಲ್ಲವೇ ಇಲ್ಲದಂತಾಯಿತು. ಹಾಗೆಯೇ ಒಂದು ಚಿಕ್ಕ ಗಾಜಿನ ಬಟ್ಟಲದ ನೆರಳು ಕಾಣದಂತಾಯಿತು. ಸುಮಾರು 200ಕ್ಕೂ ಹೆಚ್ಚು ಜನ ಈ ಕ್ಷಣವನ್ನು ವೀಕ್ಷಿಸಿ ಸಂತಸಪಟ್ಟರು.
ಈ ಶೂನ್ಯ ನೆರಳಿನ ಘಟನೆ ಕರ್ಕಾಟಕ ಸಂಕ್ರಾಂತಿ ವೃತ್ತ ಹಾಗೂ ಮಕರ ಸಂಕ್ರಾಂತಿ ವೃತ್ತಗಳ ನಡುವೆ ಇರುವ ಸ್ಥಳಗಳಿಗೆ ಮಾತ್ರ ಉಂಟಾಗುವುದು. ಅದಲ್ಲದೆ ಬೇರೆ ಬೇರೆ ಅಕ್ಷಾಂಶಗಳನ್ನು ಹೊಂದಿದ ಸ್ಥಳಗಳಿಗೆ ಬೇರೆ ಬೇರೆ ದಿನಗಳಂದು ಶೂನ್ಯ ನೆರಳು ಉಂಟಾಗುವುದು. ಇದರ ವಿವರವಾದ ಮಾಹಿತಿ ಬಗ್ಗೆ ಕೇಂದ್ರದ ಶೈಕ್ಷಣಿಕ ಸಹಾಯಕಿ ಉಷಾ ಕುಲಕರ್ಣಿ ಪ್ರಾತ್ಯಕ್ಷಿಕೆಗಳ ಮೂಲಕ ಉಪನ್ಯಾಸ ನೀಡಿದರು.
ಋತುಮಾನಗಳ ಬದಲಾಗುವಿಕೆಗೆ ಸೂರ್ಯ ಭೂಮಿಯ ನಡುವಿನ ದೂರ ಕಾರಣವಲ್ಲ. ಅದು ತಪ್ಪು ಕಲ್ಪನೆ. ಭೂಮಿಯ ಅಕ್ಷವು ಸೂರ್ಯ ಭೂಮಿಯ ಸಮತಲಕ್ಕೆ 23.50 ಕೋನದಿಂದ ಓರೆಯಾಗಿರುವುದೇ ಕಾರಣ ಎಂಬ ವಿಷಯವನ್ನು ಚರ್ಚಿಸಲಾಯಿತು.
ಕೇಂದ್ರದ ಶೈಕ್ಷಣಿಕ ಸಹಾಯಕ ಸಿ.ಎಫ್. ಚಂಡೂರ, ಬಿ.ಎಸ್. ಗಾಂವಕರ, ಪ್ರಮೋದ ಆರ್, ವಿಶಾಲಾಕ್ಷಿ, ಎಮ್.ಎ.ಭಾವಿಕಟ್ಟಿ ಇದ್ದರು.