Advertisement

ಕರಾವಳಿಯಲ್ಲಿ ಶೂನ್ಯ ಬಂಡವಾಳ ಕೃಷಿ

10:44 AM Dec 20, 2018 | Harsha Rao |

ಮಂಗಳೂರು: ರೈತರನ್ನು ಸಾಲಬಾಧೆಯಿಂದ ಮುಕ್ತಿಗೊಳಿಸಿ ಆರ್ಥಿಕವಾಗಿ ಸದೃಢಗೊಳಿಸುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಹತ್ವಾಕಾಂಕ್ಷಿ “ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ’ (ಝಡ್‌ಬಿಎನ್‌ಎಫ್‌) ಯೋಜನೆ ಅನುಷ್ಠಾನಕ್ಕೆ ದ.ಕನ್ನಡ ಮತ್ತು ಉಡುಪಿಯ ಒಟ್ಟು 8 ತಾಲೂಕುಗಳಲ್ಲಿ 1,224 ಹೆಕ್ಟೇರ್‌ ಕೃಷಿಭೂಮಿ ಗುರುತಿಸುವಿಕೆ ಪ್ರಾರಂಭವಾಗಿದೆ.

Advertisement

ಒಟ್ಟು 10 ವಲಯಗಳಲ್ಲಿ ಪ್ರಾಯೋಗಿಕವಾಗಿ ಅಳವಡಿಸಲು ಕೃಷಿ ಇಲಾಖೆ ನಿರ್ಧರಿಸಿದೆ. ಪ್ರತೀ ವಲಯದಲ್ಲಿ ತಲಾ 2,000 ಹೆ. ಗುರಿ ಹೊಂದಲಾಗಿದೆ. ಕರಾವಳಿ ವಲಯದಲ್ಲಿ ದ. ಕನ್ನಡದ 5, ಉಡುಪಿಯ 3, ಉ.ಕನ್ನಡದ 5 ಸೇರಿ ಒಟ್ಟು 13 ತಾಲೂಕುಗಳನ್ನು ಆಯ್ಕೆ ಮಾಡಲಾಗಿದೆ. ದ.ಕನ್ನಡದಲ್ಲಿ ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ಹಾಗೂ ಸುಳ್ಯ; ಉಡುಪಿ ಜಿಲ್ಲೆಯ ಉಡುಪಿ, ಕಾರ್ಕಳ, ಕುಂದಾಪುರಗಳನ್ನು ಆಯ್ಕೆ ಮಾಡಲಾಗಿದ್ದು, ತಲಾ 153 ಹೆಕ್ಟೇರ್‌ ಪ್ರದೇಶ ಗುರುತಿಸಲು ರಾಜ್ಯ ಕೃಷಿ ಆಯುಕ್ತರು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಿಗೆ ಸೂಚಿಸಿದ್ದಾರೆ. 

ದಕ್ಷಿಣಕನ್ನಡ: ಎಲ್ಲೆಲ್ಲಿ?
ದಕ್ಷಿಣ ಕನ್ನಡದಲ್ಲಿ ಹೋಬಳಿ ಮಟ್ಟದಲ್ಲಿ ಕರಡು ಪಟ್ಟಿ ಸಿದ್ಧಪಡಿಸಲಾಗಿದ್ದು, ಒಆರ್‌ಪಿ ಪರಿಶೀಲಿಸಿ ಅನುಮೋದಿಸಿದ ಬಳಿಕ ಅಂತಿಮಗೊಳ್ಳಲಿದೆ. ಮಂಗಳೂರು ತಾಲೂಕಿನ ಸುರತ್ಕಲ್‌ ಹೋಬಳಿಯ ಸೂರಿಂಜೆ, ಅತಿಕಾರಿ ಬೆಟ್ಟು, ಬೆಳುವಾಯಿಗಳಲ್ಲಿ ತಲಾ 50ರಂತೆ 150 ಹೆ., ಪಾಣೆಮಂಗಳೂರು ಹೋಬಳಿಯ ಬಾಳ್ತಿಲ ಹಾಗೂ ಬರಿಮಾರಿನಲ್ಲಿ ತಲಾ 51ಹೆ., ಬೋಳಂತೂರು, ವೀರಕಂಭದಲ್ಲಿ ತಲಾ 51 ಹೆಕ್ಟೇರ್‌, ಬಂಟ್ವಾಳದ ಕಾವಳಪಡೂರು, ಕಾಡಬೆಟ್ಟುಗಳಲ್ಲಿ ತಲಾ 51 ಹೆಕ್ಟೇರ್‌ ಸೇರಿ ಒಟ್ಟು 153 ಹೆಕ್ಟೇರ್‌, ಬೆಳ್ತಂಗಡಿ ತಾಲೂಕಿನ ಕನ್ಯಾಡಿಯಲ್ಲಿ 40 ಹೆ., ಕೊಕ್ಕಡದಲ್ಲಿ ಹಾಗೂ ವೇಣೂರಿನಲ್ಲಿ ತಲಾ 35 ಹೆ. ಸಹಿತ 110 ಹೆಕ್ಟೇರ್‌ ಹಾಗೂ ಪುತ್ತೂರಿನ ಬೆಟ್ಟಂಪಾಡಿಯಲ್ಲಿ 24.5 ಹೆಕ್ಟೇರ್‌, ಸರ್ವೆ 24.5 ಹೆ., ಕೌಕ್ರಾಡಿಯಲ್ಲಿ 25 ಹೆಕ್ಟೇರ್‌, ಹಿರೇಬಂಡಾಡಿಯಲ್ಲಿ 27, ಅಲಂಕಾರಿನಲ್ಲಿ 26 ಹೆ., ಪುಣcಪಾಡಿಯಲ್ಲಿ 24 ಹೆಕ್ಟೇರ್‌ ಸೇರಿ ಒಟ್ಟು 153 ಹಾಗೂ ಸುಳ್ಯದ ಅಜ್ಜಾವರದಲ್ಲಿ 36 ಹೆಕ್ಟೇರ್‌, ಕಲ್ಮಡ್ಕ ಹಾಗೂ ಬಾಳುಗೋಡು 26 ಹೆಕ್ಟೇರ್‌, ಆಲೆಟ್ಟಿಯಲ್ಲಿ 40 ಹೆಕ್ಟೇರ್‌, ಮುರುಳ್ಯದಲ್ಲಿ 26 ಸೇರಿ ಒಟ್ಟು 720 ಹೆಕ್ಟೇರ್‌ ಪ್ರದೇಶವನ್ನು ಆಯ್ಕೆ ಮಾಡುವ ಗುರಿ ಇರಿಸಿಕೊಳ್ಳಲಾಗಿದೆ. ಉಡುಪಿಯಲ್ಲಿ ಪ್ರದೇಶ ಆಯ್ಕೆ ಚಾಲನೆಯಲ್ಲಿದೆ.

ಒಆರ್‌ಪಿ ಮೂಲಕ ಅನುಷ್ಠಾನ
ಕೃಷಿ ಹಾಗೂ ತೋಟಗಾರಿಕೆ ವಿವಿಗಳು ರಚಿಸುವ “ಅಪರೇಶನಲ್‌ ರಿಸರ್ಚ್‌ ಪ್ರೊಜೆಕ್ಟ್’ (ಒಆರ್‌ಪಿ) ಮೂಲಕ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ. ಅಸೋಸಿಯೇಟ್‌ ಪ್ರೊಫೆಸರ್‌ ಶ್ರೇಣಿಯ ಕೃಷಿ ವಿಜ್ಞಾನಿಗಳು ತಂಡದ ಮುಖ್ಯಸ್ಥರಾಗಿರುತ್ತಾರೆ. ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಸದಸ್ಯರಾಗಿರುತ್ತಾರೆ. ಅನುಷ್ಠಾನ ಉಸ್ತುವಾರಿಯನ್ನು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿವಿಗೆ ವಹಿಸಿ ಕೊಡಲಾಗಿದ್ದು,  ಇಬ್ಬರು ವಿಜ್ಞಾನಿಗಳನ್ನು ನಿಯುಕ್ತಿಗೊಳಿಸಲಾಗಿದೆ. ರಾಜ್ಯದ ಎಲ್ಲ ತಾಲೂಕುಗಳ ಓರ್ವರಂತೆ ಒಟ್ಟು 180 ಮಂದಿ ಕೃಷಿ ಅಧಿಕಾರಿಗಳಿಗೆ ನೈಸರ್ಗಿಕ ಕೃಷಿ ತಜ್ಞ ಸುಭಾಷ್‌ ಪಾಳೇಕರ್‌ ಅವರಿಂದ ಕಾರ್ಯಗಾರ ನಡೆಸಲಾಗಿದೆ.

ಈಗಾಗಲೇ ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಂಡಿರುವ ಯಾ ಆಸಕ್ತ ರೈತರನ್ನು ಆಯ್ಕೆ ಮಾಡಿ ತರಬೇತುದಾರರನ್ನಾಗಿ ಮಾಡಲಾಗುತ್ತದೆ. ಪ್ರತಿ 2-5 ಕ್ಲಸ್ಟರ್‌ಗೆ ಓರ್ವರಂತೆ ಸಮುದಾಯ ಸಹಾಯಕರು ಹಾಗೂ ಸಮುದಾಯ ಸಂಪನ್ಮೂಲ ವ್ಯಕ್ತಿಗಳನ್ನು ಆರಿಸಲಾಗುತ್ತದೆ. 

Advertisement

ಸರಕಾರಿ ಸಹಾಯಧನ
ಆಯ್ಕೆಯಾದ ರೈತರಿಗೆ ನೆಲಹೊದಿಕೆಗೆ ಬೇಕಾಗುವ ದ್ವಿದಳ ಬೀಜಗಳು, ಹಸಿರೆಲೆ ಗೊಬ್ಬರ ಬೀಜಗಳು, ಬೀಜ ಮತ್ತು ಸಸಿಗಳ ವಿತರಣೆ, ಬೀಜಾಮೃತ/ಜೀವಾಮೃತ ಮಿಶ್ರಣ ತಯಾರಿಕೆಗೆ ಸಿಮೆಂಟ್‌ ತೊಟ್ಟಿ, ಕಚ್ಚಾ ವಸ್ತುಗಳು, ಎರಡು ಹಸು ನಿಲ್ಲುವ ಜಾಗಕ್ಕೆ ನೆಲಹಾಸು, ಬಯೋ ಡೈಜೆಸ್ಟರ್‌ಗಳ ತೊಟ್ಟಿ, ಶೇಖರಣ ತೊಟ್ಟಿ, ಬಹುವಾರ್ಷಿಕ ಮೇವಿನ ಸಂಪನ್ಮೂಲ ಅಭಿವೃದ್ಧಿ ಹಾಗೂ ಸಮುದಾಯಿಕವಾಗಿ ಬೀಜಬ್ಯಾಂಕ್‌ ಸ್ಥಾಪನೆ, ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರಗಳ ಶುಲ್ಕ ಮುಂತಾದವುಗಳಿಗೆ ಗರಿಷ್ಠ ಸಹಾಯಧನ ನೀಡಲಾಗುತ್ತದೆ. 

ದ.ಕ. ಜಿಲ್ಲೆಯಲ್ಲಿ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಪ್ರಕ್ರಿಯೆ ಆರಂಭಗೊಂಡಿದೆ. ಈಗಾಗಲೇ ಆಸಕ್ತ ರೈತರು ಹಾಗೂ ನೈಸರ್ಗಿಕ ಕೃಷಿಯಲ್ಲಿ ತೊಡಗಿರುವವರ ಹಾಗೂ ಪ್ರದೇಶಗಳ ಪಟ್ಟಿ ಸಿದ್ಧಪಡಿಸಿದ್ದೇವೆ. ಕೃಷಿ ಮತ್ತು ತೋಟಗಾರಿಕೆ ವಿವಿ ವಿಜ್ಞಾನಿಗಳ ನೇತೃತ್ವದ ತಂಡ ಇದಕ್ಕೆ ಅನುಮೋದನೆ ನೀಡಬೇಕಾಗಿದೆ.
-ಸೀತಾ ಎಂ.ಸಿ. ದ.ಕ. ಜಿಲ್ಲಾ ಕೃಷಿ ಜಂಟಿ ನಿರ್ದೇಶಕರು 

ಉಡುಪಿ ಜಿಲ್ಲೆಯಲ್ಲಿ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಗೆ ಮೂರು ತಾಲೂಕುಗಳನ್ನು ರಾಜ್ಯ ಕೃಷಿ ಇಲಾಖೆ ಗುರುತಿಸಿದೆ. ಅನುಷ್ಠಾನ ಪ್ರಕ್ರಿಯೆ ಆರಂಭಿಕ ಹಂತದಲ್ಲಿದೆ.
 -ಡಾ| ಕೆಂಪೇಗೌಡ, ಉಡುಪಿ ಜಿಲ್ಲಾ  ಕೃಷಿ ಜಂಟಿ ನಿರ್ದೇಶಕರು 

Advertisement

Udayavani is now on Telegram. Click here to join our channel and stay updated with the latest news.

Next