Advertisement

43 ಶಾಲೆಗಳಲ್ಲಿ ದಾಖಲಾತಿ ಶೂನ್ಯ!

10:00 AM Jul 09, 2018 | Team Udayavani |

ಸುಳ್ಯ: ಸರಕಾರಿ ಶಾಲೆಗಳದ್ದು ಬಗೆದಷ್ಟು ಮುಗಿಯದ ಕಥೆ. ಒಂದೆಡೆ ಮಕ್ಕಳಿಲ್ಲದೆ ಮುಚ್ಚಿದ, ಇನ್ನೊಂದೆಡೆ ಪೂರ್ಣಕಾಲಿಕ ಶಿಕ್ಷಕರಿಲ್ಲದ ಅತಂತ್ರ ಸ್ಥಿತಿ. ಈ ಕಥೆ ಅವೆಲ್ಲಕ್ಕಿಂತ ಭಿನ್ನ. 2018-19ನೇ ಶೈಕ್ಷಣಿಕ ಸಾಲಿನಲ್ಲಿ ಉಭಯ ಜಿಲ್ಲೆಗಳ 43 ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಂದನೇ ತರಗತಿಗೆ ಮಕ್ಕಳ ದಾಖಲಾತಿ ಸಂಖ್ಯೆ ಶೂನ್ಯ. ಅಂದರೆ ಇಲ್ಲಿ ಮಕ್ಕಳಿಲ್ಲದೆ ಮೊದಲ ತರಗತಿಯೇ ನಡೆಯುತ್ತಿಲ್ಲ! ಹಾಗೆಂದು ಈ ಶಾಲೆಗಳು ಮುಚ್ಚಿಲ್ಲ. ಒಂದನೇ ತರಗತಿ ಬಿಟ್ಟು ಉಳಿದ ತರಗತಿಗಳಲ್ಲಿ ಬೆರಳೆಣಿಕೆಯ ಮಕ್ಕಳಿದ್ದಾರೆ. ಹಾಗಾಗಿ ಈ ಬಾರಿಯಂತೂ ಮುಚ್ಚುವುದಿಲ್ಲ. ಮುಚ್ಚುವ ಪಟ್ಟಿಗೆ ಸೇರುವ ದಿನಗಳು ಹತ್ತಿರದಲ್ಲಿವೆ ಎಂಬ ಎಚ್ಚರಿಕೆ ಗಂಟೆಯಿದು. ತತ್‌ ಕ್ಷಣ ಸರಕಾರ, ಶಿಕ್ಷಣ ಇಲಾಖೆ ಎಚ್ಚೆತ್ತುಕೊಳ್ಳದಿದ್ದರೆ, ಭವಿಷ್ಯದಲ್ಲಿ ಬೀಗ ಜಡಿಯಬೇಕಾದ ಸ್ಥಿತಿ ನಿಶ್ಚಿತ.

Advertisement

ಈ ಶಾಲೆಗಳಲ್ಲಿ ತರಗತಿಯಿಂದ ತೇರ್ಗಡೆ ಆಗುವ ಪ್ರಕ್ರಿಯೆ ಮಾತ್ರ ನಡೆಯುತ್ತಿದೆ, ಹೊಸದಾಗಿ ಸೇರ್ಪಡೆ ಆಗುತ್ತಿಲ್ಲ. ಇದರಿಂದ ಮಕ್ಕಳ ಸಂಖ್ಯೆ ಇಳಿಮುಖಗೊಂಡು, ವರ್ಷದಿಂದ ವರ್ಷಕ್ಕೆ ಶಾಲೆಗಳು ಸೊರಗುತ್ತಿವೆ. ಮಕ್ಕಳು ಬಾರದಿರುವುದಕ್ಕೆ ಕಾರಣ ಏನು ಎಂಬ ಕುರಿತು ಸರಕಾರ, ಇಲಾಖೆ ಚಿಂತಿಸಿ, ಪರಿಹಾರ ಕಂಡುಕೊಂಡರೆ ಶಾಲೆ ಉಳಿಯಬಹುದು ಅನ್ನುತ್ತಾರೆ ಶಿಕ್ಷಣಾಭಿಮಾನಿಗಳು.


ಎಲ್ಲೆಲ್ಲಿ ಎಷ್ಟು?

ಉಡುಪಿ ಜಿಲ್ಲೆಯಲ್ಲಿ 24 ಶಾಲೆಗಳು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ 19 ಶಾಲೆಗಳ ಒಂದನೇ ತರಗತಿಯಲ್ಲಿ ಒಬ್ಬನೇ ಒಬ್ಬ ವಿದ್ಯಾರ್ಥಿ ಇಲ್ಲ. ಉಭಯ ಜಿಲ್ಲೆಗಳ ಪೈಕಿ ಒಂದನೇ ತರಗತಿಗೆ ದಾಖಲಾತಿ ಇಲ್ಲದ ಶಾಲೆಗಳ ಪಟ್ಟಿಯಲ್ಲಿ ಉಡುಪಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಉಡುಪಿ ಬ್ಲಾಕ್‌ ಬಿಟ್ಟು, ಉಳಿದೆಲ್ಲ ಬ್ಲಾಕ್‌ ನಲ್ಲಿ ಮಕ್ಕಳು ದಾಖಲಾಗದ ಶಾಲೆಗಳು ಇವೆ. ಬೈಂದೂರು-14, ಕಾರ್ಕಳ-1, ಬ್ರಹ್ಮಾವರ-2, ಕುಂದಾಪುರ-7 ಶಾಲೆಗಳಲ್ಲಿ ದಾಖಲಾತಿ ಆಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಮೂಡಬಿದಿರೆ ಬ್ಲಾಕ್‌ ನ ಎಲ್ಲ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಂದನೇ ತರಗತಿಗೆ ದಾಖಲಾತಿ ಆಗಿದೆ ಎಂದು ಅಲ್ಲಿನ ಶಿಕ್ಷಣ ಇಲಾಖೆ ಕಚೇರಿ ಮಾಹಿತಿ ನೀಡಿದೆ. ಉಳಿದಂತೆ ಸುಳ್ಯ-7, ಪುತ್ತೂರು-4, ಮಂಗಳೂರು ಉತ್ತರ-1, ಮಂಗಳೂರು ದಕ್ಷಿಣ-3, ಬೆಳ್ತಂಗಡಿ-6 ಶಾಲೆಗಳಲ್ಲಿ ಶೂನ್ಯ ದಾಖಲಾತಿ.

ಸೇರ್ಪಡೆಗೆ ಅವಕಾಶ ಇದೆ
ದಾಖಲಾತಿ ಇಲ್ಲದ ಶಾಲೆಗಳಿಗೆ ಮಕ್ಕಳು ಸೇರ್ಪಡೆಗೊಳಿಸಲು ಇನ್ನೂ ಕಾಲಾವಕಾಶ ಇದೆ. ಸೇರ್ಪಡೆ ಕಾರ್ಯ ನಿರಂತರ ಪ್ರಕ್ರಿಯೆ. ದಾಖಲಾತಿಗೆ ಬೇಕಿರುವ ಪೂರಕ ಕ್ರಮಗಳ ಬಗ್ಗೆ ಶಿಕ್ಷಣ ಇಲಾಖೆ ಮುತುವರ್ಜಿ ವಹಿಸಿದೆ. ವೈ.
– ಶಿವರಾಮಯ್ಯ, ಡಿಡಿಪಿಐ, ಮಂಗಳೂರು

ಅವಕಾಶ ಇದೆ
ಪ್ರತಿ ಶಾಲಾ ವ್ಯಾಪ್ತಿಯಲ್ಲಿ ಮಕ್ಕಳ ಸೇರ್ಪಡೆಗೆ ಮನೆ ಭೇಟಿಯಂತಹ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ. ಕೆಲವೆಡೆ ಅರ್ಹ ವಯಸ್ಸಿನ ಮಕ್ಕಳ ಕೊರತೆ ಇದ್ದು ದಾಖಲಾತಿ ಆಗದಿರಬಹುದು. ಮುಂದಿನ ವರ್ಷ ದಾಖಲಾತಿ ಮಾಡಿ, ತರಗತಿ ಮುಂದುವರಿಸಲು ಅವಕಾಶ ಇದೆ.
-ಶೇಷಶಯನ ಕೆ., DDPI, ಉಡುಪಿ

Advertisement

— ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next