ಕಿರುತೆರೆಯಲ್ಲಿ ಸಂಗೀತ ಹಬ್ಬಕ್ಕೆ ಕಾರಣವಾದ ಜೀ ಕನ್ನಡ ವಾಹಿನಿ, ಈಗ ಮತ್ತೂಂದು ಹಾಡು-ಹಬ್ಬಕ್ಕೆ ಸಾಕ್ಷಿಯಾಗುತ್ತಿದೆ. ಹೌದು, ತನ್ನ ಹದಿನಾಲ್ಕನೆ ಸರಿಗಮಪ ರಿಯಾಲಿಟಿ ಶೋವನ್ನು ಯಶಸ್ವಿಯಾಗಿ ಮುಗಿಸಿದ್ದು, ಇದೀಗ ಹದಿನೈದನೇ ಆವೃತ್ತಿಯತ್ತ ದಾಪುಗಾಲು ಇಡುತ್ತಿದೆ. ಸೆ.29 ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 7.30 ಕ್ಕೆ ಪ್ರಸಾರವಾಗಲಿದೆ. ಪ್ರತಿ ಆವೃತ್ತಿಯಲ್ಲೂ ಹೊಸ ಪ್ರತಿಭೆಗಳನ್ನು ಪರಿಚಯಿಸುತ್ತ ಬಂದಿರುವ ಜೀ ಕನ್ನಡ ವಾಹಿನಿ, ಈ ಆವೃತ್ತಿಯಲ್ಲೂ ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುತ್ತಿದೆ. ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಅವರು ಈ ಸಂಗೀತ ಸ್ಪರ್ಧೆಯ ಮುಖ್ಯ ಆಕರ್ಷಣೆ. ಉಳಿದಂತೆ ಗಾಯಕರಾದ ರಾಜೇಶ್ ಕೃಷ್ಣನ್, ವಿಜಯಪ್ರಕಾಶ್ ಮತ್ತು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಜೀ ವಾಹಿನಿಯ ಸರಿಗಮಪ ಸಿಂಗಿಂಗ್ ರಿಯಾಲಿಟಿ ಶೋನಲ್ಲಿ ಅತೀ ಹೆಚ್ಚು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದ ರಾಜೇಶ್ ಕೃಷ್ಣನ್, ಕಳೆದ ಆವೃತ್ತಿಯಲ್ಲಿ ಇರಲಿಲ್ಲ. ಈ ಆವೃತ್ತಿಗೆ ಆಗಮಿಸಿದ್ದು, ರಿಯಾಲಿಟಿ ಶೋ ಮತ್ತಷ್ಟು ಕಲರ್‌ಫುಲ್ ಆಗಿರಲಿದೆ ಎಂಬುದು ಜೀ ವಾಹಿನಿ ತಂಡದ ಮಾತು.
ಸರಿಗಮಪ ಹದಿನೈದನೇ ಆವೃತ್ತಿ ಬಗ್ಗೆ ಹಂಸಲೇಖ ಅವರಿಗೆ ಎಲ್ಲಿಲ್ಲದ ಖುಷಿ. “ಈ ಕಾರ್ಯಕ್ರಮ ಮೂಲಕ ಹೊಸ ಪ್ರತಿಭೆಗಳನ್ನು ನಾಡಿಗೆ ಪರಿಚಯಿಸುವ ಕೆಲಸ ಆಗುತ್ತಿದೆ. ಈ ಬಾರಿ ಎಲ್ಲೆಡೆಯಿಂದ ಪ್ರತಿಭಾವಂತರ ಆಗಮನವಾಗಿದೆ. ಈ ಸಲ ಮಾಸ್ಟರ್ ಕ್ಲಾಸ್ ಎಂಬ ಜವಾಬ್ದಾರಿಯೊಂದಿಗೆ ಹೊಸ ಬಗೆಯ ಹಾಡು ಹೇಳಿಸುವ ಮೂಲಕ ಪ್ರತಿಭೆಗಳನ್ನು ಹುರಿದುಂಬಿಸುವ ಕೆಲಸ ಮಾಡಲು ಸಜ್ಜಾಗಿದ್ಧೇವೆ’ ಎಂಬುದು ಹಂಸಲೇಖ ಮಾತು. ಇನ್ನು, ಜೀ ಕನ್ನಡ ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರು ಅವರಿಗೆ ಟಿಆರ್‌ಪಿ ಹೆಚ್ಚಿರುವ ಖುಷಿ. ಅದರಲ್ಲೂ ಸರಿಗಮಪ ಮೂಲಕ ನಗರ ಭಾಗದಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ ಎಂಬ ಹೆಮ್ಮೆ. “ರಾಜ್ಯದ 30 ಜಿಲ್ಲೆಗಳಲ್ಲಿ ಆಡಿಷನ್ ನಡೆಸಿ, ಪ್ರತಿಭೆಗಳನ್ನು ಗುರುತಿಸಿ ಅವಕಾಶ ಕಲ್ಪಿಸಲಾಗಿದೆ. ಕೊಡಗು-ಮಡಿಕೇರಿ ಹೊರತುಪಡಿಸಿ ರಾಜ್ಯದೆಲ್ಲೆಡೆ ಸುತ್ತಾಡಿದ್ದೇವೆ.
ಸುಮಾರು 5 ಲಕ್ಷ ಪ್ರತಿಭೆಗಳ ಪೈಕಿ 35 ಪ್ರತಿಭಾವಂತರನ್ನು ಅಂತಿಮವಾಗಿ ಆಯ್ಕೆ ಮಾಡಲಾಗಿದೆ. ಅದೇ ಹಾಡನ್ನು ಹೊಸ ಧ್ವನಿಯಲ್ಲಿ ಹಾಡಿಸುವ ಉದ್ದೇಶ ನಮಗಿದೆ. ಇಲ್ಲಿ ದಿಗ್ಗಜ ತೀರ್ಪುಗಾರರು ಇರುವುದರಿಂದ ಪ್ರತಿ ಎಪಿಸೋಡು ಕೂಡ ಗ್ರಾಂಡ್ ಫಿನಾಲೆ ರೀತಿಯೇ ಮೂಡಿಬರಲಿದೆ’ ಎಂಬುದು ರಾಘವೇಂದ್ರ ಹುಣಸೂರು ಮಾತು.
ಗಾಯಕ ವಿಜಯಪ್ರಕಾಶ್‌ಗೆ ಹಂಸಲೇಖ ಅವರೊಂದಿಗೆ ಕೆಲಸ ಮಾಡುತ್ತಿರುವ ಖುಷಿ ಒಂದೆಡೆಯಾದರೆ, ಈ ಬಾರಿಯೂ ಹೊಸ ಪ್ರತಿಭಾವಂತರ ಎನರ್ಜಿಯನ್ನು ನೋಡುವ ಖುಷಿ ಇನ್ನೊಂದೆಡೆ. ಕನ್ನಡ ಕಲಾವಿದರಿಗೊಂದು ಅಪರೂಪದ ವೇದಿಕೆ ಇದು. ಇಲ್ಲಿ ಅದೆಷ್ಟೋ ಕಲಾಪ್ರತಿಭೆಗಳು ರೂಪುಗೊಳ್ಳುತ್ತಿವೆ. ಅಂತಹ ಕೆಲಸದಲ್ಲಿ ನಾವೂ ಇದ್ದೇವೆ ಎಂಬ ಖುಷಿ ಇದೆ ಎನ್ನುತ್ತಾರೆ ವಿಜಯಪ್ರಕಾಶ್.
ರಾಜೇಶ್‌ಕೃಷ್ಣನ್ ಅವರಿಗೆ ಕಳೆದ ಸೀಸನ್‌ನಲ್ಲಿ ಇರಲಿಲ್ಲ ಎಂಬ ಭಾವನೆಯೇ ಇರಲಿಲ್ಲವಂತೆ. ಇಲ್ಲಿ ಎಲ್ಲರ ಶ್ರಮ ಇದ್ದೇ ಇರುತ್ತೆ. ಈ ಬಾರಿಯೂ ಪ್ರಾಮಾಣಿಕ ಪ್ರಯತ್ನದೊಂದಿಗೆ ಹೊಸ ಪ್ರತಿಭೆಗಳನ್ನು ಗುರುತಿಸುವ ಕೆಲಸ ಆಗಲಿದೆ ಎಂಬುದು ರಾಜೇಶ್ ಕೃಷ್ಣನ್ ಮಾತು. ಅರ್ಜುನ್ ಜನ್ಯ ಅವರಿಗೆ ಈ ರಿಯಾಲಿಟಿ ಶೋ ಮೂಲಕ ಒಳ್ಳೆಯ ಗಾಯಕರು ಸಿಕ್ಕ ಖುಷಿಯಂತೆ.