ಬೀದರ: ಬಸವಕಲ್ಯಾಣ ಉಪ ಕದನಕ್ಕೆ ಯಸ್ರಬ್ ಅಲಿ ಖಾದ್ರಿ ಅವರನ್ನು ಕಣಕ್ಕಿಳಿಸುವ ಮೂಲಕ ಮುಸ್ಲಿಂ ಸಮುದಾಯದ ಮತ ಸೆಳೆಯುವ ಜೆಡಿಎಸ್‌ನ ತಂತ್ರಗಾರಿಕೆ ವಿಫಲಗೊಳಿಸಲು ಕಾಂಗ್ರೆಸ್ ಕೂಡ ಮೆಗಾ ಪ್ಲಾನ್ ಮಾಡಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಶಿಷ್ಯ, ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಕ್ಷೇತ್ರದ ಹೊಣೆ ಹೊರಿಸಿ ಸಾಂಪ್ರದಾಯಿಕ ಮತಗಳು ಚದುರದಂತೆ ಕಾರ್ಯತಂತ್ರ ರೂಪಿಸುತ್ತಿದೆ. ಬಸವಕಲ್ಯಾಣ ಕ್ಷೇತ್ರದಲ್ಲಿ ಮುಸ್ಲಿಮರದ್ದು ಎರಡನೇ ಅತಿ ದೊಡ್ಡ ಸಮುದಾಯ. ಇಲ್ಲಿ ಬಹುಸಂಖ್ಯಾತರಾಗಿ ಗುರುತಿಸಿಕೊಂಡಿರುವ ಮುಸ್ಲಿಂ ಮತಗಳು ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ. ಹಾಗಾಗಿ ಎಲ್ಲರ ಕಣ್ಣು ಆ ಮತಗಳ ಮೇಲೆಯೇ ಇವೆ.
ಕಲ್ಯಾಣ ಉಪ ಕದನ ಪ್ರತಿಷ್ಠೆಯಾಗಿ ಪಡೆದಿರುವ ಜನತಾ ದಳ ಕಾಂಗ್ರೆಸ್ ನಲ್ಲಿದ್ದ ಮುಸ್ಲಿಂ ಸಮುದಾಯದ ಮುಖಂಡ ಖಾದ್ರಿ ಅವರಿಗೆ ಗಾಳ ಹಾಕಿ, ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇದು ಕೈ ಪಡೆಯಲ್ಲಿ ತಳಮಳಕ್ಕೆ ಕಾರಣವಾಗಿವೆ. ಈಗ ಚುನಾವಣಾ ಕಣ ರಂಗೇರುತ್ತಿದ್ದಂತೆ ಎಚ್ಚೆತ್ತಿರುವ ಕೈ ನಾಯಕರು, ಮುಸ್ಲಿಂ ಸಮುದಾಯದ ಪ್ರಬಲ ನಾಯಕ ಜಮೀರ್ ಅಹ್ಮದ್ ಖಾನ್ ಅವರನ್ನು ಕಲ್ಯಾಣದಲ್ಲೇ ಠಿಕಾಣಿ ಹೂಡಿಸಿ ಮತ ಕ್ರೋಡೀಕರಣದ ಜವಾಬ್ದಾರಿ ವಹಿಸಲಿದೆ.
ಅಲ್ಪಸಂಖ್ಯಾತರ ಮತಗಳೇ ಕಾಂಗ್ರೆಸ್ ಪಕ್ಷಕ್ಕೆ ಹಿಂದಿನಿಂದಲೂ ಸಾಂಪ್ರದಾಯಿಕ ವೋಟ್ ಬ್ಯಾಂಕ್. ಈ ಮತಗಳನ್ನು ಒಡೆದು ಚುನಾವಣೆ ಎದುರಿಸುವುದು ದಳದ ಉದ್ದೇಶ. ಇದರಿಂದ ಹಾನಿಯಾಗುವುದು ಕಾಂಗ್ರೆಸ್ ಪಡೆಗೆ. ಇದನ್ನರಿತಿರುವ ಕೈ ನಾಯಕರು, ನಿರ್ಣಾಯಕ ಪಾತ್ರ ವಹಿಸಲಿರುವ ಮತಗಳನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಲು ಸಿದ್ಧವಿಲ್ಲ. ಹಾಗಾಗಿ ಜಮೀರ್ ಅವರನ್ನು ಅಖಾಡಕ್ಕೆ ಇಳಿಸಿ, ಅಲ್ಪಸಂಖ್ಯಾತರ ಮತ ಸೆಳೆಯುವ ಪ್ರತಿತಂತ್ರ ಹೆಣೆಯುತ್ತಿದೆ.
ಕಾಂಗ್ರೆಸ್‌ನಲ್ಲಿದ್ದ ಯಸ್ರಬ್ ಅವರನ್ನು ಜೆಡಿಎಸ್ ಸೆಳೆದು ಚುನಾವಣೆ ಕಣಕ್ಕಿಳಿಸಿದೆ. ಈಗ ಕಾಂಗ್ರೆಸ್ ಸಹ ಹಿಂದೆ ಜೆಡಿಎಸ್‌ನಲ್ಲಿದ್ದ ಜಮೀರ್ ಖಾನ್ ಅವರನ್ನು ಅಸ್ತ್ರವಾಗಿ ಪ್ರಯೋಗಿಸಿ ಸಾಧ್ಯವಾದಷ್ಟು ಮುಸ್ಲಿಂ ಮತಗಳು “ಕೈ’ ಜಾರದಂತೆ ಪ್ಲಾನ್ ರೂಪಿಸಿದೆ. ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಸವಕಲ್ಯಾಣ ಕ್ಷೇತ್ರದ ಜವಾಬ್ದಾರಿ ವಹಿಸಿಕೊಳ್ಳಲು ಒಪ್ಪಿಗೆ ಸೂಚಿಸಿದ್ದು, ಶೀಘ್ರವೇ ಅಖಾಡಕ್ಕೆ ಇಳಿಯಲಿದ್ದಾರೆ ಎಂದು ತಿಳಿದು ಬಂದಿದೆ.
ಜಮೀರ್ ಆರ್ಥಿಕವಾಗಿ ಸದೃಢರಾಗಿ ರುವುದರಿಂದ ಕ್ಷೇತ್ರದಲ್ಲಿ ಸಂಪನ್ಮೂಲ ವಿನಿಯೋಗದ ಜತೆಗೆ ಚುನಾವಣೆ ಕಾರ್ಯತಂತ್ರ ರೂಪಿಸಲು ಮತ್ತು ರಾಜಕೀಯ ಒಳ ಸುಳಿಗಳನ್ನು ಅನುಷ್ಠಾನಕ್ಕೆ ತರಲು ಕಾಂಗ್ರೆಸ್‌ಗೆ ಸುಲಭವಾಗಬಹುದು. ಆದರೆ, ಕೈ ಪಡೆಯ ಕಾರ್ಯತಂತ್ರ ಎಷ್ಟರ ಮಟ್ಟಿಗೆ ಫಲ ಕೊಡಬಹುದು ಎಂಬುದನ್ನು ಕಾದು ನೊಡಬೇಕಷ್ಟೇ.
ಶಶಿಕಾಂತ ಬಂಬುಳಗೆ