ಇತ್ತೀಚೆಗಷ್ಟೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ”ಯುವರತ್ನ’ ಚಿತ್ರದ ಮೊದಲ ಹಾಡು “ಪವರ್ ಆಫ್ ಯೂಥ್…’ ಬಿಡುಗಡೆಯಾಗಿತ್ತು. ಮೊದಲ ಹಾಡಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕ ಬೆನ್ನಲ್ಲೇ ಚಿತ್ರತಂಡ ಇದೀಗ “ಯುವರತ್ನ’ನ ಎರಡನೇ ಹಾಡನ್ನು ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದೆ.
ಕಿಸ್‌ಮಸ್ ಹಬ್ಬದ ಸಂದರ್ಭದಲ್ಲಿ “ಯುವರತ್ನ’ ಚಿತ್ರದ ಎರಡನೇ ಹಾಡು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಡಿ. 25ರಂದು ಮಧ್ಯಾಹ್ನ12.05ಕ್ಕೆ ಚಿತ್ರದ “ನೀನಾದೆ ನಾ…’ ಸಾಲುಗಳಿಂದ ಪ್ರಾರಂಭವಾಗುವ ರೊಮ್ಯಾಂಟಿಕ್ ಹಾಡನ್ನು ಚಿತ್ರತಂಡ ಸೋಶಿಯಲ್ ಮೀಡಿಯಾ ಮೂಲಕ ಬಿಡುಗಡೆ ಮಾಡಲಿದೆ. ಇನ್ನು ಕನ್ನಡದ ಜೊತೆಗೆ ತೆಲುಗಿನಲ್ಲೂ ಈಹಾಡು ಬಿಡುಗಡೆಯಾಗುತ್ತಿದ್ದು, ಎಸ್. ಎಸ್ ತಮನ್ ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.
ಜ. 8ಕ್ಕೆ ಕೆಜಿಎಫ್-2 ಟೀಸರ್ ಗ್ಯಾರಂಟಿ :
ಬಹುನಿರೀಕ್ಷಿತ “ಕೆಜಿಎಫ್-2′ ಚಿತ್ರದ ಟೀಸರ್ ಬಿಗಡೆಗೆ ದಿನಾಂಕ ನಿಗಧಿಯಾಗಿದೆ. ನಿರೀಕ್ಷೆಯಂತೆ ಯಶ್ ಹುಟ್ಟುಹಬ್ಬಕ್ಕೆ ಟೀಸರ್ ರಿಲೀಸ್ ಆಗುತ್ತಿದೆ.
ನಿರ್ದೇಶಕ ಪ್ರಶಾಂತ್ ನೀಲ್ ಟ್ವಿಟ್ಟರ್‌ನಲ್ಲಿ ಈ ಸುದ್ದಿಯನ್ನು ಖಚಿತ ಪಡಿಸಿದ್ದಾರೆ. ಯಶ್ ಹುಟ್ಟುಹಬ್ಬ ದಿನವಾದ ಜನವರಿ 8ರಂದು ಬೆಳಗ್ಗೆ10.18ಕ್ಕೆ ಚಿತ್ರದ ಟೀಸರ್ ರಿಲೀಸ್ ಆಗುತ್ತಿದೆ ಎಂದಿರುವ ಪ್ರಶಾಂತ್ ನೀಲ್, ಟೀಸರ್ ರಿಲೀಸ್ ಡೇಟ್ ಜೊತೆಗೆ “ಕೆಜಿಎಫ್-2′ ಚಿತ್ರದ ಹೊಸ ಪೋಸ್ಟರ್‌ನ್ನು ಸಹ ಶೇರ್ ಮಾಡಿದ್ದಾರೆ.ಕೆಲ ದಿನಗಳ ಹಿಂದಷ್ಟೇ ನಿರ್ದೇಶಕ ಪ್ರಶಾಂತ್ ನೀಲ್ ಡಿ.21ಕ್ಕೆ “ಕೆಜಿಎಫ್-2′ ಸಿನಿಮಾದ ಬಗ್ಗೆ ಅಪ್‌ಡೇಟ್ ನೀಡುವುದಾಗಿ ಹೇಳಿದ್ದರು. ಅದರಂತೆ ಸೋಮವಾರ ಟ್ವಿಟ್ಟರ್ ಮೂಲಕ “ಕೆಜಿಎಫ್-2′ ಟೀಸರ್ ರಿಲೀಸ್ ಡೇಟ್ ಬಹಿರಂಗ ಪಡಿಸುವ ಮೂಲಕ ಖಚಿತಪಡಿಸಿದೆ.
ಪೆಟ್ರೋಮ್ಯಾಕ್ಸ್ ಸೆಟ್‌ನಲ್ಲಿ ಸಿಂಗ್‌ಬಾಬು :
ಸದ್ಯ ನೀನಾಸಂ ಸತೀಶ್ ಅಭಿನಯದ “ಪೆಟ್ರೋಮ್ಯಾಕ್ಸ್’ ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ಭರದಿಂದ ನಡೆಯುತ್ತಿದೆ. ಇದೇ ವೇಳೆ ಕನ್ನಡದ ಹಿರಿಯ ನಿರ್ದೇಶಕ ಎಸ್.ವಿ ರಾಜೇಂದ್ರ ಸಿಂಗ್ ಬಾಬು ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ಸೆಟ್‌ಗೆ ಭೇಟಿ ನೀಡಿದ್ದಾರೆ.
“ರಾಜವೀರ ಮದಕರಿ ನಾಯಕ’ಚಿತ್ರದ ಲೊಕೇಶನ್ ಹುಡುಕಾಟದಲ್ಲಿರುವ ನಿರ್ದೇಶಕ ಬಾಬು, ಅನಿರೀಕ್ಷಿತವಾಗಿ “ಪೆಟ್ರೋಮ್ಯಾಕ್ಸ್’ ಶೂಟಿಂಗ್ ಸೆಟ್‌ಗೆ ಭೇಟಿ ನೀಡಿದ್ದು, ಚಿತ್ರತಂಡದ ಜೊತೆ ಒಂದಷ್ಟು ಸಮಯಕಳೆದಿದ್ದಾರೆ. ಈ ವೇಳೆ “ಪೆಟ್ರೋಮ್ಯಾಕ್ಸ್’ ನಿರ್ದೇಶಕ ವಿಜಯ್ ಪ್ರಸಾದ್, ನಟ ಸತೀಶ್ ನೀನಾಸಂ, ನಟಿ ಕಾರುಣ್ಯ ರಾಮ್ ಸೇರಿದಂತೆ ಚಿತ್ರದಕೆಲವು ಕಲಾವಿದರು ಮತ್ತು ತಂತ್ರಜ್ಞರು ಭಾಗಿಯಾಗಿದ್ದರು.