ಹೊಸದಿಲ್ಲಿ : ಭಾರತೀಯ ಕ್ರಿಕೆಟ್‌ನ ಖ್ಯಾತ ಆಲ್ ರೌಂಡರ್ ಯುವರಾಜ್ ಸಿಂಗ್, ಆತನ ಸಹೋದರ ಜೋರಾವರ್ ಸಿಂಗ್ ಮತ್ತು ತಾಯಿ ಶಬ್ನಂ ಸಿಂಗ್ ವಿರುದ್ಧ ಜೋರಾವರ್ ಪತ್ನಿ ಹಾಗೂ ಬಿಗ್ ಬಾಸ್ 10ನೇ ಆವೃತ್ತಿಯ ಸ್ಪರ್ಧಿಯಾಗಿರುವ ಆಕಾಂಕ್ಷಾ ಸಿಂಗ್ ಕೌಟುಂಬಿಕ ಹಿಂಸೆಯ ಕೇಸನ್ನು ದಾಖಲಿಸಿದ್ದಾರೆ.
ಈ ಕೇಸಿನ ಮೊದಲ ವಿಚಾರಣೆಯನ್ನು ಇದೇ ಅ.21ಕ್ಕೆ ನಿಗದಿಸಲಾಗಿದೆ. ಈ ಕೇಸಿನ ಬಗ್ಗೆ ಯಾವುದೇ ಹೇಳಿಕೆಯನ್ನು ತಾನು ನೀಡೆನೆಂದು ಆಕಾಂಕ್ಷಾ ಹೇಳಿದ್ದಾರೆ. ಆದರೆ ಆಕೆಯ ವಕೀಲೆ ಸ್ವಾತಿ ಸಿಂಗ್, ಕೇಸು ದಾಖಲಾಗಿರುವುದನ್ನು ದೃಢೀಕರಿಸಿದ್ದಾರೆ.
ಕೇಸಿನ ಬಗ್ಗೆ ವಕೀಲೆ ಸ್ವಾತಿ ಸಿಂಗ್ ಹೀಗೆ ಹೇಳಿದ್ದಾರೆ :
“ಕೌಟುಂಬಿಕ ಹಿಂಸೆ ಎಂದರೆ ಕೇವಲ ದೈಹಿಕ ಹಿಂಸೆ ಎಂದು ಅರ್ಥ ಅಲ್ಲ. ಅದು ಮಾನಸಿಕ ಮತ್ತು ಹಣಕಾಸು ಹಿಂಸೆಯನ್ನು ಕೂಡ ಒಳಗೊಂಡಿರುತ್ತದೆ. ಇದಕ್ಕೆ ಯುವರಾಜ್ ಸಿಂಗ್ ಕೂಡ ಸಾಥ್ ನೀಡಿದ್ದಾರೆ. ಜೋರಾವರ್ ಮತ್ತು ಆತನ ತಾಯಿ ನನ್ನ ಕಕ್ಷಿದಾರಳಿಗೆ ಹಿಂಸೆ ಕೊಡುವಾಗ ಯುವರಾಜ್ ಮೂಕ ಪ್ರೇಕ್ಷಕನಾಗಿ ಉಳಿದಿದ್ದರು. ಹಾಗಾಗಿ ಅವರು ಕೂಡ ಹಿಂಸೆ ನೀಡಿದವರೇ ಆಗಿರುತ್ತಾರೆ’
“ಜೋರಾವರ್ ಮತ್ತು ಆತನ ತಾಯಿ ಆಕಾಂಕ್ಷಾಗೆ ಮಗುವನ್ನು ಪಡೆಯಬೇಕೆಂಬ ಒತ್ತಡ ಹೇರುತ್ತಿದ್ದರು. ಆ ಸಂದರ್ಭದಲ್ಲಿ ಯುವರಾಜ್ ಕೂಡ ಆಕಾಂಕ್ಷಾಗೆ ಮಗು ಪಡೆಯುವಂತೆ ಹೇಳುತ್ತಿದ್ದರು. ಯುವರಾಜ್ ತನ್ನ ಸಹೋದರ ಮತ್ತು ತಾಯಿಯ ಜತೆ ಸೇರಿಕೊಂಡು ಆಕಾಂಕ್ಷಾಗೆ ಹಿಂಸೆ ನೀಡಿರುತ್ತಾರೆ’.
ಯುವರಾಜ್ ಕುಟುಂಬದವರ ವಿರುದ್ಧ ಆಕಾಂಕ್ಷಾ ಗುರುಗ್ರಾಮ್ ನಲ್ಲಿ ಕೌಟುಂಬಿಕ ಹಿಂಸೆಯ ಕೇಸು ದಾಖಲಿಸಿದ್ದಾರೆ.