ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್ ಮತ್ತೂಮ್ಮೆ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
“ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ’ ಕ್ರಿಕೆಟ್ ಸರಣಿಗಾಗಿ ಪಂಜಾಬ್ ಹೆಸರಿಸಿರುವ 30 ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಯುವಿ ಹೆಸರು ಕೂಡ ಕಾಣಿಸಿಕೊಂಡಿದೆ. ಆದರೆ ಯುವರಾಜ್ ಆಡಲು ಬಿಸಿಸಿಐ ಅನುಮತಿ ಅಗತ್ಯವಾಗಿದೆ.
ಯುವಿ ಕಳೆದ ವರ್ಷ ಎಲ್ಲ ಮಾದರಿಯ ಕ್ರಿಕೆಟಿಗೆ ನಿವೃತ್ತಿ ಹೇಳಿದ್ದರು. ಆದರೆ ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್ ಯುವಿ ಬಳಿ ನಿವೃತ್ತಿ ವಾಪಸ್ ಪಡೆದು ರಾಜ್ಯ ತಂಡದ ಪರ ಕಣಕ್ಕಿಳಿಯಲು ಮನವಿ ಮಾಡಿಕೊಂಡಿತ್ತು. ಈ ಮನವಿಗೆ ಯುವರಾಜ್ ಸಮ್ಮತಿಸಿದ್ದು, ಮತ್ತೆ ದೇಶಿ ಕ್ರಿಕೆಟ್‌ನಲ್ಲಿ ಆಡಲು ಅನುಮತಿ ನೀಡುವಂತೆ ಕೋರಿ ಬಿಸಿಸಿಐಗೆ ಪತ್ರ ಬರೆದಿದ್ದಾರೆ.
ಕೇರಳ ತಂಡದಲ್ಲಿ ಶ್ರೀಶಾಂತ್
ತಿರುವನಂತಪುರ: ಭಾರತ ತಂಡದ ಮಾಜಿ ವೇಗಿ ಎಸ್. ಶ್ರೀಶಾಂತ್ “ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್ ಸರಣಿಗಾಗಿ ಕೇರಳ ಹೆಸರಿಸಿರುವ 26 ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿ ಶ್ರೀಶಾಂತ್ ಮೇಲಿನ 7 ವರ್ಷಗಳ ನಿಷೇಧ ಶಿಕ್ಷೆ ಕಳೆದ ಸೆಪ್ಟಂಬರ್‌ನಲ್ಲಿ ಅಂತ್ಯಗೊಂಡಿತ್ತು. ಈ ಹಿನ್ನೆಲೆಯಲ್ಲಿ ಶ್ರೀಶಾಂತ್‌ಗೆ ಮತ್ತೆ ಕ್ರಿಕೆಟ್‌ಗೆ ಮರಳುವ ಅವಕಾಶ ಲಭಿಸಿದೆ.