ಮಂಗಳೂರಿನಲ್ಲಿ 2004ರ ನವೆಂಬರ್‌ನಲ್ಲಿ ಮಣಿ ಕೃಷ್ಣಸ್ವಾಮಿ ಅಕಾಡಮಿ ಬಹಳ ಅದ್ದೂರಿಯಾಗಿ ಉದ್ಘಾಟನೆಗೊಂಡಿತ್ತು. ಮಣಿ ಕೃಷ್ಣ ಸ್ವಾಮಿಯವರು ಚೆನ್ನೈ ಮ್ಯೂಸಿಕ್ ಅಕಾಡಮಿಯಿಂದ ಸಂಗೀತ ಕಲಾನಿಧಿ, ತಿರುಪತಿ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್, ಭಾರತ ಸರಕಾರದಿಂದ ಪದ್ಮಶ್ರೀ ಹೀಗೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದ ಹಿರಿಯ ಸಾಂಪ್ರದಾಯಿಕ ಕರ್ನಾಟಕ ಸಂಗೀತ ಕಲಾವಿದೆ. ಪ್ರಾರ್ಥನಾ ಸಾಯಿನರಸಿಂಹನ್ ತನ್ನ 13ನೇ ವಯಸ್ಸಿನಲ್ಲಿ, 1996ರಿಂದ 2002ರವರೆಗೆ ಮಣಿ ಕೃಷ್ಣಸ್ವಾಮಿಯವರಲ್ಲಿ ಸಂಗೀತಾಭ್ಯಾಸ ಮಾಡಿದರು. ಮಣಿಯಮ್ಮ ವಿಧಿವಶರಾಗಿ ಎರಡು ವರುಷಗಳ ಬಳಿಕ ಮಣಿ ಕೃಷ್ಣಸ್ವಾಮಿ ಅಕಾಡಮಿಯನ್ನು ಹುಟ್ಟುಹಾಕಿ ಸಂಗೀತದ ಸರ್ವಾಂಗೀಣ ಪ್ರಗತಿಗೆ ಪೂರಕ ವಾತಾವರಣ ನಿರ್ಮಾಣ ಮಾಡುವಲ್ಲಿ ಉನ್ನತ ಮಟ್ಟದ ಹತ್ತು ಹಲವು ಹೆಜ್ಜೆಗಳನ್ನು ಇಡಲಾಯಿತು.
ಸಂಗೀತದ ಬಾಲಪಾಠದ ಧ್ವನಿ ಸುರುಳಿ ಬಿಡುಗಡೆ, ವಾರ್ಷಿಕ ಕ್ಯಾಲೆಂಡರ್, ಕರ್ನಾಟಕ-ಹಿಂದೂಸ್ಥಾನಿ ಸಂಗೀತ ಕಛೇರಿಗಳು, ಸ್ಮತಿರಂಜನಿ ಸ್ಮರಣ ಸಂಚಿಕೆ, ಹಿರಿಯ ಗುರುಗಳಿಂದ ಸಂಗೀತ ಕಾರ್ಯಾಗಾರ, ಸುಬ್ರಾಯ ಮಾಣಿ ಭಾಗವತರ ಸಂಸ್ಮರಣೆ, ಸಂಗೀತ ಕಛೇರಿಗಳ ಮೂಲಕ ಈಶ್ವರಯ್ಯ ಹಾಗೂ ರಂಜನಿ ಹುಟ್ಟುಹಬ್ಬದ ಆಚರಣೆ, ವಿಚಾರಗೋಷ್ಠಿಗಳು, ಪ್ರಶಸ್ತಿ ಪ್ರದಾನ, ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ಜತೆ ಸೇರಿ ಯಕ್ಷಗಾನ ಛಂದಸ್ಸಿನ ವೀಡಿಯೋ ದಾಖಲೀಕರಣ ಹೀಗೆ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಒಟ್ಟಿನಲ್ಲಿ ಜಿಲ್ಲೆಯ ಸಂಗೀತ ರಸಿಕರ ಕೇಳ್ಮೆಯ ಗುಣಮಟ್ಟವನ್ನು ಹೆಚ್ಚಿಸುವುದು, ಯುವ ಗಾಯಕರಿಗೆ ಒಳ್ಳೆಯ ಸಂಗೀತ ಶಿಕ್ಷಣ ನೀಡುವುದು, ಸಂಗೀತಕ್ಕೆ ಸಂಬಂಧಿಸಿ ಅಧ್ಯಯನ ಮತ್ತು ಸಂಶೋಧನೆ ಮುಂತಾದವನ್ನು ಅಕಾಡಮಿಯು ಕೈಗೆತ್ತಿಕೊಂಡಿದೆ.
2010ರಿಂದ ಪ್ರಾರಂಭಗೊಂಡ ರಾಗ ಸುಧಾರಸ ರಾಷ್ಟ್ರೀಯ ಸಂಗೀತೋತ್ಸವವು, ಮರುವರ್ಷದಿಂದ ವಿಶೇಷವಾಗಿ ಸಾಧನೆ ಮಾಡಿದ ಯುವ ಕಲಾವಿದರಿಗೆ ಯುವ ಕಲಾಮಣಿ ಪ್ರಶಸ್ತಿ ಪ್ರದಾನ ಮಾಡಲು ಪ್ರಾರಂಭಿಸಿತು. ಹಿರಿಯ ಸಂಗೀತ ವಿಮರ್ಶಕ ಎ. ಈಶ್ವರಯ್ಯ ಹಾಗೂ ಅವರ ತಂಡ ಈ ಪ್ರಶಸ್ತಿಗೆ ಕಲಾವಿದರನ್ನು ಆಯ್ಕೆ ಮಾಡಿಕೊಂಡು ಬರುತ್ತಿದೆ. ಪ್ರಶಸ್ತಿಯು ಇಪ್ಪತ್ತೈದು ಸಾವಿರ ರೂಪಾಯಿಗಳ ನಗದಿನೊಂದಿಗೆ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ಪ್ರಾರ್ಥನಾ ಸಾಯಿನರಸಿಂಹನ್, ಮೇಘನಾ ಮೂರ್ತಿ, ಎಂ. ಬಾಲಚಂದ್ರ ಪ್ರಭು, ತನ್ಮಯಿ ಕೃಷ್ಣಮೂರ್ತಿ, ದಿಲೀಪ್ ಕೆ. ಜೆ. ಇವರಿಗೆ ಈಗಾಗಲೇ ಪ್ರಶಸ್ತಿಗಳು ಸಂದಿವೆ.
ರಾಗ ಸುಧಾರಸ ರಾಷ್ಟ್ರೀಯ ಸಂಗೀತೋತ್ಸವ ನವೆಂಬರ್ 3, 4, 5ರಂದು ಮಂಗಳೂರಿನ ಪುರಭವನದಲ್ಲಿ ನಡೆಯುತ್ತಿದೆ. ಈ ಬಾರಿಯ ಯುವ ಕಲಾ ಮಣಿ ಪ್ರಶಸ್ತಿ ಪುತ್ತೂರಿನ ಯುವ ಮೃದಂಗವಾದಕ ನಿಕ್ಷಿತ್ ಟಿ. ಅವರಿಗೆ ಸಲ್ಲಲಿದೆ.
ಚಂದ್ರಶೇಖರ ಕಲ್ಲೂರಾಯ ಹಾಗೂ ಪುಷ್ಪಲತಾ ದಂಪತಿಯ ಪುತ್ರ ನಿಕ್ಷಿತ್, ಬಿ.ಬಿ.ಎಂ ಶಿಕ್ಷಣವನ್ನು ಮುಗಿಸಿ ಮೈಸೂರು ಮುಕ್ತ ವಿವಿಯಿಂದ ಬಿ.ಎಸ್‌ಸಿ ಪದವಿಯನ್ನು ಪಡೆದಿರುತ್ತಾರೆ. ನಾಲ್ಕನೇ ತರಗತಿಯಿಂದಲೇ ಪುತ್ತೂರಿನ ಕುಕ್ಕಿಲ ಶಂಕರ್ ಭಟ್ ಇವರಲ್ಲಿ ಗುರುಕುಲ ಪದ್ಧತಿಯಲ್ಲಿ ಮೃದಂಗ ತರಬೇತಿಯನ್ನು ಪಡೆದು ಕಳೆದ 9 ವರ್ಷಗಳಿಂದ ಮನ್ನಾರ್‌ಕೋಯಿಲ್ ಜೆ ಬಾಲಾಜಿ ಇವರಿಂದ ಶಿಕ್ಷಣವನ್ನು ಮುಂದುವರಿಸುತ್ತಿದ್ದಾರೆ. ಈಗಾಗಲೇ ವಿದ್ವಾಂಸರಾದ ತ್ರಿಶ್ಶೂರ್ ರಾಮಚಂದ್ರನ್, ನೀಲಾ ರಾಮ ಗೋಪಾಲ, ತ್ರಿಶ್ಶೂರ್ ಅನಂತ ಪದ್ಮನಾಭನ್, ಎಸ್. ಶಂಕರ್, ಒ. ಎಸ್. ತ್ಯಾಗರಾಜನ್, ಶೇರ್ತಲೈ ರಂಗನಾಥನ್ ಶರ್ಮ ಮುಂತಾದ ಕಲಾವಿದರಿಗೆ ಮೃದಂಗ ನುಡಿಸಿ ಮೆಚ್ಚುಗೆ ಪಡೆದಿರುತ್ತಾರೆ. ಪುತ್ತೂರಿನ ಮಹಾಬಲ ಲಲಿತ ಕಲಾ ಸಭಾದಲ್ಲಿ ಸಕ್ರಿಯ ಪದಾಧಿಕಾರಿಯಾಗಿ ತನ್ನಂತೆಯೇ ಹಲವಾರು ಕಲಾವಿದರಿಗೆ ವೇದಿಕೆಯನ್ನು ಒದಗಿಸಿಕೊಡುವ ಅಪರೂಪದ ಗುಣ ನಿಕ್ಷಿತ್ ಅವರಲ್ಲಿದೆ. ಇವರ ವಯಸ್ಸು ಕಿರಿದಾದರೂ ಕಠಿನ ಪರಿಶ್ರಮದಿಂದ ಸಾಧನೆ ಮಾಡಿ ಮುಂದೆ ಬಂದಿದ್ದಾರೆ.
ಇದೇ ಸಂದರ್ಭದಲ್ಲಿ ನಾದಸರಸ್ವತಿ ಸಂಗೀತ ವಿದ್ಯಾಲಯದ ಹಿರಿಯ ಗುರು ಸತ್ಯವತಿ ಮೂಡಂಬಡಿತ್ತಾಯ, ಕರ್ನಾಟಕ ಸರಕಾರದ ಕರ್ನಾಟಕ ಕಲಾಶ್ರೀ ವಿಶೇಷ ಗೌರವ ಪ್ರಶಸ್ತಿಗೆ ಆಯ್ಕೆಯಾಗಿರುವ ಶಾರದಾಮಣಿ ಶೇಖರ್, ಕಲೈಮಾಮಣಿ ರಮಾ ವೈದ್ಯನಾಥನ್ ಇವರ ಶಿಷ್ಯೆ, ಜಿಲ್ಲೆಯ ಕಲಾಸಕ್ತರಲ್ಲಿ ಭರವಸೆ ಮೂಡಿಸಿರುವ ಶುಭಾಮಣಿ ಶೇಖರ್, ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿರುವ ಯಕ್ಷಗಾನ ಕಲಾವಿದ ಶಿವರಾಮ ಜೋಗಿ, ನೃತ್ಯ ಗುರು ಉಳ್ಳಾಲ ಮೋಹನ ಕುಮಾರ್ ಇವರನ್ನು ಸಮ್ಮಾನಿಸಲಾಗುವುದು.
ಎ.ಡಿ. ಸುರೇಶ್