ವಾರ ವಾರ ಹೊಸ ಹೊಸ ಸಿನಿಮಾಗಳು ಬಿಡುಗಡೆಯಾದಂತೆ, ಆ ಚಿತ್ರಗಳ ಮೂಲಕ ಹೊಸ ಕಲಾವಿದರು ಚಿತ್ರರಂಗಕ್ಕೆ ಪರಿಚಯವಾಗುತ್ತಾರೆ. ಅದೃಷ್ಟವಿದ್ದವರು ಚಿತ್ರರಂಗದಲ್ಲಿ ನೆಲೆಕಂಡುಕೊಂಡು ಮುಂದೆ ಬೆಳೆಯುತ್ತಾರೆ ಕೂಡಾ. ಈಗ ಅದೇ ರೀತಿಯ ಕನಸಿನೊಂದಿಗೆ ಯುವ ಎಂಬ ಯುವನಟ ಎಂಟ್ರಿಕೊಡುತ್ತಿದ್ದಾರೆ. ಯಾರು ಈ ಯುವ ಎಂದರೆ “ನ್ಯೂರಾನ್’ ಸಿನಿಮಾ ಬಗ್ಗೆ ಹೇಳಬೇಕು.
ಕೆಲವು ತಿಂಗಳ ಹಿಂದೆ “ನ್ಯೂರಾನ್’ ಎಂಬ ಸಿನಿಮಾ ಸೆಟ್ಟೇರಿರೋದು ನಿಮಗೆ ನೆನಪಿರಬಹುದು. ಈಗ ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಈ ವಾರ (ನ.22)ಕ್ಕೆ ತೆರೆಕಾಣುತ್ತಿದೆ. ಈ ಚಿತ್ರದ ಮೂಲಕ ಯುವ ನಾಯಕ ನಟರಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ನಾಯಕ ಯುವ ಅವರಿಗೆ ಇದು ಮೊದಲ ಚಿತ್ರ. ಈ ಚಿತ್ರ ಮಾಡೋಕೆ ಕಾರಣ ಅವರ ಸಹೋದರ ಶ್ರೀನಿವಾಸ್ ಅಂತೆ. ಮೂರು ವರ್ಷಗಳ ಎಫರ್ಟ್ ಇದು.
ಸಿನಿಮಾ ಬಗ್ಗೆ ಮಾತನಾಡುವ ಯುವ, “ಸಿನಿಮಾ ಮಾಡುವ ಆಸೆಯಿಂದ ಎಲ್ಲವನ್ನೂ ಕಲಿತು ಬಂದಿದ್ದೇನೆ. ಈ ಕಥೆಯಲ್ಲಿ ಸಾಕಷ್ಟು ವಿಷಯಗಳಿವೆ. ಹೊಸತನವೂ ಇದೆ. ವತ್ತಿನ ಜನರೇಷನ್‌ಗೆ ಬೇಕಾದ ಅಂಶಗಳೊಂದಿಗೆ ಈ ಚಿತ್ರ ಮಾಡಿದ್ದೇನೆ. ಇಲ್ಲೂ ನ್ಯೂರಾನ್ ಹೈಲೈಟ್ ಆಗಿರಲಿದೆ. ಅದು ಹೇಗೆ ಎಂಬುದನ್ನು ಚಿತ್ರದಲ್ಲಿ ನೋಡಬೇಕು. ಮನುಷ್ಯನಿಗೆ ಬದುಕಲು ಏನು ಮುಖ್ಯ.
ಯಾವುದನ್ನು ಕಳೆದುಕೊಳ್ಳುತ್ತಿದ್ದಾನೆ ಎಂಬುದೇ ಚಿತ್ರದ ಕಥೆ’ ಎನ್ನುವುದು ಯುವ ಮಾತು. ಯುವ ಅವರಿಗೆ ನೇಹಾ ಪಾಟೀಲ್, ವೈಷ್ಣವಿ ಮೆನನ್ ಮತ್ತು ಶಿಲ್ಪಾ ಶೆಟ್ಟಿ ನಾಯಕಿಯರಾಗಿ ಜೋಡಿಯಾಗಿದ್ದಾರೆ. ಉಳಿದಂತೆ ಅರವಿಂದ್ ರಾವ್, ಜೈಜಗದೀಶ್, ಕಬೀರ್ ಸಿಂಗ್ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಈ ಚಿತ್ರವನ್ನು ವಿಕಾಸ್ ಪುಷ್ಪಗಿರಿ ನಿರ್ದೇಶಿಸಿದ್ದಾರೆ. “ನ್ಯೂರಾನ್’ ಚಿತ್ರದ ಹಾಡುಗಳಿಗೆ ಗುರುಕಿರಣ್ ಸಂಗೀತ ಸಂಯೋಜನೆಯಿದ್ದು, ಡಾ. ವಿ ನಾಗೇಂದ್ರ ಪ್ರಸಾದ್, ಕವಿರಾಜ್ ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ. ಚಿತ್ರಕ್ಕೆ ಶೋಯೆಬ್ ಅಹಮದ್ ಕೆ.ಎಂ ಛಾಯಾಗ್ರಹಣ, ಶ್ರೀಧರ್ ವೈ.ಎಸ್ ಸಂಕಲನವಿದೆ. ಫ್ರೆಂಡ್ಸ್ ಪ್ರೊಡಕ್ಷನ್ ಲಾಂಛನದಲ್ಲಿ ವಿನಯ್ ಕುಮಾರ್.ಆರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.