ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಶನಿವಾರ 39ನೇ ವರ್ಷಕ್ಕೆ ಕಾಲಿಟ್ಟರು. ಆದರೆ ಹುಟ್ಟುಹಬ್ಬದ ಯಾವುದೇ ಸಂಭ್ರಮ ಆಚರಿಸಿದೆ ಕೇಂದ್ರ ಸರಕಾರದ ವಿರುದ್ಧ ರೈತರು ನಡೆಸುತ್ತಿರುವ ಹೊರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಸಮಸ್ಯೆಗಳು ಶೀಘ್ರವಾಗಿ ಬಗೆಹರಿಯಲಿ ಎಂದು ಆಶಿಸಿದರು.
ರೈತರು ನಡೆಸುತ್ತಿರುವ ಹೋರಾಟಕ್ಕೆ ಯುವರಾಜ್ ಟ್ವಿಟರ್ ಮೂಲಕ ಬೆಂಬಲ ವ್ಯಕ್ತಪಡಿಸಿದರು. “ಹುಟ್ಟುಹಬ್ಬಗಳು ನಮ್ಮ ಬಯಕೆಗಳನ್ನು ಪೂರೈಸಿಕೊಳ್ಳಲು ಇರುವ ಅವಕಾಶ. ಈ ದಿನ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಸರಕಾರ ಮತ್ತು ರೈತರ ನಡುವೆ ನಡೆಯುತ್ತಿರುವ ಮಾತುಕತೆಗಳು ಶೀಘ್ರ ಪರಿಹಾರ ಕಾಣಲಿ. ನಿಸ್ಸಂದೇಹವಾಗಿ ರೈತರೇ ನಮ್ಮ ದೇಶದ ಜೀವನಾಡಿ. ಜೈ ಜವಾನ್, ಜೈ ಕಿಸಾನ್’ ಎಂದಿದ್ದಾರೆ.
ಇದೇ ವೇಳೆ ಕೊರೊನಾ ಬಗ್ಗೆ ಎಚ್ಚರದಿಂದಿರುವಂತೆ ಯುವರಾಜ್ ಸಿಂಗ್ ವಿನಂತಿಸಿಕೊಂಡರು. ಕೊರೊನಾ ಇನ್ನೂ ಸಂಪೂರ್ಣವಾಗಿ ತೊಲಗಿಲ್ಲ, ನಾವು ತೀವ್ರ ಎಚ್ಚರಿಕೆಯಿಂದ ಇದ್ದು, ಈ ಮಾರಿಯನ್ನು ಮಣಿಸಬೇಕಿದೆ ಎಂದರು.
ಕೃಷಿ ಮಸೂದೆಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರಿಗೆ ಬಾಕ್ಸರ್‌ಗಳು, ಹಾಕಿ ಆಟಗಾರರು ಸೇರಿದಂತೆ ಅನೇಕ ಕ್ರೀಡಾಪಟುಗಳು ಬೆಂಬಲ ಸೂಚಿಸಿದ್ದಾರೆ. ಆದರೆ ಕ್ರಿಕೆಟಿಗರಲ್ಲಿ ಬೆಂಬಲ ಸೂಚಿಸುತ್ತಿರುವವರಲ್ಲಿ ಯುವರಾಜ್ ಮೊದಲಿಗ.
ಮಾಜಿಗಳ ಹಾರೈಕೆ
ಭಾರತೀಯ ಕ್ರಿಕೆಟಿನ ಅಪ್ಪಟ ಹೋರಾಟಗಾರ, ಅವಳಿ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಅವರಿಗೆ ಮಾಜಿ ಸಹ ಆಟಗಾರರಾದ ತೆಂಡುಲ್ಕರ್, ಲಕ್ಷ್ಮಣ್, ಸೆಹವಾಗ್, ಗಂಭೀರ್ ಮೊದಲಾದವರೆಲ್ಲ ಶುಭ ಹಾರೈಸಿದ್ದಾರೆ.