Advertisement

ಮಯಾಮಿ: 2ನೇ ಸುತ್ತಿಗೇರಿದ ಯೂಕಿ ಭಾಂಬ್ರಿ

07:00 AM Mar 24, 2018 | Team Udayavani |

ಮಯಾಮಿ (ಫ್ಲೋರಿಡಾ): ತಮ್ಮ ಉತ್ತಮ ಫಾರ್ಮನ್ನು ಮುಂದುವರಿಸಿರುವ ಭಾರತದ ಸಿಂಗಲ್ಸ್‌ ಆಟಗಾರ ಯೂಕಿ ಭಾಂಬ್ರಿ “ಎಟಿಪಿ ಮಯಾಮಿ ಓಪನ್‌’ ಟೆನಿಸ್‌ ಪಂದ್ಯಾವಳಿಯ ದ್ವಿತೀಯ ಸುತ್ತನ್ನು ಪ್ರವೇಶಿಸಿದ್ದಾರೆ. ಅರ್ಹತಾ ಸುತ್ತಿನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಭಾಂಬ್ರಿ ಗುರುವಾರ ರಾತ್ರಿಯ ಮೊದಲ ಸುತ್ತಿನ ಪಂದ್ಯದಲ್ಲಿ, ತನಗಿಂತ 32 ರ್‍ಯಾಂಕಿಂಗ್‌ ಮೇಲಿರುವ ಬೋಸ್ನಿಯಾದ ಮಿರ್ಜಾ ಬಾಸಿಕ್‌ ಅವರನ್ನು ಒಂದು ಗಂಟೆ, 32 ನಿಮಿಷಗಳ ಕಾದಾಟದ ಬಳಿಕ 7-5, 6-3 ಅಂತರದಿಂದ ಮಣಿಸಿದರು. ಎಂದಿನಂತೆ ಪರಿಣಾಮಕಾರಿ ಸರ್ವ್‌ ಮೂಲಕ ಭಾಂಬ್ರಿ ಗಮನ ಸೆಳೆದರು. 

Advertisement

ಮೊದಲ ಸೆಟ್‌ನಲ್ಲಿ ಇಬ್ಬರದೂ ಸಮಬಲದ ಕಾದಾಟವಾಗಿತ್ತು. 4-4ರ ಸಮಬಲದ ಬಳಿಕ ಸುದೀರ್ಘ‌ 11ನೇ ಗೇಮ್‌ ವೇಳೆ ಬಾಸಿಕ್‌ ಅವರ ಸರ್ವ್‌  ಮುರಿಯುವಲ್ಲಿ ಯಶಸ್ವಿಯಾದ ಭಾಂಬ್ರಿಗೆ ಮೊದಲ ಸೆಟ್‌ ಒಲಿಯಿತು. 2ನೇ ಸೆಟ್‌ನಲ್ಲಿ 3-2ರ ಮುನ್ನಡೆಯಲ್ಲಿದ್ದಾಗ ಯೂಕಿ “ಇಂಜುರಿ ಟೈಮ್‌ಔಟ್‌’ ತೆಗೆದುಕೊಂಡರು. ಅನಂತರ ಸಂಪೂರ್ಣ ಮೇಲುಗೈ ಸಾಧಿಸಿದ ಭಾಂಬ್ರಿ ನೇರ ಸೆಟ್‌ಗಳ ಗೆಲುವು ಕಂಡರು.

ಯೂಕಿ ಭಾಂಬ್ರಿಗೆ 2ನೇ ಸುತ್ತಿನಲ್ಲಿ ಕಠಿನ ಸವಾಲು ಎದುರಾಗಲಿದೆ. ಇಲ್ಲಿ ಅವರು ವಿಶ್ವ ರ್‍ಯಾಂಕಿಂಗ್‌ನಲ್ಲಿ 11ನೇ ಸ್ಥಾನದಲ್ಲಿರುವ ಅಮೆರಿಕದ ಜಾಕ್‌ ಸಾಕ್‌ ವಿರುದ್ಧ ಸೆಣಸಬೇಕಿದೆ. ಇವರಿಬ್ಬರು 2013ರ ಚಾಲೆಂಜರ್‌ ಸರಣಿಯಲ್ಲೊಮ್ಮೆ ಮುಖಾ ಮುಖೀಯಾಗಿದ್ದರು. ಇದರಲ್ಲಿ ಯೂಕಿ ಭಾಂಬ್ರಿ ಜಯ ಸಾಧಿಸಿದ್ದನ್ನು ನೆನಪಿಸಿಕೊಳ್ಳಬಹುದು. 

ಸೋಲಿನಿಂದ ಪಾರಾದ ಹಾಲೆಪ್‌
ವನಿತಾ ಸಿಂಗಲ್ಸ್‌ನಲ್ಲಿ ವಿಶ್ವದ ನಂ. 1 ಆಟಗಾರ್ತಿ ರೊಮೇನಿಯಾದ ಸಿಮೋನಾ ಹಾಲೆಪ್‌ ಫ್ರಾನ್ಸ್‌ನ ಓಸಿಯಾನೆ ಡೊಡಿನ್‌ ವಿರುದ್ಧ ಸ್ವಲ್ಪದರಲ್ಲೇ ಸೋಲಿನಿಂದ ಪಾರಾದರು. ದ್ವಿತೀಯ ಸುತ್ತಿನ ಪಂದ್ಯವನ್ನು ಹಾಲೆಪ್‌ 3-6, 6-3, 7-5ರಿಂದ ಗೆದ್ದು ನಿಟ್ಟುಸಿರೆಳೆದರು.

ಹಾಲೆಪ್‌ ಅವರಿನ್ನು ಪೋಲೆಂಡಿನ ಅಗ್ನಿಸ್ಕಾ 
ರಾದ್ವಂಸ್ಕಾ ವಿರುದ್ಧ ಸೆಣಸಲಿರುವರು. ರಾದ್ವಂಸ್ಕಾ ಬೆಲ್ಜಿಯಂನ ಅಲಿಸನ್‌ ವಾನ್‌ ವಿವಾಂಕ್‌ ವಿರುದ್ಧ 6-3, 7-6 (4) ಜಯ ಒಲಿಸಿಕೊಂಡರು. ದಿನದ ಇನ್ನೊಂದು ಪಂದ್ಯದಲ್ಲಿ 10ನೇ ಶ್ರೇಯಾಂಕದ ಆ್ಯಂಜೆಲಿಕ್‌ ಕೆರ್ಬರ್‌ 6-2, 6-2ರಿಂದ ಸ್ವೀಡನ್ನಿನ ಜೊಹಾನ್ನಾ ಲಾರ್ಸನ್‌ಗೆ ಸೋಲುಣಿಸಿದರು. ಕೆರ್ಬರ್‌ ಇನ್ನು ರಶ್ಯದ ಅನಾಸ್ತಾಸಿಯಾ ಪಾವುÉಚೆಂಕೋವಾ ವಿರುದ್ಧ ಆಡಲಿದ್ದಾರೆ.

Advertisement

5ನೇ ಶ್ರೇಯಾಂಕದ ಜೆಕ್‌ ಆಟಗಾರ್ತಿ ಕ್ಯಾರೋಲಿನಾ ಪ್ಲಿಸ್ಕೋವಾ ಭಾರೀ ಹೋರಾಟದ ಬಳಿಕ ರಶ್ಯದ ಎಕತೆರಿನಾ ಮಕರೋವಾ ಅವರನ್ನು 7-5, 7-5ರಿಂದ ಮಣಿಸಿದರೆ, ಜರ್ಮನಿಯ ಶ್ರೇಯಾಂಕ ರಹಿತ ಆಟಗಾರ್ತಿ ಕರಿನಾ ವಿಥೋಫ್ ತನ್ನದೇ ದೇಶದ 12ನೇ ಶ್ರೇಯಾಂಕಿತ ಆಟಗಾರ್ತಿ ಜೂಲಿಯಾ ಜಾರ್ಜಸ್‌ ಅವರನ್ನು 7-6 (2), 4-6, 6-4ರಿಂದ ಮಣಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next